Royal Enfield Hunter 350: ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದೆ. ಕಾಲ ಬದಲಾದರೂ, ತಲೆಮಾರುಗಳು ಬದಲಾದರೂ, ಈ ಬ್ರ್ಯಾಂಡ್ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಅಷ್ಟೇ ಅಲ್ಲ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ರಾಯಲ್ ಎನ್‌ಫೀಲ್ಡ್ ಹಳೆಯ ಮತ್ತು ಹೊಸದನ್ನು ಜೋಡಿಸುವ ಆಕರ್ಷಕ ವಿನ್ಯಾಸಗಳೊಂದಿಗೆ ಹಲವಾರು ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ವಿಶಿಷ್ಟ ಗುರುತನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ.
ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ಬ್ರ್ಯಾಂಡ್ ಬಿಡುಗಡೆ ಮಾಡುವ ಬೈಕ್‌ಗಳನ್ನು ಇಷ್ಟಪಡುತ್ತಾರೆ. ಕಂಪನಿಯು ತನ್ನ ಗ್ರಾಹಕರಿಗಾಗಿ ಹೊಸ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ ಮಾದರಿಯನ್ನು 'ಹಂಟರ್ 350' ಎಂದು ಕರೆಯಲಾಗುತ್ತದೆ. ಹಂಟರ್‌ಹುಡ್ ಉತ್ಸವದಲ್ಲಿ ಹೊಸ ಹಂಟರ್ 350 ಅನ್ನು ಪರಿಚಯಿಸುವ ಮೂಲಕ ರಾಯಲ್ ಎನ್‌ಫೀಲ್ಡ್ ಬುಲೆಟ್ ಪ್ರಿಯರಿಗೆ ಒಳ್ಳೆಯ ಸುದ್ದಿಯನ್ನು ತಂದಿದೆ. ಈಗಾಗಲೇ ಯುವಕರ ಹೃದಯ ಗೆದ್ದಿರುವ ಹಂಟರ್ ಈಗ ಇನ್ನಷ್ಟು ಆಕರ್ಷಕ ರೂಪದಲ್ಲಿ ನಮ್ಮ ಮುಂದೆ ಬರುತ್ತಿದೆ.
ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಹಂಟರ್ 350 ಹೆಚ್ಚು ಸ್ಟೈಲಿಶ್ ಮತ್ತು ಸ್ಪೋರ್ಟಿಯಾಗಿದೆ. ಕೇವಲ ನೋಟದಲ್ಲಿ ಮಾತ್ರವಲ್ಲ, ಈ ಬಾರಿ ಪರ್ಫಾರ್ಮೆನ್ಸ್ ದೃಷ್ಟಿಯಿಂದಲೂ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಇದಕ್ಕೆ ಉತ್ತಮ ಸಸ್ಪೆನ್ಷನ್ ಸೆಟ್ಟಿಂಗ್ಸ್ ಮತ್ತು ಆಧುನಿಕ ಟೆಕ್ನಾಲಾಜಿ ಟಚ್ ನೀಡಲಾಗಿದೆ. ಈ ಬಾರಿ ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಹಂಟರ್ ಅನ್ನು ಹೆಚ್ಚು ಆಕರ್ಷಕ ಬಣ್ಣಗಳಲ್ಲಿ ನೀಡಿದೆ. ಹೊಸ ಗ್ರಾಫಿಕ್ಸ್ ಡಿಸೈನ್ ಎಲ್ಲರ ಕಣ್ಣುಗಳನ್ನು ಸೆಳೆಯುತ್ತಿದೆ.
ಹಂಟರ್ 350 ಕಲರ್ ಆಪ್ಶನ್: ಡ್ಯಾಪರ್ ಗ್ರೀನ್, ಫ್ಯಾಕ್ಟರಿ ಬ್ಲಾಕ್, ಡ್ಯಾಪರ್ ವೈಟ್, ರೆಬೆಲ್ ಬ್ಲಾಕ್, ಡ್ಯಾಪರ್ ಗ್ರೇ, ರೆಬೆಲ್ ಬ್ಲೂ ಮತ್ತು ರೆಬೆಲ್ ರೆಡ್ ಎಂಬ ಕಲರ್ ಆಪ್ಸನ್ ಗಳಲ್ಲಿ ಹಂಟರ್ ಲಭ್ಯವಿದೆ. ಹಳೆಯ ಮಾದರಿಗಳನ್ನು ಗಮನಿಸಿದವರೂ ಸಹ ಹೊಸ ಹಂಟರ್ 350 ನಲ್ಲಿನ ಬದಲಾವಣೆಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಹೊಸ ರೌಂಡ್ ಆಕಾರದ LED ಹೆಡ್‌ಲ್ಯಾಂಪ್ ಬೈಕ್‌ನ ಮುಂಭಾಗದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಇದು ಬೈಕ್‌ಗೆ ಸ್ಟೈಲಿಶ್ ಲುಕ್ ನೀಡುತ್ತದೆ.
ಈ ಹೊಸ ಮಾದರಿಯಲ್ಲಿ ಗ್ರೌಂಡ್ ಕ್ಲಿಯರೆನ್ಸ್‌ನಲ್ಲಿನ ಸ್ವಲ್ಪ ಹೆಚ್ಚಳವು ವಿವಿಧ ರಸ್ತೆಗಳಲ್ಲಿ ಹೆಚ್ಚು ಆತ್ಮವಿಶ್ವಾಸದ ಸವಾರಿಗೆ ಅನುವು ಮಾಡಿಕೊಡುತ್ತದೆ. ಇನ್ನು ಇದರ ಸೀಟ್ ಅನ್ನು ಹೆಚ್ಚು ನೈಸರ್ಗಿಕ ಮತ್ತು ಆರಾಮದಾಯಕವಾಗಿಸಲಾಗಿದೆ, ಅಂದರೆ ದೀರ್ಘ ಪ್ರಯಾಣದ ಸಮಯದಲ್ಲಿ ಸವಾರನ ದಣಿವನ್ನು ಕಡಿಮೆ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಬೈಕ್ ಪ್ರವಾಸಗಳನ್ನು ಯೋಜಿಸುತ್ತಿರುವುದರಿಂದ, ಅವರು ಈ ಮಾದರಿಯನ್ನು ಸುಲಭವಾಗಿ ಖರೀದಿಸಬಹುದಾಗಿದೆ.
ಸಸ್ಪೆನ್ಷನ್ ವ್ಯವಸ್ಥೆಯನ್ನು ಸಹ ಹೊಸದಾಗಿ ಅಪ್ಡೇಟ್ ಮಾಡಲಾಗಿದೆ. ಇದರೊಂದಿಗೆ ನೀವು ಯಾವುದೇ ತೊಂದರೆಯಿಲ್ಲದೆ ಎಲ್ಲಾ ರೀತಿಯ ರಸ್ತೆಗಳಲ್ಲಿ ಪ್ರಯಾಣಿಸಬಹುದು. ಇನ್ನೊಂದು ವಿಷಯವೆಂದರೆ 350 ಸಿಸಿ ವಿಭಾಗದಲ್ಲಿ ಸ್ಲಿಪ್-ಅಸಿಸ್ಟ್ ಕ್ಲಚ್ ಪಡೆದ ಮೊದಲ ರಾಯಲ್ ಎನ್‌ಫೀಲ್ಡ್ ಮಾದರಿ ಇದಾಗಿದೆ. ಇದು ಗೇರ್‌ಗಳನ್ನು ಬದಲಾಯಿಸುವುದನ್ನು ಸುಲಭಗೊಳಿಸುತ್ತದೆ. ಟ್ರಾಫಿಕ್‌ನಲ್ಲಿ ಚಾಲನೆ ಮಾಡುವಾಗ ಒತ್ತಡ ಕಡಿಮೆ ಇರುತ್ತದೆ. ಬೈಕ್ ಸವಾರರಿಗೆ ಉಪಯುಕ್ತವಾಗುವಂತೆ ಮಾಡಲು ಅಡ್ವಾನ್ಸ್ಡ್ ಫೀಚರ್ಸ್ ಅನ್ನು ಒದಗಿಸಲಾಗಿದೆ.
ಈ ಬೈಕ್ ರಾತ್ರಿ ಸವಾರಿಗಳಲ್ಲಿ ಸ್ಪಷ್ಟ ಗೋಚರತೆಗಾಗಿ LED ಹೆಡ್‌ಲ್ಯಾಂಪ್, ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಮತ್ತು ಪ್ರಯಾಣದಲ್ಲಿರುವಾಗ ಫೋನ್‌ಗಳನ್ನು ಚಾರ್ಜ್ ಮಾಡಲು ಟೈಪ್-ಸಿ USB ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒಳಗೊಂಡಿದೆ. ಇದು ತನ್ನ ಹಳೆಯ ಮಾದರಿಯಂತೆಯೇ 349 ಸಿಸಿ ಸಿಂಗಲ್-ಸಿಲಿಂಡರ್ ಏರ್, ಆಯಿಲ್-ಕೂಲ್ಡ್ OHC ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ನಲ್ಲಿ ಚಲಿಸುತ್ತದೆ. ಇದು ಗರಿಷ್ಠ 20.2 ಬಿಎಚ್‌ಪಿ ಪವರ್ ಮತ್ತು 27 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಈ ಪವರ್ ಫುಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ಇಂಧನ ಟ್ಯಾಂಕ್ ಸಾಮರ್ಥ್ಯ 13 ಲೀಟರ್. ಇದು 36 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಒಮ್ಮೆ ಫುಲ್ ಮಾಡಿದರೆ 450 ಕಿ.ಮೀ.ವರೆಗೆ ಪ್ರಯಾಣಿಸಬಹುದು. ಇದರ ಮೂಲ ರೆಟ್ರೋ ಫ್ಯಾಕ್ಟರಿ ರೂಪಾಂತರದ ಬೆಲೆ 1.50 ಲಕ್ಷ ರೂ., ಮೆಟ್ರೋ ಡ್ಯಾಪರ್ ರೂಪಾಂತರಗಳ ಬೆಲೆ 1.70 ಲಕ್ಷ ರೂ. ಮತ್ತು ಮೆಟ್ರೋ ರೆಬೆಲ್ ರೂಪಾಂತರಗಳ ಬೆಲೆ 1.75 ಲಕ್ಷ ರೂ. ವರೆಗೆ ಇದೆ. ಇವೆಲ್ಲವೂ ಎಕ್ಸ್ ಶೋ ರೂಂ ಬೆಲೆಗಳು.
ಓದಿ: ಬ್ಯಾಡ್ ನ್ಯೂಸ್! ಇನ್ಮುಂದೆ ಈ ಆಫ್-ರೋಡ್ ಕಿಂಗ್ ಥಾರ್ ಖರೀದಿಸಲು ಆಗದು! ಕಾರಣವೇನು ಗೊತ್ತಾ?