ವಾರೇ ವ್ಹಾ ಟೆಕ್ನಾಲಜಿ!: ಇಂಟರ್‌ಸೆಪ್ಟರ್ ಬೈಕ್ನಿಂದ ಹೈಟೆಕ್ ಆಗಲಿದೆ ಟ್ರಾಫಿಕ್ ಪೊಲೀಸ್!
Traffic Infratech Expo 2025: ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್‌ಪೋ 2025 ದಲ್ಲಿ ಅನೇಕ ಬೈಕ್ ಮತ್ತು ಕಾರುಗಳು ಜೊತೆ ಹೊಸ ಟೆಕ್ನಾಲಜಿಗಳನ್ನು ಪ್ರದರ್ಶಿಸಲಾಗ್ತಿದೆ. ಅದರ ಒಂದು ನೋಟ ಇಲ್ಲಿದೆ.

Published : October 9, 2025 at 5:32 PM IST
|Updated : October 10, 2025 at 7:33 AM IST
Traffic Infratech Expo 2025: ದೇಶದ ಸಾರಿಗೆ ಮೂಲಸೌಕರ್ಯವು ಸ್ಮಾರ್ಟ್ ಮತ್ತು ಆಧುನಿಕವಾಗಿ ವೇಗವಾಗಿ ರೂಪಾಂತರಗೊಳ್ಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಜಾಲದ ದ್ವಿಗುಣಗೊಳಿಸುವಿಕೆಯಿಂದ ಮೆಟ್ರೋ ಕಾರಿಡಾರ್‌ಗಳು, ಎಕ್ಸ್‌ಪ್ರೆಸ್‌ವೇಗಳು ಮತ್ತು ಬಹು - ಮಾದರಿ ಸಾರಿಗೆ ವ್ಯವಸ್ಥೆಗಳವರೆಗೆ ಭಾರತವು ಕಳೆದ ದಶಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಆದರೆ, ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆ, ಪಾರ್ಕಿಂಗ್ ಮತ್ತು ಸುಸ್ಥಿರತೆಯಂತಹ ಸವಾಲುಗಳು ಸಹ ಹೆಚ್ಚಿವೆ. ಗ್ರೇಟರ್ ನೋಯ್ಡಾದಲ್ಲಿ ನಡೆದ ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್‌ಪೋ 2025 ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಭವಿಷ್ಯದ ಹಾದಿಯನ್ನು ರೂಪಿಸಲು ನಿರ್ಣಾಯಕ ವೇದಿಕೆಯಾಗಿದೆ.
ಮೆಸ್ಸೆ ಫ್ರಾಂಕ್‌ಫರ್ಟ್ ಟ್ರೇಡ್ ಫೇರ್ಸ್ ಇಂಡಿಯಾ ಮತ್ತು ವರ್ಚುವಲ್ ಇನ್ಫೋ ಸಿಸ್ಟಮ್ಸ್ (ವಿಐಎಸ್ ಗ್ರೂಪ್) ಪ್ರೈವೇಟ್ ಲಿಮಿಟೆಡ್ ಆಯೋಜಿಸಿರುವ ಈ ಎಕ್ಸ್‌ಪೋ 300ಕ್ಕೂ ಹೆಚ್ಚು ಬ್ರ್ಯಾಂಡ್‌ಗಳನ್ನು ಪ್ರದರ್ಶಿಸುತ್ತದೆ ಮತ್ತು ಅವುಗಳ ಉತ್ಪನ್ನಗಳು ಹಾಗೂ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ. ಐಟಿಎಸ್/ಟೆಲಿಮ್ಯಾಟಿಕ್ಸ್, ಟೋಲ್ ಮತ್ತು ದರಗಳು, ರಸ್ತೆ ಸುರಕ್ಷತೆ, ಕಣ್ಗಾವಲು ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಪಾರ್ಕಿಂಗ್ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿನ ನಾವೀನ್ಯತೆಗಳು ಪ್ರಮುಖ ಮುಖ್ಯಾಂಶಗಳಾಗಿವೆ. ಸರ್ಕಾರಿ ಪ್ರತಿನಿಧಿಗಳು, ನೀತಿ ನಿರೂಪಕರು, ನಗರ ಯೋಜಕರು ಮತ್ತು ತಂತ್ರಜ್ಞಾನ ತಜ್ಞರು ಈ ವೇದಿಕೆಯಲ್ಲಿ ಚರ್ಚಿಸಲಿದ್ದಾರೆ.
ಅಕ್ಟೋಬರ್ 7 ರಿಂದ 9 ರಂದು ನಡೆದ ಸ್ಮಾರ್ಟ್ ಮೊಬಿಲಿಟಿ ಶೃಂಗಸಭೆಯಲ್ಲಿ ಸುಸ್ಥಿರ ಹೆದ್ದಾರಿಗಳು, ತಡೆರಹಿತ ಟೋಲಿಂಗ್, ನಗರ ಪಾರ್ಕಿಂಗ್ ಮತ್ತು ರಸ್ತೆ ಸುರಕ್ಷತೆಯಂತಹ ವಿಷಯಗಳ ಕುರಿತು ಪ್ಯಾನೆಲ್ ಚರ್ಚೆಗಳು ನಡೆದವು. HOA(I), IHMCL, CUMTA ಮತ್ತು ITS ಇಂಡಿಯಾ ಫೋರಂನ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇದಲ್ಲದೇ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ಭವಿಷ್ಯಕ್ಕಾಗಿ ಸಾರಿಗೆಯನ್ನು ಪರಿವರ್ತಿಸುವುದು’ ಎಂಬ ವಿಷಯದ ಕುರಿತು ಪಾಲುದಾರರ ಸಭೆ ಸಹ ಆಯೋಜಿಸಿತು.
ಸ್ಥಳೀಯ ತಂತ್ರಜ್ಞಾನಗಳನ್ನು ಉತ್ತೇಜಿಸಲು C-DAC ಮತ್ತು ICAT ನಡುವೆ ಒಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಎಕ್ಸ್‌ಪೋ AI-ಪವರ್ಡ್ ಟ್ರಾಫಿಕ್ ಮಾನಿಟರಿಂಗ್, ರಿಯಲ್-ಟೈಂ ಡೇಟಾ ಪ್ಲಾಟ್‌ಫಾರ್ಮ್‌ಗಳು, EV ಚಾರ್ಜಿಂಗ್ ಮೂಲಸೌಕರ್ಯ ಮತ್ತು ಸಂಯೋಜಿತ ನಗರ ಸಾರಿಗೆ ಪರಿಹಾರಗಳನ್ನು ಪ್ರದರ್ಶಿಸಿದೆ. ಪಾರ್ಕಿಂಗ್ ಟೆಕ್ನಾಲಾಜಿಯಲ್ಲಿ ಸೆನ್ಸಾರ್ ಆಧಾರದ ಆಟೋಮೆಷನ್, ಡಿಜಿಟಲ್ ಪಾವತಿಗಳು ಮತ್ತು EV ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳು ಪ್ರಮುಖ ಮುಖ್ಯಾಂಶಗಳಾಗಿವೆ.
ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ ನಗರ ರಸ್ತೆಗಳಲ್ಲಿ ಶೇ.30ರಷ್ಟು ಜಾಗವನ್ನು ಮುಕ್ತಗೊಳಿಸಬಹುದು ಎಂದು ತಜ್ಞರು ನಂಬುತ್ತಾರೆ. ರಸ್ತೆ ಸುರಕ್ಷತೆಯ ಕ್ಷೇತ್ರದಲ್ಲಿ ಪ್ರದರ್ಶಕರು AI-ಸಕ್ರಿಯಗೊಳಿಸಿದ ಕ್ಯಾಮೆರಾಗಳು, IoT-ಆಧಾರಿತ ಅಪಘಾತ ಪತ್ತೆ ವ್ಯವಸ್ಥೆಗಳು ಮತ್ತು ಸ್ಮಾರ್ಟ್ ವೇಗ ನಿರ್ವಹಣಾ ವ್ಯವಸ್ಥೆಗಳನ್ನು ಪ್ರದರ್ಶಿಸಿದರು. ಇದು ಅಪಘಾತಗಳನ್ನು ಶೇ. 40ರಷ್ಟ ವರೆಗೆ ಕಡಿಮೆ ಮಾಡಬಹುದು. ಅದೇ ಸಮಯದಲ್ಲಿ, ಡಿಜಿಟಲ್ ಸಂಚಾರ ನಿರ್ವಹಣೆಯು ನೈಜ-ಸಮಯದ ನವೀಕರಣಗಳು ಮತ್ತು ಸಂಯೋಜಿತ ಕಮಾಂಡ್ ಕೇಂದ್ರವನ್ನು ಪ್ರದರ್ಶಿಸಿತು.
ಈ ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದ ಮೆಸ್ಸೆ ಫ್ರಾಂಕ್‌ಫರ್ಟ್ ಏಷ್ಯಾ ಹೋಲ್ಡಿಂಗ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ರಾಜ್ ಮಾಣೆಕ್, ‘ಭಾರತವು ಮೂಲಸೌಕರ್ಯ ಕ್ರಾಂತಿಗೆ ಒಳಗಾಗುತ್ತಿದೆ. ಅಭಿವೃದ್ಧಿ ಸುರಕ್ಷಿತ, ಸುಸ್ಥಿರ ಮತ್ತು ಸ್ಮಾರ್ಟ್ ಆಗಿದ್ದಾಗ ಮಾತ್ರ ನಿಜವಾದ ಯಶಸ್ಸು ಸಾಧಿಸಲ್ಪಡುತ್ತದೆ. ಈ ಪ್ರದರ್ಶನವು ನಿರ್ಧಾರ ತೆಗೆದುಕೊಳ್ಳುವವರು ಮತ್ತು ತಂತ್ರಜ್ಞಾನ ಪೂರೈಕೆದಾರರ ನಡುವಿನ ವಿಚಾರ ವಿನಿಮಯಕ್ಕೆ ನಿಷ್ಪಕ್ಷಪಾತ ವೇದಿಕೆಯಾಗಿದೆ’ ಎಂದು ಹೇಳಿದರು.
ವರ್ಚುಯಲ್ ಇನ್ಫೋ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜೈಪ್ರಕಾಶ್ ನಾಯರ್ ಮಾತನಾಡಿ, ‘ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್‌ಪೋ - ಪಾರ್ಕಿಂಗ್ ಇನ್ಫ್ರಾಟೆಕ್, ರೋಡ್ ಇನ್ಫ್ರಾಟೆಕ್ ಮತ್ತು ಸ್ಮಾರ್ಟ್ ಮೊಬಿಲಿಟಿ ಸಮ್ಮೇಳನದ ಜೊತೆಗೆ ನಡೆಯುವ ಎಲ್ಲ ಪ್ರದರ್ಶನಗಳು ಸಂಪೂರ್ಣ ಮೊಬಿಲಿಟಿ ಸಿಸ್ಟಮ್ನ 360-ಡಿಗ್ರಿ ಲುಕ್ ಅನ್ನು ನೀಡುತ್ತವೆ. ಈ ವೇದಿಕೆಯು ಉದ್ಯಮವು ಹೊಸ ಪಾಲುದಾರಿಕೆಗಳು ಮತ್ತು ಯೋಜನೆಗಳನ್ನು ರೂಪಿಸಲು ಒಂದು ಅವಕಾಶವಾಗಿದೆ’ ಎಂದು ಹೇಳಿದರು.
ಇಂಟರ್‌ಸೆಪ್ಟರ್ ಬೈಕ್: ಸಂಚಾರ ಪೊಲೀಸರನ್ನು ಹೆಚ್ಚು ಹೈಟೆಕ್ ಮಾಡಲು ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸಂಚಾರ ಪೊಲೀಸರು ಈಗ ನಾಲ್ಕು ಚಕ್ರಗಳ ವಾಹನಗಳಿಂದ ಮಾತ್ರವಲ್ಲದೇ ಬೈಕ್ ಇಂಟರ್‌ಸೆಪ್ಟರ್‌ಗಳೊಂದಿಗೆ ಸಹ ಚಲನ್‌ಗಳನ್ನು ನೀಡಬಹುದು. ಈ ಹೊಸ ತಂತ್ರಜ್ಞಾನ ಆಧಾರಿತ ಬೈಕ್ ಇಂಟರ್‌ಸೆಪ್ಟರ್ ಅನ್ನು ಭಾರತ್ ಮಂಟಪದಲ್ಲಿ ನಡೆದ ಟ್ರಾಫಿಕ್ ಇನ್‌ಫ್ರಾಟೆಕ್ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಯಿತು.
ಟ್ರಾಫಿಕ್ ಇನ್‌ಫ್ರಾಟೆಕ್ ಎಕ್ಸ್‌ಪೋದಲ್ಲಿ ಪರಿಚಯಿಸಲಾದ ಈ ಇಂಟರ್‌ಸೆಪ್ಟರ್ ಬೈಕ್ ಗಸ್ತು ತಿರುಗುವಾಗಲೂ ಚಲನ್‌ಗಳನ್ನು ನೀಡಲು ಅನುವು ಮಾಡಿಕೊಡುವ ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೇ ಈ ಕ್ಯಾಮೆರಾಗಳನ್ನು ಇಂಟರ್‌ಸೆಪ್ಟರ್‌ನ ಬದಿಯಲ್ಲಿ ಅಳವಡಿಸಿದರೆ ಅವರು ಅಲ್ಲಿಂದಲೂ ಉಲ್ಲಂಘನೆಗಳನ್ನು ಪತ್ತೆ ಮಾಡಬಹುದು.
ಈ ಇಂಟರ್‌ಸೆಪ್ಟರ್ ಬೈಕ್ ತಂತ್ರಜ್ಞಾನವನ್ನು ಪರಿಚಯಿಸಿದ ಕಂಪನಿಯ ಅಧಿಕಾರಿ ಶಿವ್ಯಾ ಕಾರ್ತಿಕೇಯ, ‘ರಸ್ತೆಗಳನ್ನು ಸುರಕ್ಷಿತವಾಗಿರಿಸುವುದು ನಮ್ಮ ಗುರಿ. ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಿದರೆ ಮಾತ್ರ ಇದು ಸಾಧ್ಯ. ಅದಕ್ಕಾಗಿಯೇ ಈ ಇಂಟರ್‌ಸೆಪ್ಟರ್ ಬೈಕ್ ಅಭಿವೃದ್ಧಿಪಡಿಸಲಾಗಿದೆ. ದೆಹಲಿ ಮತ್ತು ದೇಶದ ಇತರ ಮಹಾನಗರ ಪ್ರದೇಶಗಳಲ್ಲಿ ಸಂಚಾರ ಸಮಸ್ಯೆಗಳು ಸಾಮಾನ್ಯವಾಗಿದೆ. ಜನರು ತಮ್ಮ ಆತುರ ಮತ್ತು ಕೆಲಸಕ್ಕೆ ಧಾವಿಸುವುದರಿಂದ ಆಗಾಗ್ಗೆ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾರೆ’ ಎಂದು ಮಾಹಿತಿ ನೀಡಿದರು.
ಫೋನ್‌ಗಳನ್ನು ಚಾರ್ಜ್ ಮಾಡಲು ಪ್ರತ್ಯೇಕ ಸೌಲಭ್ಯ: ಟ್ರಾಫಿಕ್ ಚಲನ್‌ಗಳನ್ನು ಸುಲಭವಾಗಿ ಮತ್ತು ಹೆಚ್ಚಿನ ಮಾನವಶಕ್ತಿಯ ಅಗತ್ಯವಿಲ್ಲದೇ ಪ್ರಕ್ರಿಯೆಗೊಳಿಸಲು ಈ ಇಂಟರ್‌ಸೆಪ್ಟರ್ ಬೈಕ್ ವಿನ್ಯಾಸಗೊಳಿಸಲಾಗಿದೆ. ಇದು ಡೇಟಾ ಸ್ಟೋರೇಜ್ ಸಿಸ್ಟಮ್ ಅನ್ನು ಸಹ ಒಳಗೊಂಡಿದೆ. ಹೆಚ್ಚುವರಿಯಾಗಿ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಯ ಫೋನ್ ಅನ್ನು ಚಾರ್ಜ್ ಮಾಡಲು ಪ್ರತ್ಯೇಕ ಬ್ಯಾಟರಿ ಸ್ಥಾಪಿಸಲಾಗಿದೆ. ಈ ಇಂಟರ್‌ಸೆಪ್ಟರ್ ಬೈಕ್ ಉಲ್ಲಂಘನೆಗಳನ್ನು ಪತ್ತೆ ಮಾಡುತ್ತದೆ ಮತ್ತು ಸಂಚಾರ ಪೊಲೀಸ್ ಕಂಟ್ರೋಲ್ ರೂಂಗೆ ಫೋಟೋಗಳನ್ನು ಕಳುಹಿಸುತ್ತದೆ.
ಸ್ಥಿರವಾಗಿದ್ದಾಗಲೂ ಕಾರ್ಯನಿರ್ವಹಿಸುತ್ತದೆ: ನಂತರ ಚಲನ್ ಅನ್ನು NIC (ರಾಷ್ಟ್ರೀಯ ಮಾಹಿತಿ ಕೇಂದ್ರ) ಸರ್ವರ್‌ನಿಂದ ನೀಡಲಾಗುತ್ತದೆ ಮತ್ತು ಅಪರಾಧಿಯ ಫೋನ್‌ಗೆ ಕಳುಹಿಸಲಾಗುತ್ತದೆ. ಇದಲ್ಲದೇ ಇಂಟರ್‌ಸೆಪ್ಟರ್ ಬೈಕ್ ನಿಲ್ಲಿಸಿದ್ದರೂ ಸಹ ಅದು ಅಪರಾಧಿಗಳ ಮೇಲೆ ಕಣ್ಣಿಡಬಹುದು. ಇಲ್ಲಿಯವರೆಗೆ ಸಂಚಾರ ಪೊಲೀಸರು ಫೋರ್ ವ್ಹೀಲ್ ವೆಹಿಕಲ್ಗಳನ್ನು ಇಂಟರ್‌ಸೆಪ್ಟರ್‌ಗಳಾಗಿ ಬಳಸುತ್ತಿದ್ದರು. ಆದರೂ ಅವುಗಳ ಸಂಖ್ಯೆಗಳು ತುಂಬಾ ಕಡಿಮೆ. ಹಳೆಯ ನಾಲ್ಕು ಚಕ್ರಗಳ ಇಂಟರ್‌ಸೆಪ್ಟರ್‌ಗಳಲ್ಲಿನ ಕ್ಯಾಮೆರಾಗಳು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಈ ಬೈಕ್ ಇಂಟರ್‌ಸೆಪ್ಟರ್ ವ್ಯವಸ್ಥೆಯನ್ನು ಬೈಕ್‌ನಲ್ಲಿ ಸ್ಥಾಪಿಸಲು ನಾಲ್ಕರಿಂದ ಐದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ.
ಅಂತಹ ತಂತ್ರಜ್ಞಾನಗಳಿಗೆ ಉತ್ತಮ ವೇದಿಕೆ: ಇದೇ ವೇಳೆ ಟ್ರಾಫಿಕ್ ಇನ್ಫ್ರಾಟೆಕ್ ಎಕ್ಸ್‌ಪೋದ ಸಂಘಟಕರಾದ ಮಂಗಳ ಚಂದ್ರನ್ ಮಾತನಾಡಿ, ‘ಟ್ರಾಫಿಕ್ ಪೊಲೀಸರನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ಸಜ್ಜುಗೊಳಿಸುವುದು ಮತ್ತು ರಸ್ತೆಗಳನ್ನು ಸುರಕ್ಷಿತವಾಗಿಸುವುದು ನಮ್ಮ ಪ್ರಯತ್ನವಾಗಿದೆ. ಆದ್ದರಿಂದ ಪ್ರತಿ ವರ್ಷ ಈ ಎಕ್ಸ್‌ಪೋವನ್ನು ಆಯೋಜಿಸುವ ಮೂಲಕ ನಾವು ಹೊಸ ತಂತ್ರಜ್ಞಾನಗಳ ಡೆವಲಪರ್‌ಗಳು ಮತ್ತು ಬಳಕೆದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತೇವೆ’ ಎಂದು ಹೇಳಿದರು.
ಪ್ರಮಾ ಇಂಡಿಯಾ, ವಿಡಿಯೋ ನೆಟಿಕ್ಸ್, ಗ್ರೀನ್‌ಟೆಕ್ ಐಟಿಎಸ್, ಆದಿತ್ಯ ಇನ್ಫೋಟೆಕ್-ಸಿಪಿ ಪ್ಲಸ್, ನಾರ್ಡೆನ್ ಕಮ್ಯುನಿಕೇಷನ್, ಡೇಟಾ ಕಾರ್ಪ್ ಟ್ರಾಫಿಕ್ ಮತ್ತು ಮೆಟ್ರೋ ಕೌಂಟ್‌ನಂತಹ ಭಾರತೀಯ ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ. ಜೊತೆಗೆ ಆಸ್ಟ್ರೇಲಿಯಾ, ಜರ್ಮನಿ, ಮೆಕ್ಸಿಕೊ, ತೈವಾನ್, ಯುಎಇ ಮತ್ತು ಅಮೆರಿಕ ನಂತಹ ದೇಶಗಳ ಅಂತರರಾಷ್ಟ್ರೀಯ ತಂಡದವರು ಸಹ ಭಾಗವಹಿಸಿದರು.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಡಿಜಿಟಲ್ ಇಂಡಿಯಾ, NHAI ಮತ್ತು CRRI ನಂತಹ ಸಂಸ್ಥೆಗಳ ಬೆಂಬಲದೊಂದಿಗೆ ಆಯೋಜಿಸಲಾಗಿರುವ ಈ ಪ್ರದರ್ಶನವು ಮುಂಬರುವ ವರ್ಷಗಳಲ್ಲಿ ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯ ಕಡೆಗೆ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ.
ಓದಿ: ಪೆಟ್ರೋಲ್, ಎಲೆಕ್ಟ್ರಿಕ್ ಚಾರ್ಜ್‌ಗೆ ಹೇಳಿ ಗುಡ್ಬೈ! ಮಾರುತಿಯಿಂದ ಬರ್ತಿದೆ ಫುಲ್ ಎಥೆನಾಲ್ ಕಾರು

