101st Rocket Launch: ಇಸ್ರೋದ 101ನೇ ರಾಕೆಟ್ ಉಡಾವಣೆಗೆ ಸಕಲ ಸಿದ್ಧತೆಗಳು ನಡೆದಿದೆ. ಈ ಬಗ್ಗೆ ಇಸ್ರೋ ತನ್ನ ಎಕ್ಸ್ ಖಾತೆ ಮೂಲಕ ಮಾಹಿತಿ ನೀಡಿದೆ. ಈ ಉಪಗ್ರಹವು ಭಾರತದ ಕಣ್ಗಾವಲು ಮತ್ತು ವಿಪತ್ತು ನಿರ್ವಹಣಾ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ಇಸ್ರೋದ 101ನೇ ಉಡಾವಣೆ ಸಂಬಂಧ PSLV-C61/EOS-09ರ ಟೈಮ್‌ಲ್ಯಾಪ್ಸ್ ವಿಡಿಯೋ ಕಾಣಬಹುದು. ಇಸ್ರೋ ಜಾಗತಿಕವಾಗಿ ಸ್ಪರ್ಧಿಸುವುದಿಲ್ಲ, ಆದರೆ ಭಾರತದ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಇಸ್ರೋ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ.ನಾರಾಯಣನ್, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತದ ಸುರಕ್ಷತೆಗೆ ಮತ್ತು ಭದ್ರತೆ ನೀಡುವ ಬಾಹ್ಯಾಕಾಶ ಯೋಜನೆಗಳನ್ನು ವಿನ್ಯಾಸಗೊಳಿಸುವ ಮತ್ತು ಕಾರ್ಯಗತಗೊಳಿಸುವತ್ತ ಗಮನಹರಿಸಿದೆ ಎಂದು ಹೇಳಿದರು.
Watch this timelapse of PSLV-C61 / EOS-09 — marking ISRO’s 101st launch — as PSLV is moved from the Payload Integration Facility (PIF) to the Mobile Service Tower (MST) at SDSC-SHAR, Sriharikota for further integration.
— ISRO (@isro) May 15, 2025
A step closer to launch on 18 May at 5:59 IST!#PSLVC61… pic.twitter.com/9uEI4oZzlo
ಈಗಾಗಲೇ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ನ್ನು(PSLV) SDSC-SHARನಲ್ಲಿರುವ ಪೇಲೋಡ್ ಇಂಟಿಗ್ರೇಷನ್ ಫೆಸಿಲಿಟಿನಿಂದ (PIF) ಶ್ರೀಹರಿಕೋಟಾದ ಮೊಬೈಲ್ ಸರ್ವಿಸ್ ಟವರ್ಗೆ (MST) ಸ್ಥಳಾಂತರಿಸಲಾಗಿದೆ. ಮೇ 18ರ ನಿಗದಿತ ಉಡಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇಸ್ರೋ ಉನ್ನತ ಶಕ್ತಿಯ ರಾಡಾರ್ ಉಪಗ್ರಹವಾದ EOS-09 ಅನ್ನು ಉಡಾವಣೆ ಮಾಡಲಿದೆ. ವರದಿಗಳ ಪ್ರಕಾರ, ಇದು ಬಿಕ್ಕಟ್ಟಿನ ಸಮಯದಲ್ಲಿ ತೀಕ್ಷ್ಣ ಚಿತ್ರಗಳನ್ನು ಮತ್ತು ಅತಿವೇಗವಾಗಿ ಎಚ್ಚರಿಕೆಗಳನ್ನು ರವಾನಿಸಲಿದೆ.
ದೇಶದ ವೈವಿಧ್ಯಮಯ ವಲಯಗಳ ಅಗತ್ಯತೆಗಳನ್ನು ಆಧರಿಸಿ ಇಸ್ರೋ ಕಾರ್ಯ ನಿರ್ವಹಿಸುತ್ತಿದೆ ಮತ್ತು ತಾಂತ್ರಿಕವಾಗಿ ತನ್ನ ಗುರಿ ಸಾಧಿಸಲು ಸಮರ್ಥವಾಗಿದೆ ಎಂದು ಇಸ್ರೋ ಅಧ್ಯಕ್ಷ ನಾರಾಯಣನ್ ಹೇಳಿದರು.
ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಇಸ್ರೋ ಯಾವುದಾದರೂ ವಿಶೇಷ ಉಡಾವಣೆಯನ್ನು ಯೋಜಿಸಿದೆಯೇ ಎಂಬ ವರದಿಗಾರರ ಪ್ರಶ್ನೆಗೆ, ''ನಮ್ಮ ಎಲ್ಲಾ ಕಾರ್ಯಾಚರಣೆಗಳು ದೇಶದ ಜನರು ಮತ್ತು ಅದರ ಭದ್ರತೆಗಾಗಿಯೇ ಆಗಿದೆ. ನಾವು ಬೇರೆ ಯಾವುದೇ ದೇಶದೊಂದಿಗೆ ಸ್ಪರ್ಧಿಸುವುದಿಲ್ಲ. ನಮ್ಮ ನಮ್ಮ ಅಗತ್ಯಗಳ ಆಧಾರದ ಮೇಲೆ ಕಾರ್ಯಾಚರಣೆ ಯೋಜಿಸಲಾಗಿದೆ. ಈ ಉಪಗ್ರಹವು ಭಾರತದ ಕಣ್ಗಾವಲು, ದೂರಸ್ಥ ಸಂವೇದನೆ ಮತ್ತು ವಿಪತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಹೆಚ್ಚಿಸಲಿದೆ'' ಎಂದು ಇಸ್ರೋ ಅಧ್ಯಕ್ಷರು ಪ್ರತಿಕ್ರಿಯಿಸಿದರು.
''ಜನವರಿಯಲ್ಲಿ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ 100ನೇ ರಾಕೆಟ್ ಉಡಾವಣೆ ಮಾಡಿದ್ದೇವೆ. ಭಾರತದ 101ನೇ ಉಪಗ್ರಹ - ಭೂ ವೀಕ್ಷಣಾ ಉಪಗ್ರಹ RISAT-18 ಮೇ 18ರಂದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C61) ಮೂಲಕ ಉಡಾವಣೆಗೊಳ್ಳಲಿದೆ'' ಎಂದು ಇಸ್ರೋ ಮುಖ್ಯಸ್ಥರು ತಿಳಿಸಿದರು.
1979ರಿಂದ ಭಾರತದ ಬಾಹ್ಯಾಕಾಶ ಪ್ರಯಾಣ: ಇಸ್ರೋದ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ ನಾರಾಯಣನ್ ಅವರು, ಭಾರತದ ಮೊದಲ ಬಾಹ್ಯಾಕಾಶ ಉಡಾವಣೆಯು 1979ರಲ್ಲಿ SLV-3 ರಾಕೆಟ್‌ನೊಂದಿಗೆ ಆರಂಭವಾಯಿತು. ಅದು ಶೇಕಡಾ 98ರಷ್ಟು ಯಶಸ್ಸು ಸಾಧಿಸಿತ್ತು. ನಮ್ಮ ಮೊದಲ ಸಂಪೂರ್ಣ ಯಶಸ್ವಿ ಮಿಷನ್ 1980ರಲ್ಲಿ ನಡೆಯಿತು. ಅಂದಿನಿಂದಲೂ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು.
ಇಸ್ರೋ ತನ್ನ ತಾಂತ್ರಿಕ ಸಾಮರ್ಥ್ಯ ಬಲಪಡಿಸುವುದನ್ನು ಮುಂದುವರೆಸುತ್ತಿರುವುದರಿಂದ ರಕ್ಷಣೆ, ವಿಪತ್ತು ನಿರ್ವಹಣೆ, ಕೃಷಿ ಮತ್ತು ಹವಾಮಾನ ಮೇಲ್ವಿಚಾರಣೆಯಂತಹ ಕ್ಷೇತ್ರಗಳಲ್ಲಿ ಭಾರತದ ಹಿತಾಸಕ್ತಿಗಳನ್ನು ಪೂರೈಸಲು ಅದು ಬದ್ಧವಾಗಿದೆ ಎಂದು ಅವರು ಹೇಳಿದರು.
ಓದಿ: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾರ ಬಾಹ್ಯಾಕಾಶ ಯಾನ ಮುಂದೂಡಿದ ನಾಸಾ! ಕಾರಣವೇನು?