Mivi AI: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಎಂದರೆ ನಾವು ಪ್ರಶ್ನೆಗಳನ್ನು ಟೈಪ್ ಮಾಡಿದಾಗ ಅದು ಉತ್ತರಗಳನ್ನು ಅಕ್ಷರಗಳ ರೂಪದಲ್ಲಿ ನೀಡುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಹೈದರಾಬಾದ್ ಮೂಲದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಮಿವಿ, ವ್ಯಕ್ತಿಯಂತೆ ಯೋಚಿಸುವ ಮತ್ತು ಸಂವಹನ ನಡೆಸುವ ಹೊಸ AI ಅನ್ನು ರೂಪುಗೊಳಿಸಿದೆ ಎಂದು ಹೇಳಿದೆ. 'ಮಿವಿ ಎಐ' ಹೆಸರಿನಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಎಂಒ ಮಿಧುಲ ದೇವಭಕ್ತುನಿ ಬಹಿರಂಗಪಡಿಸಿದರು. ಇದು AI ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ವಿವರಿಸಿದರು.
ಇದನ್ನು ಮುಂದುವರಿದ ಎಲ್ಎಲ್ಎಮ್ (ಲಾಂಗ್ ಲ್ಯಾಂಗ್ವೇಜ್ ಮಾಡೆಲ್) ನೊಂದಿಗೆ ಕಂಡುಹಿಡಿಯಲಾಗಿದೆ ಎಂದು ಹೇಳಲಾಗುತ್ತದೆ. ಮಿವಿ AIನಲ್ಲಿ ಬಳಸಲಾದ NLP (ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್) ಮಾನವ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ಇದು ಸಂದರ್ಭಕ್ಕೆ ಅನುಗುಣವಾಗಿ ನಮ್ಮ ಸಂಭಾಷಣೆಗಳನ್ನು ಅನುಕರಿಸುತ್ತದೆ. ಇದು ಬಳಕೆದಾರರ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತದೆ. ನಾವು ಅದನ್ನು ಹಲವು ವಿಭಿನ್ನ ಉಪಭಾಷೆಗಳೊಂದಿಗೆ ಸಿದ್ಧಪಡಿಸಿದ್ದೇವೆ. ನಾವು ವಿಶೇಷವಾಗಿ 'ಹಾಯ್ ಮಿವಿ' ಎಂಬ ವೇಕ್ ವರ್ಡ್ ಅನ್ನು ರೂಪಿಸಿದ್ದೇವೆ. ವಿಶ್ವದ ಕೆಲವು ಪ್ರಮುಖ ಸಂಸ್ಥೆಗಳು ಮಾತ್ರ ವೇಕ್ ವರ್ಡ್ ಅನ್ನು ತಂದಿವೆ’ ಎಂದು ಅವರು ತಿಳಿಸಿದರು.
ನಾವು ಇವುಗಳಲ್ಲಿ ಎಐ ನೀಡುತ್ತೇವೆ: ಮಿವಿ ತನ್ನ ಇಯರ್‌ಬಡ್‌ಗಳು, ಹೋಮ್ ಮಾನಿಟರಿಂಗ್ ಕ್ಯಾಮೆರಾಗಳು, ಸ್ಮಾರ್ಟ್ ವೇರಬಲ್‌ಗಳು ಮತ್ತು ಐಒಟಿ ಸಾಧನಗಳಲ್ಲಿ AI ತಂತ್ರಜ್ಞಾನವನ್ನು ನೀಡುತ್ತಿದೆ. ಕಂಪನಿಯು 1,500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಮಿವಿ AIನಲ್ಲಿ 100 ಎಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ ಎಂದು ಸಿಎಂಒ ಮಿಧುಲ ದೇವಭಕ್ತುನಿ ಹೇಳಿದರು.
ಇದಕ್ಕಾಗಿ 86 ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ. Mivi AI ಮೂಲಕ ಬಳಕೆದಾರರಿಗೆ ವೈಯಕ್ತಿಕಗೊಳಿಸಿದ ಕೃತಕ ಬುದ್ಧಿಮತ್ತೆ ಅನುಭವವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಭವಿಷ್ಯದಲ್ಲಿ ಸ್ಮಾರ್ಟ್ ಹೋಮ್ ಸಾಧನಗಳು, ಗ್ರಾಹಕ ಸೇವಾ ಕೇಂದ್ರಗಳು ಮತ್ತು ಇತರ AI ಆಧಾರಿತ ಉತ್ಪನ್ನಗಳಲ್ಲಿ ಇದನ್ನು ಬಳಸುವ ಸಾಮರ್ಥ್ಯವಿದೆ ಎಂದು ದೇವಭಕ್ತುನಿ ಹೇಳಿದರು.
ಮಿವಿಯ ಸಹ-ಸಂಸ್ಥಾಪಕ ಮತ್ತು ಸಿಇಒ ವಿಶ್ವನಾಥ್ ಕಂದುಲ ಮಾತನಾಡಿ, ಕಳೆದ ಹಣಕಾಸು ವರ್ಷದಲ್ಲಿ ಕಂಪನಿಯು 250 ಕೋಟಿ ರೂ. ಆದಾಯ ಗಳಿಸಿದ್ದು, 2025-26ರಲ್ಲಿ 300 ಕೋಟಿ ರೂ.ಗಳ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಹಣಕಾಸು ಒದಗಿಸಿದ ಬ್ಯಾಂಕ್ ಆಫ್ ಬರೋಡಾ: ಈ ಸಂಪೂರ್ಣ ಯೋಜನೆಗೆ ಹಣಕಾಸು ಒದಗಿಸುವಲ್ಲಿ ಬ್ಯಾಂಕ್ ಆಫ್ ಬರೋಡಾದ ಹೈದರಾಬಾದ್ ವಲಯವು ಪ್ರಮುಖ ಪಾತ್ರ ವಹಿಸಿದೆ. ಬ್ಯಾಂಕ್ ಆಫ್ ಬರೋಡಾ ತನ್ನ ಸಂಸ್ಥಾಪನಾ ದಿನದಿಂದಲೂ MIVI ಜೊತೆಗೆ ಸಂಬಂಧ ಹೊಂದಲು ಮತ್ತು ಅವರ ನವೋದ್ಯಮ ಪ್ರಯಾಣದ ಭಾಗವಾಗಿರಲು ಹೆಮ್ಮೆಪಡುತ್ತದೆ. ಭಾರತದ ಅಂತಾರಾಷ್ಟ್ರೀಯ ಬ್ಯಾಂಕ್ ಆಗಿ ಬ್ಯಾಂಕ್ ಆಫ್ ಬರೋಡಾ ಯಾವಾಗಲೂ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬೆಂಬಲಿಸುವಲ್ಲಿ ಮುಂಚೂಣಿಯಲ್ಲಿದೆ ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ.