DRDO Laser Weapon: ಹೊಸ ಲೇಸರ್ ಆಯುಧವೊಂದು ಭಾರತೀಯ ಸೇನೆ ಸೇರಲಿದೆ. ಡಿಆರ್‌ಡಿಒ ಇದೇ ಮೊದಲ ಬಾರಿಗೆ ಹೆಚ್ಚು ಶಕ್ತಿಯ ಲೇಸರ್ ಆಧಾರಿತ ಆಯುಧವನ್ನು (High Power Laser Weapon) ಯಶಸ್ವಿಯಾಗಿ ಪರೀಕ್ಷಿಸಿದೆ. ಆಂಧ್ರದ ಕರ್ನೂಲ್‌ನಲ್ಲಿ ನಡೆಸಿದ ಪ್ರಯೋಗದಲ್ಲಿ ಯುಎವಿ, ಗಾಳಿಯಲ್ಲಿ ಹಾರುತ್ತಿದ್ದ ಡ್ರೋನ್ ಹೊಡೆದುರುಳಿಸಿತು.
ಶತ್ರುಗಳ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಶಸ್ತ್ರಗಳನ್ನು ಸೆಕೆಂಡುಗಳಲ್ಲಿ ಹೊಡೆದು ಹಾಕಬಲ್ಲ ಹೊಸ ಲೇಸರ್ ವ್ಯವಸ್ಥೆ ಇದಾಗಿದೆ. ಕರ್ನೂಲ್‌ನ ನ್ಯಾಷನಲ್ ಓಪನ್ ಏರ್ ರೇಂಜ್ನಲ್ಲಿ ಭಾನುವಾರ ಇದರ ಪ್ರಯೋಗಗಳು ನಡೆದವು. ಇದು ಭಾರತವನ್ನು ಅತ್ಯಂತ ಶಕ್ತಿಶಾಲಿ ಲೇಸರ್-ಡೈರೆಕ್ಟಡ್ ಎನರ್ಜಿ ವೆಪನ್ (DEW) ವ್ಯವಸ್ಥೆ ಹೊಂದಿರುವ ಕೆಲವೇ ದೇಶಗಳಲ್ಲಿ ಸಾಲಿಗೆ ಸೇರಿಸಿದೆ. ಈ ಆಯುಧವನ್ನು ಹೈದರಾಬಾದ್‌ನಲ್ಲಿರುವ ಡಿಆರ್‌ಡಿಒ ಲ್ಯಾಬ್ ಸೆಂಟರ್ ಫಾರ್ ಹೈ ಎನರ್ಜಿ ಸಿಸ್ಟಮ್ಸ್ ಆ್ಯಂಡ್ ಸೈನ್ಸಸ್ (CHESS) ಅಭಿವೃದ್ಧಿಪಡಿಸಿದೆ.
CHESS DRDO conducted a successful field demonstration of the Land version of Vehicle mounted Laser Directed Weapon(DEW) MK-II(A) at Kurnool today. It defeated the fixed wing UAV and Swarm Drones successfully causing structural damage and disable the surveillance sensors. With… pic.twitter.com/U1jaIurZco
— DRDO (@DRDO_India) April 13, 2025
ದೇಶದ ಇತರ ಪ್ರಯೋಗಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳೂ ಸಹ ಪ್ರಯೋಗದಲ್ಲಿ ಭಾಗವಹಿಸಿವೆ. MK-2 (A) DEW ಎಂಬುದು ಈ ಆಯುಧದ ಹೆಸರು. ಇತ್ತೀಚಿನ ಪರೀಕ್ಷೆಯಲ್ಲಿ ಆಯುಧವು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದು DRDO ಹೇಳಿದೆ. ಬಹಳ ದೂರದಿಂದಲೇ ಸ್ಥಿರ-ವಿಂಗ್ ಡ್ರೋನ್‌ಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಇದಕ್ಕಿದೆ. ಅದೇ ರೀತಿ, ಡ್ರೋನ್ ದಾಳಿಯನ್ನೂ ಪ್ರಬಲವಾಗಿ ಹಿಮ್ಮೆಟ್ಟಿಸಬಲ್ಲದು. 'ಶತ್ರು' ಕಣ್ಗಾವಲು ಸೆನ್ಸಾರ್ಗಳನ್ನು ಮತ್ತು ಆಂಟೆನಾಗಳನ್ನು ನಾಶಮಾಡುವ ಮತ್ತು ಸೆಕೆಂಡುಗಳಲ್ಲೇ ಮಿಂಚಿನ ವೇಗದಲ್ಲಿ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. DEW ಕ್ಷಿಪಣಿಗಳನ್ನು ಅಮೆರಿಕ, ಚೀನಾ ಮತ್ತು ರಷ್ಯಾ ಇಲ್ಲಿಯವರೆಗೆ ಯಶಸ್ವಿಯಾಗಿ ಪರೀಕ್ಷಿಸಿವೆ. ಇಸ್ರೇಲ್ ಕೂಡ ಇದರ ಪ್ರಯೋಗ ಮಾಡುತ್ತಿದೆ.
ಇಂತಹ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯು ಯುದ್ಧಭೂಮಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತದೆ. ಮದ್ದುಗುಂಡುಗಳನ್ನು ಅವಲಂಬಿಸುವ ಅಗತ್ಯವನ್ನು ಇದು ಬಹಳ ಕಡಿಮೆ ಮಾಡುತ್ತದೆ. ನೇರವಾಗಿ ಗುರಿಯೆಡೆಗೆ ದಾಳಿ ಮಾಡುತ್ತದೆ. ಡಿಆರ್‌ಡಿಒ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದು, ದೂರದಿಂದಲೇ ಲೇಸರ್ ಆಯುಧದಿಂದ ಡ್ರೋನ್‌ಗಳನ್ನು ಹೊಡೆದುರುಳಿಸುವ ದೃಶ್ಯವನ್ನು ನೋಡಬಹುದು.
ಇದು ಕೇವಲ ಆರಂಭ ಎಂದು ಡಿಆರ್‌ಡಿಒ ಅಧ್ಯಕ್ಷ ಸಮೀರ್ ವಿ.ಕಾಮತ್ ಹೇಳಿದ್ದಾರೆ. ಇಂತಹ ಹಲವು ತಂತ್ರಜ್ಞಾನಗಳ ಮೇಲೆ ಕೆಲಸ ಮಾಡುತ್ತಿದ್ದೇವೆ. ತಮಗೆ ತಿಳಿದ ಮಟ್ಟಿಗೆ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ ಲೇಸರ್ ಶಸ್ತ್ರಾಸ್ತ್ರ ಸಾಮರ್ಥ್ಯಗಳನ್ನು ಪ್ರದರ್ಶಿಸಿವೆ ಮತ್ತು ಇಸ್ರೇಲ್ ಕೂಡ ಇದೇ ರೀತಿಯ ಕೆಲಸ ಮಾಡುತ್ತಿದೆ. ಈ ರೀತಿಯ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಹೊಂದಿರುವ ನಾಲ್ಕನೇ ಅಥವಾ ಐದನೇ ದೇಶ ಭಾರತ ಎಂದು ಅವರು ಹೇಳಿದರು.
ಇದನ್ನೂ ಓದಿ: ಆಗಸದಲ್ಲಿ ಖಗೋಳ ವಿಸ್ಮಯ, ಇಂದೂ ಕೂಡ ಮೂಡಿಬರಲಿದೆ ‘ಪಿಂಕ್ ಮೂನ್’: ವೀಕ್ಷಿಸುವುದು ಎಲ್ಲಿ?