LIVE: 78ನೇ ಸ್ವಾತಂತ್ರ್ಯೋತ್ಸವ: ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ - 78th Independence Day
Published : Aug 15, 2024, 7:24 AM IST
ನವದೆಹಲಿ: ದೇಶದಲ್ಲಿಂದು ತನ್ನ 78ನೇ ಸ್ವಾತಂತ್ರ್ಯ ದಿನದ ಸಂಭ್ರಮ ಮನೆಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿನ ಐತಿಹಾಸಿಕ ಕೆಂಪು ಕೋಟೆಯು ಪ್ರಮುಖ ಸಮಾರಂಭಕ್ಕಾಗಿ ಅಲಂಕೃತಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜಾರೋಹಣ ಮಾಡುತ್ತಿದ್ದಾರೆ. ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಸತತ 11ನೇ ಭಾಷಣ ಮಾಡುತ್ತಿದ್ದಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆಯ ಥೀಮ್ 'ವಿಕಸಿತ್ ಭಾರತ್ @ 2047' ಆಗಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶವನ್ನು ಮುನ್ನಡೆಸುವ ಗುರಿ ಹೊಂದಲಾಗಿದೆ. ಪ್ರಧಾನಿ ಮೋದಿಯವರನ್ನು ಹಿರಿಯ ಸರ್ಕಾರ ಮತ್ತು ಸೇನಾ ಅಧಿಕಾರಿಗಳು ಬರಮಾಡಿಕೊಳ್ಳುವುದರೊಂದಿಗೆ ಸಮಾರಂಭ ಪ್ರಾರಂಭವಾಗಿದೆ. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ಈ ವರ್ಷ ಭಾರತೀಯ ನೌಕಾಪಡೆಯು ಇದರ ನೇತೃತ್ವ ವಹಿಸಿದೆ. ಪ್ರಧಾನಿ ಮೋದಿಯವರ ಕರೆ ಮೇರೆಗೆ ಈ ಸಲವೂ ಕೂಡ ಹರ್ ಘರ್ ತಿರಂಗ ಅಭಿಯಾನ ನಡೆದಿದೆ. ನಾಗರಿಕರಲ್ಲಿ ದೇಶಭಕ್ತಿಯ ಮನೋಭಾವವನ್ನು ತುಂಬುವಲ್ಲಿ ಯಶಸ್ವಿಯಾಗಿದೆ. ಸ್ವಾತಂತ್ರ್ಯ ಸ್ವಾತಂತ್ರ್ಯೋತ್ಸವ ಆಚರಣೆಗೆ ಎಲ್ಲ ಭಾರತೀಯರು 'ಹರ್ ಘರ್ ತಿರಂಗ' ಅಭಿಯಾನದಲ್ಲಿ ಭಾಗವಹಿಸುವಂತೆ ಜುಲೈ 28ರಂದು ನಡೆದ 112ನೇ 'ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ ಮನವಿ ಮಾಡಿದ್ದರು.