Samudrayaan Mission: ಬಾಹ್ಯಾಕಾಶದ ನಂತರ ಭಾರತ ಈಗ ಸಾಗರದ ಆಳದಲ್ಲಿಯೂ ತನ್ನ ಧ್ವಜ ಹಾರಿಸಲು ತಯಾರಿ ನಡೆಸುತ್ತಿದೆ. ಇದು ಸಾಮಾನ್ಯ ಯೋಜನೆಯಲ್ಲ, ಇದೊಂದು ಐತಿಹಾಸಿಕ ಕಾರ್ಯಾಚರಣೆಯಾಗಿದೆ. ಇದನ್ನು ಪೂರ್ಣಗೊಳಿಸುವುದರಿಂದ ಭಾರತವು ಸಾಗರಗಳ ಮೇಲ್ಮೈಯಿಂದ 6,000 ಮೀಟರ್ ಕೆಳಗೆ ಅಂದರೆ 6 ಕಿ.ಮೀ. ತಳಭಾಗದಲ್ಲಿ ವಿಜ್ಞಾನಿಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲ ದೇಶಗಳ ಗುಂಪಿಗೆ ಸೇರಲಿದೆ.
ಈ ಮಿಷನ್ ಹೆಸರು ‘ಸಮುದ್ರಯಾನ’. ಮಂಗಳವಾರದಂದು ಐಸಿಎಆರ್-ಕೇಂದ್ರ ಸಾಗರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (CMFRI) ನಡೆದ ನೀಲಿ ಆರ್ಥಿಕತೆ ಕಾರ್ಯಕ್ರಮದಲ್ಲಿ ಮೀನುಗಾರಿಕೆಯ ಪಾತ್ರದ ಕುರಿತು ನಡೆಯುತ್ತಿರುವ ಐದು ದಿನಗಳ ರಾಷ್ಟ್ರೀಯ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ (NIOT) ನಿರ್ದೇಶಕ ಡಾ.ರಾಮಕೃಷ್ಣನ್ ಈ ಮಿಷನ್ ಬಗ್ಗೆ ವಿವರ ಹಂಚಿಕೊಂಡರು.
'ಸಮುದ್ರಯಾನ' ಮಿಷನ್ ಎಂದರೇನು?: ‘ಸಮುದ್ರಯಾನ’ ಭಾರತದ ಮೊದಲ ಮಾನವಸಹಿತ ಆಳ ಸಮುದ್ರ ಲ್ಯಾಂಡಿಂಗ್ ಮಿಷನ್ ಆಗಿದ್ದು, ಇದನ್ನು 2026ರ ಅಂತ್ಯದ ವೇಳೆಗೆ ಪ್ರಾರಂಭಿಸುವ ನಿರೀಕ್ಷೆಯಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ವಿಜ್ಞಾನಿಗಳನ್ನು 'ಮತ್ಸ್ಯ' ಎಂಬ ಸಬ್‌ಮರ್ಸಿಬಲ್ ವಾಹನದ ಮೂಲಕ ಸಾಗರದಲ್ಲಿ 6,000 ಮೀಟರ್ ಆಳಕ್ಕೆ ಕಳುಹಿಸಲಾಗುತ್ತದೆ.
Next is " samudrayaan"
— Kiren Rijiju (@KirenRijiju) September 11, 2023
this is 'matsya 6000' submersible under construction at national institute of ocean technology at chennai. india’s first manned deep ocean mission ‘samudrayaan’ plans to send 3 humans in 6-km ocean depth in a submersible, to study the deep sea resources and… pic.twitter.com/aHuR56esi7
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ NIOT, ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾಗಿದೆ. ಈ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಟೈಟಾನಿಯಂನಿಂದ ಮಾಡಿದ ಬಲಿಷ್ಠವಾದ ಹಲ್ ಅನ್ನು ಹೊಂದಿರುವ ಈ 25 ಟನ್ ತೂಕದ ಸಬ್‌ಮರ್ಸಿಬಲ್ ವಾಹನವು ತೀವ್ರ ಒತ್ತಡ ಮತ್ತು ತಾಪಮಾನ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಈ ಮಿಷನ್ ಏಕೆ ವಿಶೇಷ?: ಬಾಲಾಜಿ ರಾಮಕೃಷ್ಣನ್ ಪ್ರಕಾರ, ಸಮುದ್ರಯಾನವು ಭಾರತದ ಆಳ ಸಮುದ್ರ ಸಂಶೋಧನಾ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಇದು ಪ್ರಾಣಿ ಮತ್ತು ಖನಿಜ ಸಂಪನ್ಮೂಲಗಳ ಆವಿಷ್ಕಾರಕ್ಕೆ ಮಾತ್ರವಲ್ಲದೆ, ಸಮುದ್ರ ಪ್ರವಾಸೋದ್ಯಮ, ಹವಾಮಾನ ಅಧ್ಯಯನ ಮತ್ತು ಪರಿಸರ ಮೇಲ್ವಿಚಾರಣೆಗೂ ಹೊಸ ಮಾರ್ಗಗಳನ್ನು ತೆರೆದಿಡಲಿದೆ.

ಈ ಕಾರ್ಯಾಚರಣೆಯನ್ನು ಹಂತ-ಹಂತವಾಗಿ ಪ್ರಾರಂಭಿಸಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ 500 ಮೀಟರ್ ಆಳಕ್ಕೆ ಪ್ರಾಯೋಗಿಕ ಡೈವಿಂಗ್ ನಡೆಯುವ ನಿರೀಕ್ಷೆಯಿದೆ. ಇಡೀ ಪ್ರಯಾಣವು ಸಮುದ್ರದಾಳಕ್ಕೆ ಹೋಗಲು ನಾಲ್ಕು ಗಂಟೆಗಳು ಮತ್ತು ಮೇಲಕ್ಕೆ ಬರಲು ನಾಲ್ಕು ಗಂಟೆಗಳನ್ನು ತೆಗೆದುಕೊಳ್ಳಲಿದೆ.
ಸಮುದ್ರಯಾನದಿಂದ ನಮಗೇನು ಲಾಭ?: ಈ ಕಾರ್ಯಾಚರಣೆಯ ಮೂಲಕ ವಿಜ್ಞಾನಿಗಳು ಆಳ ಸಮುದ್ರದಿಂದ ಮಾದರಿಗಳನ್ನು ತರಲು ಮತ್ತು ಅಲ್ಲಿರುವ ಜೈವಿಕ ಮತ್ತು ಜೈವಿಕವಲ್ಲದ ಅಂಶಗಳ ವಿವರವಾದ ವಿಶ್ಲೇಷಣೆ ನಡೆಸಲು ಸಾಧ್ಯವಾಗಲಿದೆ. ಸಮುದ್ರದಾಳದಲ್ಲಿ ಯಾವ ರೀತಿಯ ಜೀವಿಗಳು ವಾಸಿಸುತ್ತವೆ, ಅಲ್ಲಿ ಯಾವ ನೀರು ಹೇಗಿದೆ ಎಂಬುದನ್ನು ಆಧ್ಯಯನ ಮಾಡಲು ನೆರವಾಗಲಿದೆ.
ಸಮುದ್ರ ಕೃಷಿಯಲ್ಲಿ ಹೊಸ ಕ್ರಾಂತಿ: NIOT ನಿರ್ದೇಶಕ ರಾಮಕೃಷ್ಣನ್ ಅವರು ಮತ್ತೊಂದು ಪ್ರಮುಖ ತಾಂತ್ರಿಕ ಸಾಧನೆಯಾದ ‘ಸಮುದ್ರಜೀವಹ’ದ ಕುರಿತಂತೆಯೂ ಉಲ್ಲೇಖಿಸಿದರು. ಇದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಮೇಲ್ವಿಚಾರಣೆಯ ಮೀನು ಪಂಜರ ಟೆಕ್ನಾಲಾಜಿ ಆಗಿದ್ದು, ಇದರಿಂದ ಪೋಷಕಾಂಶಗಳಿಂದ ಕೂಡಿರುವ ಆಳಸಮುದ್ರದ ನೀರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಮೀನು ಸಾಕಣೆ ಮಾಡಲು ಸಾಧ್ಯವಾಗಲಿದೆ. ಈ ತಂತ್ರದಿಂದ ಪ್ರತಿಯೊಂದು ಮೀನಿನ ತೂಕ, ಬೆಳವಣಿಗೆ ಮತ್ತು ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಬಹುದು. ಇದು ಪ್ರಸ್ತುತ ಡೆಮೊ ಹಂತದಲ್ಲಿದೆ. ಆದರೆ ಈ ತಂತ್ರಜ್ಞಾನವು ಭವಿಷ್ಯದಲ್ಲಿ ಭಾರತದ ಆಹಾರ ಭದ್ರತೆಯನ್ನು ಬಲಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಓದಿ: ಕೀಟ, ರೋಗ, ಪೋಷಕಾಂಶ ಕೊರತೆ ತೊಡಕುಗಳಿಗೆ ಇ-ಸ್ಯಾಪ್ ತಂತ್ರಜ್ಞಾನ: ಏನಿದರ ವಿಶೇಷತೆ?