Axiom Space Mission Postponed: ಗಗನಯಾನವು ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ಗಗನಯಾತ್ರಿ ಅಥವಾ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮುಂದಿನ ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ.
ಹೌದು, ಆಕ್ಸಿಯಮ್ ಸ್ಪೇಸ್ ತನ್ನ ನಾಲ್ಕನೇ ಕಾರ್ಯಾಚರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ಈ ಮಿಷನ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಮೇ 29ರಂದು ನಿಗದಿತ ಉಡಾವಣೆಯ ಬದಲು, ಮುಂದಿನ ತಿಂಗಳು ಅಂದರೆ ಜೂನ್ 8ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಕರೆದೊಯ್ಯಲಿದೆ. ಈ ಬಗ್ಗೆ ನಾಸಾ ತನ್ನ ಎಕ್ಸ್ ಖಾತೆಯ ಮೂಲಕ ಮಾಹಿತಿ ಖಚಿತಪಡಿಸಿದೆ.
After reviewing the @Space_Station flight schedule, @NASA and its partners are shifting launch opportunities for several upcoming missions. The schedule adjustments provide more time to finalize mission plans, spacecraft readiness, and logistics.
— NASA Space Operations (@NASASpaceOps) May 14, 2025
The new targeted… pic.twitter.com/dXgSjzny6X
ಆಕ್ಸ್4 ಸಿಬ್ಬಂದಿ ಜೂನ್ 8ರಂದು ಬೆಳಗ್ಗೆ 9:11ಕ್ಕೆ ಫ್ಲೋರಿಡಾದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆಯಾಗಲಿದ್ದಾರೆ ಎಂದು ಆಕ್ಸಿಯಮ್ ಸ್ಪೇಸ್ ಎಕ್ಸ್‌ನಲ್ಲಿ ಘೋಷಿಸಿದೆ. ಈ ಹಿಂದೆ ರಾಕೇಶ್ ಶರ್ಮಾ ಅವರು ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಯಾನ ನಡೆಸಿದ ನಾಲ್ಕು ದಶಕಗಳ ಬಳಿಕ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಸಜ್ಜಾಗಿದ್ದಾರೆ. ಐಎಸ್ಎಸ್ನಲ್ಲಿ 14 ದಿನಗಳವರೆಗೆ ಕಳೆಯಲಿರುವ ಅವರು ಬಾಹ್ಯಾಕಾಶದಲ್ಲಿ ಭಾರತದ ಖಾದ್ಯವನ್ನು ಸಹ ಸವಿಯಲಿದ್ದಾರೆ.
‘ಕಂಪನಿಯ ಫಾಲ್ಕನ್ 9 ರಾಕೆಟ್‌ನಲ್ಲಿರುವ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಆಕ್ಸ್-4 ಉಡಾವಣೆಯನ್ನು ಜೂನ್ 8, ಭಾನುವಾರ ಬೆಳಗ್ಗೆ 9:11ಕ್ಕೆ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಿಗದಿಪಡಿಸಲಾಗಿದೆ. ಈ ಮುಂದೂಡಿಕೆಯಿಂದಾಗಿ ಮಿಷನ್ ಯೋಜನೆ, ಬಾಹ್ಯಾಕಾಶ ನೌಕೆ ಸಿದ್ಧತೆ ಮತ್ತು ಲಾಜಿಸ್ಟಿಕ್ಸ್ ಅನ್ನು ಅಂತಿಮಗೊಳಿಸಲು ಹೆಚ್ಚಿನ ಅವಕಾಶ ಸಿಗಲಿದೆ’ ಎಂದು ಆಕ್ಸಿಯಮ್ ಸ್ಪೇಸ್ ಎಕ್ಸ್ ಮೂಲಕ ತಿಳಿಸಿದೆ.
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದು ಹೀಗೆ: ಈ ಹಿಂದೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾತನಾಡಿ, ಆಕ್ಸಿಮ್ 4 ಮಿಷನ್ ಭಾಗವಾಗಿ ಗಗನಯಾನಿ ಶುಭಾಂಶು ಶುಕ್ಲಾ ಅವರು ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇಸ್ರೋ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯಗಳ ಪರಿಶೀಲನೆ ಸಭೆ ಬಳಿಕ ಕೇಂದ್ರ ಸಚಿವರು ಈ ಕುರಿತು ಹೇಳಿಕೆ ನೀಡಿದ್ದರು. ಸದ್ಯ ಈ ಮಿಷನ್ ಅನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಪ್ರಯಾಣವು ಕೇವಲ ಒಂದು ಬಾಹ್ಯಾಕಾಶ ಯಾತ್ರೆ ಮಾತ್ರವಲ್ಲ, ಇದು ಬಾಹ್ಯಾಕಾಶ ಪರಿಶೋಧನೆಯ ಹೊಸ ಯುಗಕ್ಕೆ ಭಾರತವು ಧೈರ್ಯದಿಂದ ಹೆಜ್ಜೆ ಹಾಕುತ್ತಿದೆ ಎಂಬುದರ ಸಂಕೇತವಾಗಲಿದೆ ಎಂದು ಜಿತೇಂದ್ರ ಸಿಂಗ್ ಈ ಹಿಂದೆ ವ್ಯಾಖ್ಯಾನಿಸಿದ್ದರು.
ಮುಂಬರುವ ವಿವಿಧ ಬಾಹ್ಯಾಕಾಶ ಕಾರ್ಯಾಚರಣೆಗಳ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು ಪ್ರಸ್ತುತಿ ನೀಡಿದ್ದಾರೆ. ಜೂನ್ನಲ್ಲಿ ಜಿಎಸ್‌ಎಲ್‌ವಿ-ಮಾರ್ಕ್ 2 ರಾಕೆಟ್‌ನಲ್ಲಿ ಎನ್‌ಐಎಸ್‌ಎಆರ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ. ಬಳಿಕ ಜುಲೈನಲ್ಲಿ ಹೆವಿ-ಲಿಫ್ಟ್ ಎಲ್‌ವಿಎಂ-3 ರಾಕೆಟ್ ಬಳಸಿ ಯುಎಸ್ ಮೂಲದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಸಚಿವರು ಈ ಹಿಂದೆ ಮಾಹಿತಿ ನೀಡಿದ್ದರು.
ಮೇ ತಿಂಗಳಲ್ಲಿ ನಿಗದಿಯಾಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಪ್ರಯಾಣವು ಭಾರತದ ವಿಸ್ತರಿಸುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಹಯೋಗದಲ್ಲಿ ಒಂದು ಮೈಲಿಗಲ್ಲು ಎಂದು ಸಿಂಗ್ ಬಣ್ಣಿಸಿದ್ದರು. ಇಸ್ರೋದ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮದ ಅಡಿಯಲ್ಲಿ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಶಾರ್ಟ್‌ಲಿಸ್ಟ್ ಆಗಿದ್ದಾರೆ ಮತ್ತು ಗಗನಯಾನ ಮಿಷನ್‌ನ ಅಗ್ರ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ಓದಿ: ಭಾರತ - ಪಾಕ್ ಸಂಘರ್ಷದಲ್ಲಿ ತನ್ನ ಶಕ್ತಿ - ಸಾಮರ್ಥ್ಯ ತೋರಿದ ಆಕಾಶ್ತೀರ್: ಹೀಗಿದೆ ಇದರ ರಣಾರ್ಭಟ!!