ಮೈಸೂರು: ನರೇಂದ್ರ ಮೋದಿ ಸರ್ಕಾರ ಪ್ರಚಾರದಿಂದ ಬದುಕಿದೆ. ಇವರ 11 ವರ್ಷಗಳ ಆಡಳಿತಕ್ಕೆ ಝೀರೋ ಮಾರ್ಕ್ಸ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ನೋಟ್ ಬ್ಯಾನ್ ಮಾಡಿದರು, ಇದರಿಂದ ಯಾರಿಗೆ ಅನುಕೂಲವಾಯಿತು ಎಂದು ಪ್ರಶ್ನಿಸಿದರು.
ಅಚ್ಚೇದಿನ್ ಆಯೇಗಾ ಎಂದು ಹೇಳಿದರು, ದೇಶಕ್ಕೆ ಅಚ್ಚೇದಿನ್ ಬಂದಿದೆಯಾ?. ಮೋದಿ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು, ಕೊಟ್ಟಿದ್ದಾರಾ?. ರೈತರ ಸಮಸ್ಯೆ ಬಗೆಹರಿಸುತ್ತೇನೆ ಎಂದರು, ಆದರೆ ರೈತರ ಸಮಸ್ಯೆಗಳನ್ನು 11 ವರ್ಷವಾದರೂ ಬಗೆಹರಿಸಲಿಲ್ಲ. ಇವರು ಯೋಜನೆಗಳನ್ನು ಘೋಷಿಸಿದ್ದಾರೆ ಅಷ್ಟೇ, ಯಾವುದನ್ನೂ ಜಾರಿ ಮಾಡಲಿಲ್ಲ. ಪ್ರಚಾರದ ಮೂಲಕ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದರು. ಆದರೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಕಾಪಿ ಮಾಡಿ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಘೋಷಣೆ ಮಾಡಿದರು. ನರೇಂದ್ರ ಮೋದಿ ಗುಜರಾತಿನ ಸಿಎಂ ಆಗಿದ್ದಾಗ ರಾಜ್ಯಗಳಿಗೆ ಶೇ.50 % ತೆರಿಗೆ ವಾಪಸ್ ನೀಡಬೇಕು. ಈಗ ಅವರೇ ಪ್ರಧಾನ ಮಂತ್ರಿಗಳಾಗಿದ್ದಾರೆ. ಆದರೆ ಈಗ ಆ ವಿಚಾರ ಇಲ್ಲ ಎಂದು ಸಿಎಂ ಕಿಡಿಕಾರಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕ ರಾಜ್ಯಕ್ಕೆ 5,300 ಕೋಟಿ ಹಣ ಬಿಡುಗಡೆ ಮಾಡುತ್ತೇವೆ ಎಂದರು, ಆದರೆ ಅದು ಆಗಿಲ್ಲ. ಜೊತೆಗೆ 15ನೇ ಹಣಕಾಸು ಆಯೋಗದಡಿ ರಾಜ್ಯಗಳಿಗೆ 11,495 ಕೋಟಿ ಕೊಡಬೇಕು ಎಂದು ಶಿಫಾರಸು ಮಾಡಿದರು, ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ರಾಜ್ಯ ಬಿಜೆಪಿ ಮುಖಂಡರು ಅದನ್ನು ಪ್ರಶ್ನಿಸುತ್ತಿಲ್ಲ. ಬದಲಾಗಿ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಜಾಕ್ಕೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಪ್ರತಿಭಟನೆ