Instagram AI Profile Picture Generation Feature: ಮೆಟಾ ಒಡೆತನದ ಇನ್ಸ್ಟಾಗ್ರಾಂ ಶ್ರೀಘ್ರದಲ್ಲೇ ಹೊಸ ಎಐ(ಕೃತಕ ಬುದ್ಧಿಮತ್ತೆ) ಫೀಚರ್ ಪರಿಚಯಿಸಲಿದೆ. ಇದು ಬಳಕೆದಾರರಿಗೆ ಎಐ ಪ್ರೊಫೈಲ್ ಫೋಟೋಗಳನ್ನು ಕ್ರಿಯೆಟ್ ಮಾಡಲು ಅನುಮತಿಸುತ್ತದೆ. ಹೊಸ ಎಐ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯದಿದ್ದರೂ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೆಟಾ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗಾಗಿ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ನಿರ್ದಿಷ್ಟ ಅವಧಿಯ ನಂತರ ಅಪ್ಲಿಕೇಶನ್ ಅನ್ನು ತೆರೆಯುವಾಗ ಸ್ವಯಂಚಾಲಿತ ಫೀಡ್ ರಿಫ್ರೆಶ್ ಅನ್ನು ಸೇವೆಯಿಂದ ಕೈಬಿಡಲಾಗಿದೆ ಎಂದು ಇನ್ಸ್ಟಾಗ್ರಾಂ ಮುಖ್ಯಸ್ಥ ಆಡಮ್ ಮೊಸ್ಸೆರಿ ಇತ್ತೀಚೆಗೆ ಘೋಷಿಸಿದ್ದರು.
ಡೆವಲಪರ್ ಅಲೆಸ್ಸಾಂಡ್ರೊ ಪಲುಝಿ ಅವರು ಇನ್ಸ್ಟಾಗ್ರಾಂ ಹೊಸ ಎಐ ಫೀಚರ್ನ ಒಂದು ಲುಕ್ ಅನ್ನು ಥ್ರೆಡ್ನಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನು ಅಪ್ಡೇಟ್ ಮಾಡುವಾಗ ಅವರು ಎಐ ಪ್ರೊಫೈಲ್ ಫೋಟೋ ರಚಿಸಿ ಎಂಬ ಹೊಸ ಮೆನು ಆಯ್ಕೆ ಬಗ್ಗೆ ತಿಳಿಸಿದ್ದಾರೆ.
ಈ ವೈಶಿಷ್ಟ್ಯವು ಎಷ್ಟು ನಿಖರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುವುದು ಕಷ್ಟ. ಸದ್ಯ ಅಭಿವೃದ್ಧಿಯ ಹಂತದಲ್ಲಿದೆ. ಮೆಟಾದ ಲಾಮಾ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್‌ಗಳಲ್ಲಿ (ಎಲ್‌ಎಲ್‌ಎಂ) ಒಂದರಿಂದ ಚಾಲಿತವಾಗಿರುತ್ತದೆ. ಈ ಫೀಚರ್ ಎರಡು ರೀತಿಯಲ್ಲಿ ಕೆಲಸ ಮಾಡಬಹುದು. ಪಠ್ಯ-ಆಧರಿತ ಪ್ರಾಂಪ್ಟ್‌ಗಳನ್ನು ಬಳಸಿಕೊಂಡು ಮೊದಲಿನಿಂದಲೂ ಎಐ ಚಿತ್ರವನ್ನು ರಚಿಸಲು ಅಥವಾ ಅಸ್ತಿತ್ವದಲ್ಲಿರುವ ಪ್ರೊಫೈಲ್ ಚಿತ್ರಗಳನ್ನು ಎಐ ಬಳಸಿಕೊಂಡು ವಿಭಿನ್ನ ಶೈಲಿಗಳಾಗಿ ಪರಿವರ್ತಿಸಲು ಬಳಕೆದಾರರಿಗೆ ಅವಕಾಶ ನೀಡಬಹುದಾಗಿದೆ.
ಇದು ಇನ್‌ಸ್ಟಾಗ್ರಾಂನಲ್ಲಿ ಬರುವ ಮೊದಲ ಎಐ ವೈಶಿಷ್ಟ್ಯವಲ್ಲ. ಈಗಾಗಲೇ ಸಂವಾದಾತ್ಮಕ ಚಾಟ್‌ಬಾಟ್ ಮೆಟಾ ಎಐ ಅನ್ನು ನೀಡುತ್ತದೆ. ಡಿಎಂ ಸಂದೇಶಗಳಿಗಾಗಿ ಎಐ ರಿರೈಟ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಬಳಕೆದಾರರು ತಾವು ಕಳುಹಿಸಿರುವ ಸಂದೇಶಗಳನ್ನು ಮತ್ತೆ ಸರಿಪಡಿಸಬಹುದಾಗಿದೆ.
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ನಕಲಿ ಜಾಹೀರಾತುಗಳನ್ನು ಪತ್ತೆ ಹಚ್ಚಲು ಎಐ-ಚಾಲಿತ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಪರೀಕ್ಷಿಸುತ್ತಿದೆ ಎಂದು ಇತ್ತೀಚೆಗೆ ಮೆಟಾ ತಿಳಿಸಿತ್ತು. ಈ ವೈಶಿಷ್ಟ್ಯವು ಬಳಕೆದಾರರನ್ನು ಆಕರ್ಷಿಸಲು ತಮ್ಮ ಜಾಹೀರಾತುಗಳಲ್ಲಿ ಸಾರ್ವಜನಿಕ ವ್ಯಕ್ತಿಗಳನ್ನು ಮೋಸದಿಂದ ಬಳಸುವ ಜಾಹೀರಾತುಗಳನ್ನು ಗುರುತಿಸುತ್ತದೆ ಮತ್ತು ನಿರ್ಬಂಧಿಸುತ್ತದೆ.
ಇದನ್ನೂ ಓದಿ: ಸುರಕ್ಷತಾ ಪರಿಶೀಲನೆಗೆ ಒಳಪಟ್ಟ ನಂತರವೇ ಸ್ಟಾರ್‌ಲಿಂಕ್ ಭಾರತದಲ್ಲಿ ಕಾರ್ಯಾಚರಿಸಲು ಸಾಧ್ಯ: ಕೇಂದ್ರ