Aston Martin Vanquish Car: ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕ ಆಸ್ಟನ್ ಮಾರ್ಟಿನ್ ತನ್ನ ಮೂರನೇ ತಲೆಮಾರಿನ 'ಆಸ್ಟನ್ ಮಾರ್ಟಿನ್ ವ್ಯಾನ್‌ಕ್ವಿಶ್' ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಕಾರಿನ ಆರಂಭಿಕ ಬೆಲೆ ₹8.85 ಕೋಟಿ (ಎಕ್ಸ್ ಶೋ ರೂಂ). ಅತ್ಯಾಕರ್ಷಕ ಆಸ್ಟನ್ ಮಾರ್ಟಿನ್ ಜಿಟಿ ಒಳಗೆ ಮತ್ತು ಹೊರಗೆ ಹಲವು ಅಪ್ಡೇಟ್ಗಳನ್ನು ಹೊಂದಿದೆ. ಇದು ಬ್ರಿಟಿಷ್ ಕಾರು ತಯಾರಕರಿಂದ ಬಂದ ಅತ್ಯಂತ ಶಕ್ತಿಶಾಲಿ ದಹನಕಾರಿ ಎಂಜಿನ್ ರೋಡ್ ಓರಿಯೆಂಟೆಡ್ ಕಾರು ಎಂಬುದು ವಿಶೇಷ.
ವಿನ್ಯಾಸ: ಸಿಗ್ನೇಚರ್ ವೇಯ್ನ್ಡ್ ಗ್ರಿಲ್ ಗಾತ್ರವನ್ನು ಹೆಚ್ಚಿಸಲಾಗಿದೆ. V12 ಎಂಜಿನ್‌ಗೆ ಹೆಚ್ಚಿನ ಗಾಳಿ ಹರಿದಾಡುವಂತೆ ಮಾಡುತ್ತದೆ. ಗಾಳಿ ಹರಿದಾಡುವುದಕ್ಕೆ ಸಹಾಯ ಮಾಡುವ 2 ಫಿನ್ ಆಕಾರದ ಬಾನೆಟ್ ಸ್ಕೂಪ್‌ಗಳಿವೆ. ಮುಂಭಾಗದಲ್ಲಿ ವ್ಯಾಂಟೇಜ್ ತರಹದ ಸ್ವೆಫ್ಟ್‌ಬ್ಯಾಕ್ LED ಹೆಡ್‌ಲೈಟ್‌ಗಳಿವೆ. ಹಿಂಭಾಗದಲ್ಲಿ ಪ್ರತ್ಯೇಕವಾದ ಪ್ಯಾಟರ್ನ್ ಇದೆ.
ಇತ್ತೀಚಿನ ವ್ಯಾಂಕ್ವಿಷ್ ಗ್ರ್ಯಾಂಡ್ ಟೂರರ್ ಟೂ-ಡೋರ್ ಕೂಪ್ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ. ಆದರೂ ಎ-ಪಿಲ್ಲರ್ ಮತ್ತು ಫ್ರಂಟ್ ವೀಲ್ ನಡುವಿನ ಅಂತರ ಹೆಚ್ಚಾದ ಕಾರಣ ಈಗ ಅದು ಮೊದಲಿಗಿಂತ ಸ್ವಲ್ಪ ಉದ್ದವಾಗಿದೆ. ಫೆಂಡರ್‌ಗಳ ಮೇಲಿನ ಕಾರ್ಬನ್-ಫೈಬರ್ ಸೈಡ್ ಸ್ಟ್ರೈಕ್‌ಗಳೂ ದೊಡ್ಡದಾಗಿವೆ ಮತ್ತು ಡೋರ್ಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಇದಲ್ಲದೆ ಹೊಸ 21-ಇಂಚಿನ ಫೋರ್ಜ್ಡ್ ವೀಲ್ಸ್ ಇದರಲ್ಲಿದೆ. ಇವುಗಳಲ್ಲಿ ಕಸ್ಟಮ್ ಪಿರೆಲ್ಲಿ ಟೈರ್‌ಗಳು ಸೇರಿವೆ.

ವ್ಯಾನ್‌ಕ್ವಿಶ್ ಭಾರೀ ಗಾತ್ರದ ರಿಯರ್ ವೀಲ್ಸ್ ಆರ್ಚ್ ಮತ್ತು ಎರಡನೇ ತಲೆಮಾರಿನ ವ್ಯಾನ್‌ಕ್ವಿಶ್‌ನಂತೆಯೇ ಸ್ಲೋಪಿಂಗ್ ರೂಫ್ಲೈನ್ ಹೊಂದಿದೆ. ಹೊಸ ವ್ಯಾನ್‌ಕ್ವಿಶ್ ಕ್ವಾಡ್ ಎಕ್ಸಾಸ್ಟ್ ಟಿಪ್ಸ್ ಮತ್ತು ಹೆಚ್ಚಿನ ವೇಗದಲ್ಲಿ ಸ್ಥಿರತೆಗಾಗಿ ಸೆಂಟರ್ ಆ್ಯಂಡ್ ಔಟರ್ ಬ್ಲೇಡ್‌ಗಳೊಂದಿಗೆ ಅಗ್ರೆಸಿವ್-ಲುಕ್ನಲ್ಲಿ ಡಿಫ್ಯೂಸರ್‌ನೊಂದಿಗೆ ಬರುತ್ತದೆ. ಟೈಲ್-ಲೈಟ್‌ಗಳ ನಡುವೆ 4 ಇಂಚು ಅಗಲದ 'ಶೀಲ್ಡ್' ಪ್ಯಾನೆಲ್ ಅನ್ನು ಕೂಡ ಸೇರಿಸುತ್ತದೆ. ಇದನ್ನು ಬಾಡಿ ಕಲರ್, ಗ್ಲಾಸ್ ಬ್ಲ್ಯಾಕ್ ಅಥವಾ ಕಾರ್ಬನ್-ಫೈಬರ್ ಫಿನಿಷಿಂಗ್ನಲ್ಲಿ ಖರೀದಿಸಬಹುದು.
ಇಂಟೀರಿಯರ್: ಕಾರಿನ 2-ಸೀಟ್ಸ್ ಇಂಟೀರಿಯರ್ ಹಿಂದಿನ ಮಾದರಿಗೆ ಹೋಲಿಸಿದರೆ ಸಂಪೂರ್ಣವಾಗಿ ಮರುವಿನ್ಯಾಸ ಮಾಡಿರುವುದನ್ನು ಗಮನಿಸಬಹುದು. ಹಾಗಾಗಿ, ಈ ಪೀಳಿಗೆಯ ಆಸ್ಟನ್ ಮಾರ್ಟಿನ್‌ನಂತೆ ಕಾಣುತ್ತದೆ. ಡ್ಯಾಶ್‌ಬೋರ್ಡ್ 10.25-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಸಜ್ಜುಗೊಂಡಿದೆ. ಆ್ಯಪಲ್ ಕಾರ್ಪ್ಲೇ (ವೈರ್‌ಲೆಸ್) ಮತ್ತು ಆ್ಯಂಡ್ರಾಯ್ಡ್ ಆಟೋ (ವೈರ್ಡ್) ಒಳಗೊಂಡಿದೆ. ಅದೇ ಗಾತ್ರದ ಡೈವರ್ ಡಿಸ್ಪ್ಲೇ ಆಸ್ಟನ್ ಮಾರ್ಟಿನ್‌ನ ಹೊಸ ಸಾಫ್ಟ್‌ವೇರ್ ಸ್ಟ್ಯಾಕ್ ಅನ್ನು ರನ್ ಮಾಡುತ್ತದೆ.
ಕಾರಿನ ಆಡಿಯೋ ಮತ್ತು ಹವಾಮಾನಕ್ಕೆ ಫಿಜಿಕಲ್ ಕಂಟ್ರೋಲ್ಸ್ ಜೊತೆ ಯಾವುದೇ ಬದಲಾವಣೆಗಳಿಲ್ಲ. ಹಾಗೆಯೇ ಗೇರ್‌ಬಾಕ್ಸ್‌ನಲ್ಲಿರುವ ಮ್ಯಾನುವಲ್ ಮೋಡ್ ಬಟನ್‌ನಲ್ಲಿಯೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೆಚ್ಚಿನ ಕ್ಯಾಬಿನ್ ಅಲ್ಕಾಂಟರಾದಲ್ಲಿ ಪೂರ್ಣಗೊಂಡಿದೆ. ಆಸನಗಳು ಹೊಸ ಕ್ವಿಲ್ಟೆಡ್ ವಿನ್ಯಾಸವನ್ನು ಪಡೆದುಕೊಂಡಿವೆ. ಹೊಸ ವ್ಯಾನ್‌ಕ್ವಿಶ್ ಸ್ಥಿರ ಗಾಜಿನ ರೂಫ್‌ನೊಂದಿಗೆ ಬರುತ್ತದೆ. ಆದರೂ ಗ್ರಾಹಕರು ಕಾರ್ಬನ್ ಫೈಬರ್ ರೂಫ್ ಅನ್ನು ಸಹ ಆಯ್ಕೆ ಮಾಡಬಹುದು. ಇದರೊಂದಿಗೆ 1,170-ವ್ಯಾಟ್, 15-ಸ್ಪೀಕರ್ ಬೋವರ್ಸ್ & ವಿಲ್ಕಿನ್ಸ್ ಸೌಂಡ್ ಸಿಸ್ಟಮ್ ಹೊಂದಿದೆ.
ಎಂಜಿನ್: ವ್ಯಾನ್‌ಕ್ವಿಶ್ ಕಾರು ಹೊಸ 5.2-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಳೆಯ 6.0-ಲೀಟರ್, ನ್ಯಾಚುರಲಿ ಆಸ್ಪಿರೇಟೆಡ್ V12 ಎಂಜಿನ್ ಅನ್ನು ಬದಲಾಯಿಸುತ್ತದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಅದು ಹೈಬ್ರಿಡ್ ಸಿಸ್ಟಮ್ಗೆ ಸಂಬಂಧಿಸಿಲ್ಲ. ಇದರ ಹೊಸ ಎಂಜಿನ್ 823.5bhp ಪವರ್ ಮತ್ತು 1,000Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲ್ಪಟ್ಟಿದೆ. ಈ ಕಾರು 3.3 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 345 ಕಿ.ಮೀ. ಇದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಆಟೋಗಳಿಗೆ ಹೇಳಿ ಗುಡ್ಬೈ: 'ಇ'-ಆಟೋ ಸಿಂಗಲ್ ಚಾರ್ಜ್ಗೆ 300 ಕಿ.ಮೀ ಮೈಲೇಜ್!