ETV Bharat / state

ಮೊಬೈಲ್‌ನಲ್ಲೇ ನೋಡಿ ಲೈವ್​ ಟ್ರಾಫಿಕ್ ಸಿಗ್ನಲ್ ಟೈಮ್: ದೇಶದಲ್ಲೇ ಮೊದಲ ಬಾರಿ ಬೆಂಗಳೂರಿನಲ್ಲಿ ಈ ವೈಶಿಷ್ಟ್ಯ ಪರಿಚಯ

ಟ್ರಾಫಿಕ್​ ಸಿಗ್ನಲ್​ ಕುರಿತು ವಾಹನ ಸವಾರರಿಗೆ ನಿಖರವಾದ ಸಮಯದ ಲೈವ್​ ಮಾಹಿತಿ ಒದಗಿಸಲು ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ ಮ್ಯಾಪಲ್ಸ್ ಸಹಯೋಗದೊಂದಿಗೆ ವಿನೂತನ ತಂತ್ರಜ್ಞಾನವೊಂದನ್ನು ಪರಿಚಯಿಸಲಾಗಿದೆ.

Representative Image
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : October 13, 2025 at 1:39 PM IST

2 Min Read
Choose ETV Bharat

ಬೆಂಗಳೂರು: ಅಯ್ಯೋ.! ಇನ್ನೂ ಎಷ್ಟು ಸಮಯ ಈ ಸಂಚಾರ ದಟ್ಟಣೆಯಲ್ಲಿ ನಿಂತು ಕಾಯಬೇಕು, ಯಾವಾಗ ಗ್ರೀನ್ ಸಿಗ್ನಲ್ ದೊರೆಯುತ್ತದೆ ಎಂದುಕೊಳ್ಳುವ ವಾಹನ ಸವಾರರಿಗೆ ಸಿಹಿ ಸುದ್ದಿಯೊಂದಿದೆ. ಮುಂದಿನ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಸಿಗ್ನಲ್ ಕೌಂಟ್‌ಡೌನ್‌ ಅನ್ನು ಮೊಬೈಲ್ ಫೋನ್‌ನ ಮೂಲಕವೇ ನೀವಿನ್ನು ಪರಿಶೀಲಿಸಬಹುದು.

ಹೌದು, ಮ್ಯಾಪ್ ಮೈ ಇಂಡಿಯಾದ ನ್ಯಾವಿಗೇಷನ್ ಅಪ್ಲಿಕೇಶನ್ 'ಮ್ಯಾಪಲ್ಸ್' ಸಹಯೋಗದೊಂದಿಗೆ ಇಂಥಹದ್ದೊಂದು ವಿನೂತನ ವೈಶಿಷ್ಟ್ಯವನ್ನು ಬೆಂಗಳೂರು ಸಂಚಾರ ಪೊಲೀಸರು ಪರಿಚಯಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ರಸ್ತೆಗಳ ಸಿಗ್ನಲ್ ಟೈಮರ್‌ನ್ನು ರಿಯಲ್ ಟೈಮ್‌ನಲ್ಲಿ ಮ್ಯಾಪಲ್ಸ್ ಅಪ್ಲಿಕೇಷನ್ ಮೂಲಕ ಪರಿಶೀಲಿಸಬಹುದಾಗಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ: ಮ್ಯಾಪಲ್ಸ್‌ನ ತಾಂತ್ರಿಕ‌ ತಂಡ, ಬೆಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಅರ್ಕಾಡಿಸ್ ಇಂಡಿಯಾ ತಂಡಗಳ ಸಹಯೋಗದೊಂದಿಗೆ ಈ ವೈಶಿಷ್ಟ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ಮ್ಯಾಪಲ್ಸ್‌ ಮೂಲಕ ವಾಹನ ಸವಾರರು ತಮ್ಮ ಮುಂದಿರುವ ಸಿಗ್ನಲ್ ಬದಲಾಗಲು ಎಷ್ಟು ಸಮಯವಿದೆ ಎಂಬುದನ್ನು ನಿಖರವಾಗಿ ನೋಡಬಹುದು. ಉದಾಹರಣೆಗೆ ನೀವು ಸಾಗುತ್ತಿರುವ ರಸ್ತೆಯ ಮುಂದಿನ ಜಂಕ್ಷನ್‌ನಲ್ಲಿ ರೆಡ್ ಸಿಗ್ನಲ್ ಇದೆ ಎಂದಾದರೆ ಗ್ರೀನ್ ಸಿಗ್ನಲ್‌ ಬದಲಾಗಲು ನಿಖರವಾಗಿ ಎಷ್ಟು ನಿಮಿಷ/ಸೆಕೆಂಡ್‌ಗಳಿವೆ ಎಂಬುದನ್ನು ಸಹ ಮ್ಯಾಪಲ್ಸ್ ಮೂಲಕ ನೀವು ವೀಕ್ಷಿಸಬಹುದು.

ಸದ್ಯ ಲೈವ್ ಟ್ರಾಫಿಕ್ ಹರಿವನ್ನು ಆಧರಿಸಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ‌ ಸಿಗ್ನಲ್ ಅವಧಿಗಳನ್ನು ಹೊಂದಿಸುವ ವೆಹಿಕಲ್ ಆ್ಯಕ್ಚುವೇಟೆಡ್ ಕಂಟ್ರೋಲ್ (VAC) ವ್ಯವಸ್ಥೆ ಬೆಂಗಳೂರಿನ 169 ಜಂಕ್ಷನ್‌ಗಳಲ್ಲಿ ಜಾರಿಯಲ್ಲಿದೆ. ಕೆ.ಆರ್. ಸರ್ಕಲ್, ಹಡ್ಸನ್ ಸರ್ಕಲ್, ಕೆ. ಹೆಚ್. ರಸ್ತೆ, ಮಿನರ್ವ ಜಂಕ್ಷನ್ ಟೌನ್ ಹಾಲ್ ಸೇರಿದಂತೆ ವಿವಿಧೆಡೆ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈಗ ಮ್ಯಾಪಲ್ಸ್ ಜೊತೆಗಿನ ಸಹಯೋಗದೊಂದಿಗೆ ಆ ಎಲ್ಲಾ ಜಂಕ್ಷನ್‌ಗಳಲ್ಲಿ ನಿಖರವಾದ ಸಿಗ್ನಲ್‌ ಟೈಮರ್‌ನ್ನು ವಾಹನ ಸವಾರರು ಮೊಬೈಲ್ ಫೋನ್‌ನಲ್ಲಿಯೇ ವೀಕ್ಷಿಸಬಹುದು ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವೈಶಿಷ್ಟ್ಯದು ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿರುವ ಮ್ಯಾಪ್ ಮೈ ಇಂಡಿಯಾದ ನಿರ್ದೇಶಕ ರೋಹನ್ ವರ್ಮಾ, "ರಿಯಲ್ ಟೈಮ್ ಟ್ರಾಫಿಕ್ ಸಿಗ್ನಲ್ ಎಣಿಕೆಯನ್ನು ಮ್ಯಾಪಲ್ಸ್ ಅಪ್ಲಿಕೇಶನ್‌ನ ನಕ್ಷೆಯಲ್ಲಿ ನೀವು ನೋಡಬಹುದು.

ಈ ರೀತಿಯ ಆವಿಷ್ಕಾರಗಳು ಭಾರತದ ಸ್ವದೇಶಿ ಮ್ಯಾಪ್ ಮತ್ತು ಸಂಚಾರ ಅಪ್ಲಿಕೇಶನ್ ಮ್ಯಾಪಲ್ಸ್‌ನ್ನು ಎಲ್ಲಾ ಭಾರತೀಯರಿಗೆ ಪ್ರಸ್ತುತಪಡಿಸಿವೆ. ಬೆಂಗಳೂರು ಸಂಚಾರ‌ ಪೊಲೀಸ್‌, ಅರ್ಕಾಡಿಸ್ ಇಂಡಿಯಾ, ಮ್ಯಾಪಲ್ಸ್ ಹಾಗೂ ಮ್ಯಾಪ್ ಮೈ ಇಂಡಿಯಾದ ತಂಡಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಮುಂದುವರೆದು ಎಕ್ಸ್ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ ರೋಹನ್ ವರ್ಮಾ, ದೇಶದ ಇತರೆ ನಗರಗಳು ಮತ್ತು ಹೆದ್ದಾರಿಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲು ನಾವು ಸಿದ್ಧರಿದ್ದು, ಸಂಚಾರ ಪೊಲೀಸ್, ಸಂಬಂಧಪಟ್ಟ ಇಲಾಖೆಗಳು ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟ್ರಾಫಿಕ್​ ರೂಲ್ಸ್​ ಬ್ರೇಕ್ ಮಾಡ್ತಿದ್ದೀರಾ? ಎಷ್ಟು ಚಲನ್ ಬಳಿಕ ನಿಮ್ಮ ಡ್ರೈವಿಂಗ್​ ಲೈಸೆನ್ಸ್​ ರದ್ದಾಗುತ್ತೆ ಗೊತ್ತಾ?