ChatGPT Memory Feature: ಓಪನ್‌ಎಐ ತನ್ನ ಜನಪ್ರಿಯ ಎಐ ಚಾಟ್‌ಬಾಟ್ ಚಾಟ್‌ಜಿಪಿಟಿಯಲ್ಲಿ ಹೊಸ ವೈಶಿಷ್ಟ್ಯ ಪ್ರಾರಂಭಿಸಿದೆ. ಇದರೊಂದಿಗೆ ಚಾಟ್ಜಿಪಿಟಿ ಈಗ ಬಳಕೆದಾರರೊಂದಿಗಿನ ಹಿಂದಿನ ಸಂಭಾಷಣೆಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಅದರ ಆಧಾರದ ಮೇಲೆ ಭವಿಷ್ಯದ ಸಂಭಾಷಣೆಗಳನ್ನು ಹೆಚ್ಚು ನಿಖರವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಅಪ್ಡೇಟ್ ಚಾಟ್‌ಬಾಟ್‌ನ ಟೆಕ್ಸ್ಟ್, ವಾಯ್ಸ್ ಮತ್ತು ಇಮೇಜ್ ಜನರೇಷನ್ ಸಾಮರ್ಥ್ಯಗಳನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ಓಪನ್‌ಎಐ ಹೇಳಿಕೊಂಡಿದೆ.
ಈ ಹೊಸ ವೈಶಿಷ್ಟ್ಯವು ಚಾಟ್ಜಿಪಿಟಿಯ ಸೆಟ್ಟಿಂಗ್‌ಗಳಲ್ಲಿ Reference Saved Memories ಎಂಬ ಹೆಸರಿನಲ್ಲಿ ಕಂಡು ಬರುತ್ತದೆ. ಇದರ ಪ್ರಮುಖ ಉದ್ದೇಶ ಎಂದರೆ ChatGPT ಬಳಕೆದಾರರ ಆದ್ಯತೆಗಳು, ಇಷ್ಟಗಳು - ಇಷ್ಟ ಇಲ್ಲದಿರುವುದು ಅಥವಾ ಪದೇ ಪದೇ ಉಲ್ಲೇಖಿಸಲಾದ ಯಾವುದೇ ಮಾಹಿತಿಯನ್ನು ನೆನಪಿಟ್ಟುಕೊಳ್ಳುತ್ತದೆ. ಇದರಿಂದಾಗಿ ಸಂಭಾಷಣೆಯನ್ನು ಹೆಚ್ಚು ಸುಗಮ ಮತ್ತು ಸಮಯ ಉಳಿಸುತ್ತದೆ.
Starting today, memory in ChatGPT can now reference all of your past chats to provide more personalized responses, drawing on your preferences and interests to make it even more helpful for writing, getting advice, learning, and beyond. pic.twitter.com/s9BrWl94iY
— OpenAI (@OpenAI) April 10, 2025
ChatGPT ಪ್ರೋ ಅಥವಾ ಪ್ಲಸ್ಗೆ ಪಾವತಿಸುವ ಮೂಲಕ ಸರ್ವೀಸ್ ಅನ್ನು ಬಳಸುತ್ತಿರುವ ಅಥವಾ ಬಳಸಲಿರುವ ಬಳಕೆದಾರರಿಗೆ ಮಾತ್ರ Reference Saved Memories ವೈಶಿಷ್ಟ್ಯವು ಮೊದಲು ಲಭ್ಯವಿರುತ್ತದೆ ಎಂದು OpenAI ಸ್ಪಷ್ಟವಾಗಿ ಹೇಳಿದೆ. ಆದರೂ ಬ್ರಿಟನ್, ಯುರೋಪಿಯನ್ ಯೂನಿಯನ್, ಐಸ್ಲ್ಯಾಂಡ್, ಲಿಚ್ಟೆನ್‌ಸ್ಟೈನ್, ನಾರ್ವೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ದೇಶಗಳಲ್ಲಿ ಈ ವೈಶಿಷ್ಟ್ಯವು ಸ್ವಲ್ಪ ವಿಳಂಬದೊಂದಿಗೆ ಬರಲಿದೆ. ಏಕೆಂದರೆ ಅವರ ಡೇಟಾ ಗೌಪ್ಯತೆ ನೀತಿಗಳ ಅಡಿ ಮೊದಲು ಹೆಚ್ಚುವರಿ ಪರಿಶೀಲನೆಯ ಅಗತ್ಯವಿದೆ. ಈ ವಲಯಗಳಲ್ಲಿ ಈ ಸೌಲಭ್ಯವನ್ನು ಆದಷ್ಟು ಬೇಗ ಲಭ್ಯವಾಗುವಂತೆ ಮಾಡಲು ಕಂಪನಿಯು ಬದ್ಧವಾಗಿದೆ ಎಂದು ಹೇಳಿದೆ.
ಫ್ರೀ ಯಾವಾಗ?: ಚಾಟ್ಜಿಪಿಟಿಯ ಉಚಿತ ಆವೃತ್ತಿಯನ್ನು ಬಳಸುವ ಬಳಕೆದಾರರಿಗೆ ಈ ವೈಶಿಷ್ಟ್ಯವು ಪ್ರಸ್ತುತ ಲಭ್ಯವಿಲ್ಲ. ಓಪನ್‌ಎಐ ಪ್ರಸ್ತುತ ತನ್ನ ಸಂಪೂರ್ಣ ಗಮನವು ಪಾವತಿಸುವ ಗ್ರಾಹಕರಿಗೆ ಈ ಸೌಲಭ್ಯ ಒದಗಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದೆ.
ಗೌಪ್ಯತೆ, ಕಂಟ್ರೋಲ್ ಸೌಲಭ್ಯ: ಸಂಭಾಷಣೆಗಳನ್ನು ವೈಯಕ್ತಿಕಗೊಳಿಸಲು ಈ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದ್ದರೂ, ಕೆಲವು ಬಳಕೆದಾರರು ತಮ್ಮ ಮಾಹಿತಿಯನ್ನು ಉಳಿಸಲಾಗುವುದರ ಬಗ್ಗೆ ಕಾಳಜಿ ವಹಿಸಬಹುದು. ಓಪನ್ AI ಕೂಡ ಇದರತ್ತ ಗಮನ ಹರಿಸಿದೆ. ಬಳಕೆದಾರರು ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಈ ಮೆಮೊರಿ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ಆಫ್ ಮಾಡಬಹುದು ಅಥವಾ ಯಾವ ಮಾಹಿತಿಯನ್ನು ಉಳಿಸಬೇಕು ಮತ್ತು ಯಾವುದನ್ನು ಉಳಿಸಬಾರದು ಎಂಬುದನ್ನು ನಿರ್ಧರಿಸಬಹುದಾಗಿದೆ.
ಹೆಚ್ಚುವರಿಯಾಗಿ ಬಳಕೆದಾರರು ChatGPT ತಮ್ಮ ಬಗ್ಗೆ ಏನು ನೆನಪಿಸಿಕೊಳ್ಳುತ್ತದೆ ಎಂದು ಕೇಳಬಹುದು ಮತ್ತು ನಿರ್ದಿಷ್ಟ ಸಂಭಾಷಣೆ ಉಳಿಸದಂತೆ ‘Temporary Chat’ ಆಯ್ಕೆಯನ್ನು ಸಹ ಆಯ್ಕೆ ಮಾಡಬಹುದು. ಕಳೆದ ವರ್ಷ ಓಪನ್‌ಎಐ ಒಂದು ವೈಶಿಷ್ಟ್ಯ ಪರಿಚಯಿಸಿತು. ಇದರಲ್ಲಿ ಬಳಕೆದಾರರು ಚಾಟ್‌ಜಿಪಿಟಿಗೆ ಏನು ನೆನಪಿಟ್ಟುಕೊಳ್ಳಬೇಕು ಮತ್ತು ಏನು ನೆನಪಿಟ್ಟುಕೊಳ್ಳಬಾರದು ಎಂಬುದನ್ನು ಮ್ಯಾನುವಲ್ ಆಗಿ ಸೆಟ್ಟಿಂಗ್ ಮಾಡಬೇಕಾಗಿತ್ತು. ಆದರೆ ಈಗ ಈ ಪ್ರಕ್ರಿಯೆಯು ಇನ್ನೂ ಸುಲಭ ಮತ್ತು ಆಟೋಮೆಟಿಕ್ ಆಗಿ ಮಾರ್ಪಟ್ಟಿದೆ. ಈಗಾಗಲೇ ಮೆಮೊರಿ ವೈಶಿಷ್ಟ್ಯವನ್ನು ಆನ್ ಮಾಡಿರುವ ಬಳಕೆದಾರರಿಗೆ ಈ ಹೊಸ ಅಪ್ಡೇಟ್ ಆಟೋಮೆಟಿಕ್ ಆಗಿ ಸಕ್ರಿಯಗೊಳ್ಳುತ್ತದೆ.
ಒಟ್ಟಾರೆಯಾಗಿ ಈ ಮೆಮೊರಿ ವೈಶಿಷ್ಟ್ಯವು ChatGPT ಯನ್ನು ಮಾನವ ತಿಳುವಳಿಕೆ ಮತ್ತು ವೈಯಕ್ತಿಕ ಸಹಾಯಕದ ಕಡೆಗೆ ಮತ್ತೊಂದು ಹೆಜ್ಜೆ ಇಡುತ್ತದೆ. ಇದು ಸಂಭಾಷಣೆಗಳನ್ನು ಹೆಚ್ಚು ಸ್ವಾಭಾವಿಕವಾಗಿಸುವುದಲ್ಲದೆ ಬಳಕೆದಾರರ ಅನುಭವವನ್ನು ಸಂಪೂರ್ಣವಾಗಿ ಅಪ್ಗ್ರೇಡ್ ಮಾಡುತ್ತದೆ.
ಚಾಟ್ಜಿಪಿಟಿ ಎಂದರೇನು?: ChatGPT ಎಂಬುದು OpenAI ಎಂಬ ಕಂಪನಿಯಿಂದ ರಚಿಸಲ್ಪಟ್ಟ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. ಇದು ಮನುಷ್ಯರಂತೆ ಅರ್ಥಮಾಡಿಕೊಳ್ಳುವ ಮತ್ತು ಪ್ರತಿಕ್ರಿಯಿಸುವ ಒಂದು ವ್ಯವಸ್ಥೆ. ನೀವು ಪ್ರಶ್ನೆಯನ್ನು ಕೇಳಿದಾಗ ಅಥವಾ ChatGPT ಜೊತೆ ಮಾತನಾಡಿದಾಗ, ಅದು ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಓದುತ್ತದೆ ಮತ್ತು ನೀವು ಏನು ಹೇಳಬೇಕೆಂದು ಬಯಸುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ. ನಂತರ ಅದು ಹೊಂದಿರುವ ಜ್ಞಾನದ ಆಧಾರದ ಮೇಲೆ ಪ್ರತಿಕ್ರಿಯೆಯನ್ನು ಉತ್ಪಾದಿಸುತ್ತದೆ. ನಿಮ್ಮ ಪ್ರಶ್ನೆಗೆ ಸಮಂಜಸವಾದ, ನಿಖರವಾದ ಮತ್ತು ಮಾನವೀಯವಾದ ಉತ್ತರವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
ಓದಿ: ಸ್ಟೈಲಿಶ್ ಡಿಸೈನ್, ಮಾರ್ಡನ್ ಕ್ಯಾಮೆರಾ ಫೀಚರ್: ದೇಶಿಯ ಮಾರುಕಟ್ಟೆಗೆ ಅಪ್ಪಳಿಸಿದ ವಿವೋ ನ್ಯೂ ಫೋನ್