ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಆರಂಭವಾಗಲಿರುವ 9ನೇ ಆವೃತ್ತಿಯ ಜಾಗತಿಕ ತಂತ್ರಜ್ಞಾನ ಶೃಂಗಸಭೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತನಾಡಲಿದ್ದಾರೆ. ಏಪ್ರಿಲ್ 12ರವರೆಗೆ ಶೃಂಗಸಭೆ ನಡೆಯಲಿದೆ. ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ವಿದೇಶಾಂಗ ಸಚಿವಾಲಯ, ಎಸ್.ಜೈಶಂಕರ್ ಶೃಂಗದ ಉದ್ಘಾಟನಾ ಸಭೆಯಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದೆ.
ಶೃಂಗಸಭೆಯು ಜಾಗತಿಕ ತಂತ್ರಜ್ಞಾನದ ಲೋಕದಲ್ಲಿ ಹೊಸ ಅವಿಷ್ಕಾರ, ಸ್ಥಿತಿಸ್ಥಾಪಕತ್ವ, ಅಂತಾರಾಷ್ಟ್ರೀಯ ಸಹಕಾರದ ಕುರಿತಾಗಿ ನೀತಿಗಳನ್ನು ರೂಪಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರ, ಕೈಗಾರಿಕೆ, ಶೈಕ್ಷಣಿಕ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ವರ್ಷದ ಶೃಂಗಸಭೆ ಸಂಭವನ ಎಂಬ ಧ್ಯೇಯದಡಿ ನಡೆಯುತ್ತಿದ್ದು, ಇದು ಉದಯೋನ್ಮುಖ ತಂತ್ರಜ್ಞಾನಗಳ ಸಮಗ್ರ ಬೆಳವಣಿಗೆಯನ್ನು ಹೇಗೆ ಹೆಚ್ಚಿಸಬಹುದು, ಡಿಜಿಟಲ್ ಆಡಳಿತವನ್ನು ಬಲಪಡಿಸಿ, ಗಡಿಯಾಚೆಗಿನ ಪಾಲುದಾರಿಕೆಗಳನ್ನು ಹೇಗೆ ಬಲಪಡಿಸಬಹುದು ಎಂಬುದನ್ನು ತಿಳಿಸಿ ಕೊಡಲಿದೆ.
ಶೃಂಗಸಭೆಯಲ್ಲಿ 40 ಸಾರ್ವಜನಿಕ ಸೆಷನ್ಗಳು ನಡೆಯಲಿವೆ. ಹಾಗೆಯೇ ಸಚಿವರೊಂದಿಗೆ ಮಾತುಕತೆ ನಡೆಯಲಿದೆ.
ಅಮೆರಿಕ, ಯುಕೆ, ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ನೆದರ್‌ಲ್ಯಾಂಡ್ಸ್, ಬ್ರೆಜಿಲ್, ಯುಎಇ, ನೈಜೀರಿಯಾ, ಫಿಲಿಪ್ಪೀನ್ಸ್ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ 40 ದೇಶಗಳ 150ಕ್ಕೂ ಹೆಚ್ಚು ಭಾಷಣಕಾರರು ಭಾಗಿಯಾಗಲಿದ್ದಾರೆ. ಜಗತ್ತು ಎದುರಿಸುತ್ತಿರುವ ತಾಂತ್ರಿಕ ಸವಾಲುಗಳು ಮತ್ತು ಅವಕಾಶಗಳ ಕುರಿತು ಚರ್ಚೆಗಳು ಸಾಗಲಿವೆ.
ಆಡಳಿತದಲ್ಲಿ ಎಐ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡೇಟಾ ರಕ್ಷಣೆಯಿಂದ ಸೈಬರ್ ಸೆಕ್ಯೂರಿಟಿ, ಬಾಹ್ಯಕಾಶ ಭದ್ರತೆ ಹಾಗೂ ಉದಯೋನ್ಮುಕ ತಂತ್ರಜ್ಞಾನ ಸೇರಿದಂತೆ ಹಲವಾರು ವಿಚಾರಗಳ ಕುರಿತು ವಿಶಾಲ ಚರ್ಚೆ ನಡೆಯಲಿದೆ.
ಜಾಗತಿಕ ತಂತ್ರಜ್ಞಾನ ಶೃಂಗಸಭೆ ಯುವ ರಾಯಭಾರಿ ಕಾರ್ಯಕ್ರಮ, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರ ಕಾರ್ಯಕ್ರಮದ ಮೂಲಕ ಮುಂದಿನ ಪೀಳಿಗೆಯ ಧ್ವನಿಯನ್ನು ಹೆಚ್ಚಿಸಲಿದೆ.
ಇದನ್ನೂ ಓದಿ: ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ; ಇನ್ಮುಂದೆ ಭೌತಿಕ ಕಾರ್ಡ್ ಬೇಕಿಲ್ಲ
ಇದನ್ನೂ ಓದಿ: ಹಜಾರಿಬಾಗ್ ರಾಮನವಮಿ ಮುಕ್ತಾಯ: 87 ಟ್ಯಾಬ್ಲೋಗಳ ಮೆರವಣಿಗೆ, 1,300ಕ್ಕೂ ಹೆಚ್ಚು ಭಕ್ತರಿಗೆ ಗಾಯ