ಚಿಕ್ಕಬಳ್ಳಾಪುರ: ಹಾಡಹಗಲೇ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಕಳ್ಳರು - House Theft
Published : Sep 17, 2024, 9:07 AM IST
ಚಿಂತಾಮಣಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದೊಯ್ದಿರುವ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾಯನಹಳ್ಳಿ ಗೇಟ್ ಬಳಿ ಸೋಮವಾರ ನಡೆದಿದೆ.
ಕೃಷ್ಣಾರೆಡ್ಡಿ ಎಂಬವರು ತಮ್ಮ ಕುಟುಂಬದೊಂದಿಗೆ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಸ್ವಂತ ತೋಟದಲ್ಲಿ ವ್ಯವಸಾಯ ಮಾಡಲು ಹೋಗಿದ್ದರು. ಈ ವೇಳೆ ಮಧ್ಯಾಹ್ನ ಸುಮಾರು ಒಂದರಿಂದ ಎರಡು ಗಂಟೆ ಹೊತ್ತಿಗೆ ಮನೆಗೆ ನುಗ್ಗಿದ ಕಳ್ಳರು ಎರಡು ಲಕ್ಷ ನಗದು ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಕೃಷ್ಣಾರೆಡ್ಡಿ ಕುಟುಂಬದವರು ತೋಟದಲ್ಲಿ ಕೆಲಸ ಮುಗಿಸಿ ಬಂದಾಗ ಕಳ್ಳತನವಾಗಿರುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಕಣ್ಣೀರು ಹಾಕಿದ್ದು, "ಹೊಟ್ಟೆ-ಬಟ್ಟೆ ಕಟ್ಟಿ ದುಡಿದ ಹಣದಲ್ಲಿ ಅಲ್ಪಸ್ವಲ್ಪ ಖರೀದಿಸಿದ್ದು, ಈಗ ಅದೆಲ್ಲವೂ ಕಳ್ಳರ ಪಾಲಾಗಿದೆ. ಆದಷ್ಟು ಬೇಗ ಪೊಲೀಸರು ಕಳ್ಳರನ್ನು ಬಂಧಿಸಿ ನಮ್ಮ ಹಣ, ಚಿನ್ನಾಭರಣವನ್ನು ಕೊಡಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ವಿಷಯ ತಿಳಿದ ತಕ್ಷಣ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಕುಮಾರ್, ಬೆರಳಚ್ಚು ತಜ್ಞರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ನೋಡಿ: ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳ: ಹಳೇ ಸ್ಕೂಟರ್ ಬಿಡಿ ಭಾಗ ಕಳ್ಳತನ, ಒಂದೇ ತಿಂಗಳಲ್ಲಿ ಎರಡು ಸಲ ಕೃತ್ಯ! - Scooter Spare Parts Theft