Apple Airlifts iPhones From India: ಟೆಕ್ನಾಲಜಿ ಲೋಕದಲ್ಲಿ ಸಂಚಲನ ಮೂಡಿಸುವ ಸುದ್ದಿಯೊಂದು ಹೊರಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಭಾರೀ ಸುಂಕಗಳಿಂದ ತಪ್ಪಿಸಿಕೊಳ್ಳಲು ಆಪಲ್ ಭಾರತದಿಂದ 600 ಟನ್ ಐಫೋನ್‌ಗಳನ್ನು ರವಾನಿಸಿದೆ. ವರದಿಗಳ ಪ್ರಕಾರ, ಈ ಐಫೋನ್‌ಗಳನ್ನು ವಿಶೇಷ ಏರ್ ಕಾರ್ಗೋ ವಿಮಾನಗಳ ಮೂಲಕ ಅಮೆರಿಕಕ್ಕೆ ಕಳುಹಿಸಲಾಗಿದೆ.
ಆಪಲ್‌ನ ತಂತ್ರವು, ಟ್ರಂಪ್‌ರ ಸುಂಕಗಳ ಹೊರೆಯಿಂದ ತನ್ನ ಅತಿದೊಡ್ಡ ಮಾರುಕಟ್ಟೆಯಾದ ಅಮೆರಿಕದಲ್ಲಿ ತನ್ನ ಐಫೋನ್ ದಾಸ್ತಾನುಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಸುಂಕ ಜಾರಿಗೆ ಬಂದರೆ ಅಮೆರಿಕದಲ್ಲಿ ಐಫೋನ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಬಹುದು ಎಂದು ತಜ್ಞರು ನಂಬಿದ್ದಾರೆ. ಒಂದು ಐಫೋನ್‌ನ ಸರಾಸರಿ ಪ್ಯಾಕಿಂಗ್ ತೂಕ ಸುಮಾರು 350 ಗ್ರಾಂ ಮತ್ತು ಆದ್ದರಿಂದ 600 ಟನ್‌ಗಳು ಎಂದರೆ ಸುಮಾರು 1.5 ಮಿಲಿಯನ್ ಐಫೋನ್‌ಗಳನ್ನು ಯುಎಸ್‌ಗೆ ರವಾನಿಸಲಾಗಿದೆ.
ಭಾನುವಾರವೂ ಫಾಕ್ಸ್‌ಕಾನ್ ಕಾರ್ಖಾನೆಯಲ್ಲಿ ನಡೆಯುತ್ತಿದೆ ಕೆಲಸ: ಆಪಲ್ ಭಾರತದಲ್ಲಿ ತನ್ನ ಐಫೋನ್ ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸಿದೆ. ವಿಶೇಷವಾಗಿ ತಮಿಳುನಾಡಿನ ಚೆನ್ನೈನಲ್ಲಿರುವ ಫಾಕ್ಸ್‌ಕಾನ್ ಸ್ಥಾವರದಲ್ಲಿ ಕೆಲಸವು ಅತ್ಯಂತ ವೇಗವಾಗಿ ಮುಂದುವರೆದಿದೆ. ಈ ಕಾರ್ಖಾನೆಯು ಕಳೆದ ವರ್ಷ 20 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ತಯಾರಿಸಿದ್ದು, ಇದರಲ್ಲಿ ಇತ್ತೀಚಿನ ಐಫೋನ್ 15 ಮತ್ತು 16 ಸೀರಿಸ್ಗಳು ಸೇರಿವೆ. ವಿಶೇಷವೆಂದರೆ ಕಾರ್ಖಾನೆ ಈಗ ಭಾನುವಾರವೂ ಕಾರ್ಯನಿರ್ವಹಿಸುತ್ತಿದೆ. ಅದು ಸಾಮಾನ್ಯವಾಗಿ ರಜಾದಿನವಾಗಿದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಆಪಲ್ ಕಂಪನಿಯು ಈಗ ಭಾರತವನ್ನು ಚೀನಾಕ್ಕೆ ಪರ್ಯಾಯವಾಗಿ ಗಂಭೀರವಾಗಿ ಪರಿಗಣಿಸುತ್ತಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಗ್ರೀನ್ ಕಾರಿಡಾರ್ ನಿರ್ಮಾಣ: ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆಪಲ್ ಭಾರತೀಯ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಮಾತನಾಡಿ ಕಸ್ಟಮ್ಸ್ ಕ್ಲಿಯರೆನ್ಸ್ ಸಮಯವನ್ನು 30 ಗಂಟೆಗಳಿಂದ ಕೇವಲ 6 ಗಂಟೆಗಳಿಗೆ ಇಳಿಸಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಇದಕ್ಕಾಗಿ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ರಚಿಸಲಾಯಿತು.
ಟ್ರಂಪ್ ಸುಂಕ ಮತ್ತು ಅದರ ಪರಿಣಾಮವೇನು?: ಟ್ರಂಪ್ ಆಡಳಿತವು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇ.54 ರಿಂದ ಶೇ.125 ರಷ್ಟಕ್ಕೆ ಹೆಚ್ಚಿಸಿತು. ಇದು ಚೀನಾದಲ್ಲಿ ಹೆಚ್ಚಿನ ಪೂರೈಕೆ ಸರಪಳಿ ಹೊಂದಿರುವ ಆಪಲ್‌ನಂತಹ ಕಂಪನಿಗಳ ಮೇಲೆ ನೇರ ಪರಿಣಾಮ ಬೀರಿತು. ಸುಂಕ ಹೆಚ್ಚಳವು ಐಫೋನ್ 16 ಪ್ರೊ ಮ್ಯಾಕ್ಸ್‌ನಂತಹ ಉನ್ನತ - ಮಟ್ಟದ ಸಾಧನಗಳ ಬೆಲೆಯನ್ನು 1,599 ಡಾಲರ್ದಿಂದ 2,300 ಡಾಲರ್ಗೆ ಹೆಚ್ಚಿಸಬಹುದಿತ್ತು. ಆದ್ದರಿಂದ ಆಪಲ್ ಭಾರತವನ್ನು ಒಂದು ಆಯ್ಕೆಯಾಗಿ ಆರಿಸಿಕೊಂಡಿತು ಮತ್ತು ವೇಗವಾಗಿ ರಫ್ತು ಮಾಡಲು ಪ್ರಾರಂಭಿಸಿತು. ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಕೇವಲ ಶೇ. 26 ರಷ್ಟು ಸುಂಕವಿದ್ದು, ಇದು ಚೀನಾಕ್ಕಿಂತ ತೀರಾ ಕಡಿಮೆ. ಇದಕ್ಕಾಗಿಯೇ ಆಪಲ್ ಭಾರತದಿಂದ ನೇರ ಸಾಗಣೆಗೆ ಆದ್ಯತೆ ನೀಡಿದೆ.
ಆಪಲ್‌ನ ಹೊಸ ಉತ್ಪಾದನಾ ಕೇಂದ್ರವಾಗುತ್ತದೆಯೇ ಭಾರತ?: ಈಗ ಆಪಲ್‌ನ ಪೂರೈಕೆ ಸರಪಳಿಯಲ್ಲಿ ಭಾರತದ ಪಾಲು ನಿರಂತರವಾಗಿ ಹೆಚ್ಚುತ್ತಿದೆ. ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಅಮೆರಿಕಕ್ಕೆ ಆಗುವ ಒಟ್ಟು ಐಫೋನ್ ಆಮದಿನ ಐದನೇ ಒಂದು ಭಾಗ ಭಾರತದಿಂದಲೇ ಬರುತ್ತಿದೆ. ಆಪಲ್‌ನ ಪ್ರಮುಖ ಪಾಲುದಾರರಾದ ಫಾಕ್ಸ್‌ಕಾನ್ ಮತ್ತು ಟಾಟಾ ಈಗ ಭಾರತದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಅವರು ಒಟ್ಟಾಗಿ ಮೂರು ಕಾರ್ಖಾನೆಗಳನ್ನು ಹೊಂದಿದ್ದಾರೆ ಮತ್ತು ಎರಡು ಹೊಸ ಕಾರ್ಖಾನೆಗಳನ್ನು ನಿರ್ಮಿಸಲಾಗುತ್ತಿದೆ. ಆಪಲ್ ಸರ್ಕಾರದಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಿದೆ.
ಮೋದಿಯಿಂದ ಸಹಾಯವೇ?: ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರ ಸರ್ಕಾರವು ಆಪಲ್‌ಗೆ ಸಹಾಯ ಮಾಡುವಂತೆ ಅಧಿಕಾರಿಗಳನ್ನು ಕೇಳಿಕೊಂಡಿತ್ತು. ಇದರಿಂದಾಗಿ ಕಸ್ಟಮ್ಸ್ ಕ್ಲಿಯರೆನ್ಸ್ ವೇಗವಾಗಿ ಆಗಲು ಮತ್ತು ಸಾಗಣೆಯಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂಬುದು ತಿಳಿದು ಬಂದಿದೆ.
ಓದಿ: ದೇಶಾದ್ಯಂತ ಯುಪಿಐ ಸರ್ವರ್ ಡೌನ್.. ಡೌನ್., ಸೇವೆಗಳಿಗೆ ಬಹುತೇಕ ಅಡೆ-ತಡೆ: ಹಣ ವಹಿವಾಟಿಗೆ ಸಮಸ್ಯೆಯೋ ಸಮಸ್ಯೆ!