Tesla Showroom In India: ಟೆಸ್ಲಾ ಭಾರತ ಪ್ರವೇಶಿಸುತ್ತಿದೆ. ಇದು ಕೇವಲ ಒಂದು ಕಂಪನಿಯ ಆಗಮನವಲ್ಲ, ಬದಲಾಗಿ ಒಂದು ತಾಂತ್ರಿಕ ಕ್ರಾಂತಿಯ ಆಗಮನ. ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕನೆಂದೇ ಗುರುತಿಸಲ್ಪಟ್ಟ ಟೆಸ್ಲಾ, ಅನೇಕ ದೇಶಗಳಲ್ಲಿ ತನ್ನ ಪ್ರಾಬಲ್ಯ ಪ್ರತಿಪಾದಿಸಿದ ನಂತರ ಭಾರತದ ಮಾರುಕಟ್ಟೆಯ ಮೇಲೆ ದೃಷ್ಟಿ ನೆಟ್ಟಿದೆ.
ದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಟೆಸ್ಲಾ ಈಗಾಗಲೇ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ಮುಂಬೈ, ದೆಹಲಿಯಂಥ ಮೆಟ್ರೋ ನಗರಗಳಲ್ಲಿ ಮೊದಲ ಶೋರೂಂಗಳನ್ನು ಸ್ಥಾಪಿಸುವ ಯೋಜನೆ ಜಾರಿಯಲ್ಲಿದೆ.
ಇತ್ತೀಚೆಗೆ ಟೆಸ್ಲಾ ತನ್ನ ಮೊದಲ ಅಧಿಕೃತ ಶೋರೂಂ ಅನ್ನು ಮುಂಬೈನಲ್ಲಿ ತೆರೆಯುವುದಾಗಿ ಘೋಷಿಸಿದೆ. ಭಾರತೀಯ ಗ್ರಾಹಕರು ಟೆಸ್ಲಾ ಕಾರುಗಳನ್ನು ನೋಡಲು ಮತ್ತು ಅನುಭವಿಸಲು ಇದು ಉತ್ತಮ ಅವಕಾಶವಾಗಲಿದೆ. ಈ ಶೋರೂಂ ಕಾರುಗಳನ್ನು ಪ್ರದರ್ಶಿಸುವುದಲ್ಲದೆ ಟೆಸ್ಲಾ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುತ್ತದೆ. ಭಾರತದಂತಹ ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ದೇಶದಲ್ಲಿ ಎಲೆಕ್ಟ್ರಿಕ್‌ಚಾಲಿತ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡೇ ಟೆಸ್ಲಾ ತನ್ನ ವ್ಯವಹಾರ ತಂತ್ರವನ್ನು ಬಹಳ ಎಚ್ಚರಿಕೆಯಿಂದ ಸಿದ್ಧಪಡಿಸುತ್ತಿದೆ. ಸರ್ಕಾರದ ಪ್ರೋತ್ಸಾಹ, ತಂತ್ರಜ್ಞಾನ ಸ್ವೀಕಾರ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಬದಲಾಗುತ್ತಿರುವ ಸಾರ್ವಜನಿಕ ಅಭಿಪ್ರಾಯ ಸೇರಿದಂತೆ ಇವೆಲ್ಲವೂ ಒಟ್ಟಾಗಿ ಟೆಸ್ಲಾ, ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ಸುಳಿವು ನೀಡುತ್ತಿದೆ.
ಟೆಸ್ಲಾ ಆಗಮನ ಕೇವಲ ಒಂದು ಕಂಪನಿಯ ವ್ಯವಹಾರವಾಗಿ ವಿಸ್ತರಣೆಯಾಗುತ್ತಿಲ್ಲ. ಇದು ಭಾರತದಲ್ಲಿ ಆಟೋಮೊಬೈಲ್ ವಲಯಕ್ಕೆ ಅದ್ರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಒಂದು ಮೈಲಿಗಲ್ಲಾಗಲಿದೆ. ವಿಶ್ವದ ಎಲೆಕ್ಟ್ರಿಕ್ ವಾಹನ ತಯಾರಕರಲ್ಲಿ ಒಂದಾದ ಟೆಸ್ಲಾ, ಈಗಾಗಲೇ ಅಮೆರಿಕ ಮತ್ತು ಚೀನಾದಂತಹ ದೇಶಗಳಲ್ಲಿ ತನ್ನ ಆಧುನಿಕ ಕಾರ್ಖಾನೆಗಳೊಂದಿಗೆ ಲಕ್ಷಾಂತರ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಲಕ್ಷಾಂತರ ಗ್ರಾಹಕರ ಹೃದಯಗಳನ್ನೂ ಗೆದ್ದಿರುವ ಈ ಬ್ರ್ಯಾಂಡ್ ಈಗ ಭಾರತೀಯ ಮಾರುಕಟ್ಟೆಯತ್ತ ಗಮನ ಹರಿಸುತ್ತಿದೆ.
ವಿಶ್ವದ ಮೂರನೇ ಅತಿದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಾಗಿ ಹೊರಹೊಮ್ಮಿರುವ ಭಾರತ ಟೆಸ್ಲಾಗೆ ಉತ್ತಮ ವ್ಯಾಪಾರ ಅವಕಾಶಗಳನ್ನು ಹೊಂದಿರುವ ವೇದಿಕೆಯಾಗುತ್ತಿದೆ. ಇದು ಹೊಸದಲ್ಲ. ಕೆಲವು ವರ್ಷಗಳ ಹಿಂದೆಯೇ ಟೆಸ್ಲಾ ಭಾರತ ಪ್ರವೇಶಿಸಲು ಆಸಕ್ತಿ ತೋರಿಸಿತ್ತು. ಆದರೆ ಆ ವೇಳೆಯಲ್ಲಿದ್ದ ಹೆಚ್ಚಿನ ಆಮದು ಸುಂಕಗಳು ಕಂಪನಿಯ ಯೋಜನೆಗಳಿಗೆ ಪ್ರಮುಖ ಅಡಚಣೆಯಾಯಿತು. ಪರಿಣಾಮ, ಭಾರತದಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ಉತ್ಸಾಹ ಕೊಂಚ ಕಡಿಮೆಯಾಯಿತು.
ಆದರೆ ಈಗ ಪರಿಸ್ಥಿತಿಗಳು ಬದಲಾಗಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಪ್ರಮುಖ ನಿರ್ಧಾರವು ಇವಿ ಉದ್ಯಮದಲ್ಲಿ ಪ್ರಮುಖ ತಿರುವು ಪಡೆದುಕೊಂಡಿದೆ. ಸರ್ಕಾರ ಪರಿಚಯಿಸಿದ ಹೊಸ ನೀತಿಯ ಪ್ರಕಾರ, ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಒಪ್ಪುವ ವಿದೇಶಿ ಕಂಪನಿಗಳು ಕಡಿಮೆ ಆಮದು ಸುಂಕದಲ್ಲಿ ಸೀಮಿತ ಸಂಖ್ಯೆಯ ವಾಹನಗಳನ್ನು ದೇಶಕ್ಕೆ ತರಲು ಅನುಮತಿಸಲಾಗುವುದು. ಈ ಯೋಜನೆಯನ್ನು ಅನುಸರಿಸಿ ಟೆಸ್ಲಾ ಮತ್ತೊಮ್ಮೆ ತನ್ನ ಕಾರ್ಯತಂತ್ರಗಳನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿದೆ.
ಶೋರೂಂಗಳು ತೆರೆದ ನಂತರ ಭಾರತೀಯ ಗ್ರಾಹಕರು ಮೊದಲ ಬಾರಿಗೆ ಟೆಸ್ಲಾ ವಾಹನಗಳನ್ನು ನೇರವಾಗಿ ನೋಡಲು ಮತ್ತು ಅನುಭವಿಸಲು ಸಾಧ್ಯವಾಗುತ್ತದೆ. ಮುಂಬೈ ನಂತರ, ದೆಹಲಿಯಲ್ಲಿ ಎರಡನೇ ಶೋರೂಂ ತೆರೆಯುವ ನಿರೀಕ್ಷೆಯಿದೆ. ಕೆಲವು ವಾರಗಳ ಹಿಂದೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿಟ್ಟಿನಲ್ಲಿ ಟೆಸ್ಲಾ ತೆಗೆದುಕೊಂಡ ಮತ್ತೊಂದು ಪ್ರಮುಖ ಹೆಜ್ಜೆ ನೇಮಕಾತಿ ಜಾಹೀರಾತಿನ ರೂಪದಲ್ಲಿ ಬಂದಿತು.
ಮುಂಬೈನಲ್ಲಿ ಮೊದಲ ಶೋರೂಂ ಜುಲೈನಲ್ಲಿ ಆರಂಭ: ಈ ಪ್ರಕಟಣೆಯೊಂದಿಗೆ ಬಂದ ಮಾಹಿತಿಯ ಪ್ರಕಾರ, ಕಂಪನಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂಬ ಸಂಕೇತಗಳನ್ನು ನೀಡಿದೆ. ಇತ್ತೀಚಿನ ವರದಿಗಳ ಪ್ರಕಾರ, ಟೆಸ್ಲಾ ಈ ವರ್ಷದ ಜುಲೈನಲ್ಲಿ ಮುಂಬೈನಲ್ಲಿ ತನ್ನ ಮೊದಲ ಶೋ ರೂಂ ತೆರೆಯಲು ಸಿದ್ಧತೆ ನಡೆಸುತ್ತಿದೆ. ಮುಂಬೈ ನಂತರ, ಟೆಸ್ಲಾ ದೆಹಲಿಯಲ್ಲಿ ಎರಡನೇ ಶೋ ರೂಂ ಸ್ಥಾಪಿಸಲು ಯೋಜಿಸುತ್ತಿದೆ. ಟೆಸ್ಲಾ ನಂತರ ದೇಶದ ಇತರ ಪ್ರಮುಖ ನಗರಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಗುರಿ ಹೊಂದಿದೆ.
ಇದನ್ನೂ ಓದಿ: ಗೇರ್ ಬದಲಾಯಿಸುವ ಅಗತ್ಯವೇ ಬೇಡ!; ಇಲ್ಲಿವೆ 8 ಲಕ್ಷದೊಳಗಿನ ಆಟೋಮ್ಯಾಟಿಕ್ ಟಾಪ್ ಕಾರ್ಗಳು!!