Amazon Satellite Internet: ಅಮೆಜಾನ್ ತನ್ನ ಮೊದಲ ಬ್ಯಾಚ್ ಕೈಪರ್ ಇಂಟರ್ನೆಟ್ ಉಪಗ್ರಹಗಳನ್ನು ಇಂದು ಬೆಳಗಿನ ಜಾವ ಕಕ್ಷೆಗೆ ಸೇರಿಸಿದೆ. ಈ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಯಿಂದ ಬಳಕೆದಾರರಿಗೆ ಹೈ ಸ್ಪೀಡ್, ಲೋ-ಲೆಟೆನ್ಸಿ ಇಂಟರ್ನೆಟ್ ಒದಗಿಸಲು ಬಳಸಲಾಗುತ್ತದೆ. ಈ ಉಡಾವಣೆಯು ಕೈಪರ್ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ಈಗಾಗಲೇ ಇದೇ ರೀತಿಯ ಸೇವೆಗಳನ್ನು ನೀಡುತ್ತಿರುವ ಎಲೋನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ನೊಂದಿಗೆ ಸ್ಪರ್ಧಿಸಲಿದೆ.
ಯುನೈಟೆಡ್ ಲಾಂಚ್ ಅಲೈಯನ್ಸ್ ಅಟ್ಲಾಸ್ V ರಾಕೆಟ್ ಅಮೆಜಾನ್ ಯೋಜನೆಯ ಭಾಗವಾಗಿ 27 ಕೈಪರ್ ಉಪಗ್ರಹಗಳನ್ನು ಹೊತ್ತೊಯ್ದಿತು. ಕೈಪರ್-1 ಮಿಷನ್ ಪ್ರಯೋಗ ಅಮೆರಿಕದ ಕಾಲಮಾನ ಪ್ರಕಾರ ಸೋಮವಾರ ಸಂಜೆ 7:01ಕ್ಕೆ (EDT) ನಡೆಯಿತು. ಫ್ಲೋರಿಡಾದ ಕೇಪ್ ಕೆನವೆರಲ್ ಸ್ಪೇಸ್ ಫಾರ್ ಸ್ಟೇಷನ್ನಲ್ಲಿರುವ ಸ್ಪೇಸ್ ಲಾಂಚ್ ಕಾಂಪ್ಲೆಕ್ಸ್-41 ನಿಂದ ಉಡಾವಣೆಯಾಯಿತು. ಏಪ್ರಿಲ್ 29 ರಂದು ಭಾರತೀಯ ಕಾಲಮಾನ ಬೆಳಗ್ಗೆ 4:31 ಕ್ಕೆ ಕೈಪರ್ ಇಂಟರ್ನೆಟ್ ಉಪಗ್ರಹಗಳು ಕಕ್ಷೆಯನ್ನು ಪ್ರವೇಶಿಸಿದವು.
ಈ ಪ್ರತಿಯೊಂದು ಉಪಗ್ರಹವು ಭೂಮಿಯಿಂದ ಸರಿಸುಮಾರು 280 ಮೈಲಿ (450 ಕಿಲೋಮೀಟರ್) ಎತ್ತರದಲ್ಲಿದೆ. ಅದು ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಉಪಗ್ರಹಗಳು ಕಾರ್ಯನಿರ್ವಹಿಸುವ ಸರಿಸುಮಾರು 340-ಮೈಲಿ (550 ಕಿಲೋಮೀಟರ್) ಎತ್ತರಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. "ಮಿಷನ್ ಹೇಗೆ ನಡೆದರೂ ಪರವಾಗಿಲ್ಲ, ಇದು ನಮ್ಮ ಪ್ರಯಾಣದ ಆರಂಭ ಮಾತ್ರ" ಎಂದು ಪ್ರಾಜೆಕ್ಟ್ ಕೈಪರ್ ಉಪಾಧ್ಯಕ್ಷ ರಾಜೀವ್ ಬದ್ಯಲ್ ಸಂಜೆ ಉಡಾವಣೆಗೂ ಮುನ್ನ ಹೇಳಿಕೆಯಲ್ಲಿ ತಿಳಿಸಿದ್ದರು.
ಪ್ರಾಜೆಕ್ಟ್ ಕೈಪರ್‌ನ ಭಾಗವಾಗಿ ಮೊದಲ ಪೂರ್ಣ ಬ್ಯಾಚ್ ಉಪಗ್ರಹಗಳನ್ನು ಆರಂಭದಲ್ಲಿ ಏಪ್ರಿಲ್ 9 ರಂದು ಸಂಜೆ 7 ಗಂಟೆಗೆ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಅಂದರೆ ಈ ಯೋಜನೆಯ ಭಾಗವಾಗಿ ಏಪ್ರಿಲ್ 10 ರಂದು ಭಾರತೀಯ ಕಾಲಮಾನ ಬೆಳಗ್ಗೆ 4:30 ಕ್ಕೆ 27 ಕೈಪರ್ ಉಪಗ್ರಹಗಳ ಮೊದಲ ಬ್ಯಾಚ್ ಅನ್ನು ಉಡಾವಣೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಹವಾಮಾನ ಅಸಹಕಾರದಿಂದಾಗಿ ಉಡಾವಣೆಯನ್ನು ಮುಂದೂಡಲಾಗಿತ್ತು.
All #Kuiper1 satellites have successfully deployed into space! Congratulations to #Amazon and the #ProjectKuiper team for this amazing achievement and thank you for entrusting United Launch Alliance and the #AtlasV rocket to deliver this critical moment.
— ULA (@ulalaunch) April 29, 2025
News release:… pic.twitter.com/Bdosn5Raz6
ಅಮೆಜಾನ್ ಈಗಾಗಲೇ ಪ್ರಾಜೆಕ್ಟ್ ಕೈಪರ್ ಅಡಿಯಲ್ಲಿ 80 ಕ್ಕೂ ಹೆಚ್ಚು ಉಡಾವಣೆಗಳನ್ನು ಏರ್ಪಡಿಸಿದೆ. ಇವುಗಳನ್ನು ಏರಿಯನ್‌ಸ್ಪೇಸ್, ಬ್ಲೂ ಒರಿಜಿನ್, ಸ್ಪೇಸ್‌ಎಕ್ಸ್ ಮತ್ತು ಯುನೈಟೆಡ್ ಲಾಂಚ್ ಅಲೈಯನ್ಸ್ (ಯುಎಲ್‌ಎ) ನಂತಹ ಕಂಪನಿಗಳ ಸಹಯೋಗದೊಂದಿಗೆ ಉಡಾವಣೆ ಮಾಡಲಾಗುವುದು. ಪ್ರತಿ ಉಡಾವಣೆಯೊಂದಿಗೆ ಅನೇಕ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಅಮೆಜಾನ್ ಪ್ರಾಜೆಕ್ಟ್ ಕೈಪರ್ ಎಂದರೇನು?: ಅಮೆಜಾನ್‌ನ ಪ್ರಾಜೆಕ್ಟ್ ಕೈಪರ್ ವಿಶ್ವದಾದ್ಯಂತ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಹೀಗಾಗಿ ಅಮೆಜಾನ್ ಸಾವಿರಾರು ಸಣ್ಣ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ. ಅದು ಭೂಮಿಯ ಕೆಳ ಕಕ್ಷೆಯಲ್ಲಿ (LEO) ಇಂಟರ್ನೆಟ್ ಸಂಕೇತಗಳನ್ನು ಕಳುಹಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಹೀಗಾಗಿ, ಇಂಟರ್ನೆಟ್ ಸೌಲಭ್ಯಗಳು ಇನ್ನೂ ಲಭ್ಯವಿಲ್ಲದ ಪ್ರದೇಶಗಳಲ್ಲಿಯೂ ಸಹ ಹೆಚ್ಚಿನ ವೇಗದ ಮತ್ತು ಕಡಿಮೆ ವಿಳಂಬದ ಇಂಟರ್ನೆಟ್ ಅನ್ನು ಒದಗಿಸಲು ಪ್ರಯತ್ನಿಸುತ್ತಿದೆ.
ಈ ಸೇವೆಯು ಮನೆಗಳು, ವ್ಯವಹಾರಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ತುಂಬಾ ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ 2026 ರ ಮಧ್ಯಭಾಗದ ವೇಳೆಗೆ ಒಟ್ಟು 3,236 ಉಪಗ್ರಹಗಳ ಜಾಲವನ್ನು ನಿರ್ಮಿಸುವ ಗುರಿಯನ್ನು ಅಮೆಜಾನ್ ಹೊಂದಿದೆ. ಈ ಉಪಗ್ರಹಗಳು ಪ್ರಪಂಚದಾದ್ಯಂತ ವೇಗವಾದ, ತಡೆರಹಿತ ಇಂಟರ್ನೆಟ್ ಅನ್ನು ಒದಗಿಸುತ್ತವೆ.
ಪ್ರಾಜೆಕ್ಟ್ ಕೈಪರ್ ಲಕ್ಷ್ಯವೇನು?: ಅಮೆಜಾನ್ ಈ ಯೋಜನೆಯ ಪ್ರಮುಖ ಗುರಿ ಪ್ರಪಂಚದ ಮೂಲೆ ಮೂಲೆಗೂ ಹೆಚ್ಚಿನ ವೇಗದ ಮತ್ತು ಲೋ-ಲೆಟೆನ್ಸಿ ಇಂಟರ್ನೆಟ್ ಸೇವೆಗಳನ್ನು ಒದಗಿಸುವುದು. ಈ ಯೋಜನೆಯು ಭೂಮಿಯ ಕೆಳ ಕಕ್ಷೆಯಲ್ಲಿ ಉಪಗ್ರಹ ಜಾಲವನ್ನು ರಚಿಸುತ್ತದೆ. ಈ ಸಂಪೂರ್ಣ ವ್ಯವಸ್ಥೆಯನ್ನು ಅಮೆಜಾನ್ ವೆಬ್ ಸೇವೆಗಳು (AWS) ನಿರ್ವಹಿಸುತ್ತವೆ. ಈ ವರ್ಷದ ಅಂತ್ಯದ ವೇಳೆಗೆ ಈ ಸೇವೆ ಬಳಕೆದಾರರಿಗೆ ಲಭ್ಯವಿರುತ್ತದೆ.
ಮತ್ತೊಂದೆಡೆ, ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ 2019 ರಿಂದ ಈಗಾಗಲೇ 8,000 ಕ್ಕೂ ಹೆಚ್ಚು ಸ್ಟಾರ್‌ಲಿಂಕ್‌ಗಳನ್ನು ಪ್ರಾರಂಭಿಸಿದೆ. ಕಂಪನಿಯು ಭಾನುವಾರ ರಾತ್ರಿ ತನ್ನ 250 ನೇ ಸ್ಟಾರ್‌ಲಿಂಕ್ ಉಡಾವಣೆಯನ್ನು ನಡೆಸಿತು. 7,000 ಕ್ಕೂ ಹೆಚ್ಚು ಸ್ಟಾರ್‌ಲಿಂಕ್‌ಗಳು ಈಗಾಗಲೇ ಕಕ್ಷೆಯಲ್ಲಿವೆ. ಇವು ಭೂಮಿಯಿಂದ ಸುಮಾರು 340 ಮೈಲುಗಳು (550 ಕಿಲೋಮೀಟರ್) ಎತ್ತರದಲ್ಲಿವೆ.
ಓದಿ: ವಾಟ್ಸಾಪ್ನಲ್ಲಿ ಮತ್ತೊಂದು ಸೂಪರ್ ಫೀಚರ್: ಎಮೋಜಿಗಳಿಗೆ ಗುಡ್ಬೈ, ಸ್ಟಿಕರ್ಗಳಿಗೆ ಹೇಳಿ ಹಾಯ್!