ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ಕೇಸ್ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಜಾಮೀನು ರದ್ದು ವಿಚಾರವಾಗಿ, ಯೋಗೇಶ್ಗೌಡ ಸಹೋದರ ಗುರುನಾಥ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಸಹೋದರನಿಗೆ ನ್ಯಾಯ ಸಿಗಬೇಕಿದೆ ಎಂದು ಅವರು ಹೇಳಿದ್ದಾರೆ.
ಯಾರೂ ಹೆದರಬೇಡಿ, ಎಲ್ಲ ಸಾಕ್ಷಿಗಳು ಸತ್ಯ ಹೇಳಬೇಕು: ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 9 ವರ್ಷದ ಹಿಂದೆ ನಮ್ಮ ಸೋದರನ ಹತ್ಯೆ ಆಗಿತ್ತು. 9 ವರ್ಷದಿಂದ ನಾವು ಹೋರಾಟ ಮಾಡುತ್ತ ಬಂದಿದ್ದೇವೆ. ಹಿಂದೆಯೇ ಜಾಮೀನು ಕೊಡದಂತೆ ಕೇಳಿದ್ವಿ, ಆಗ ಸುಪ್ರಿಂ ಕೋರ್ಟ್ ಜಾಮೀನು ಕೊಟ್ಟಿತ್ತು. ನಾವು ಇತ್ತೀಚೆಗೆ ಜಾಮೀನು ರದ್ಧತಿಗೆ ಕೇಳಿದ್ವಿ, ಈಗ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ. ಸಿಬಿಐನವರು ಸುಪ್ರೀಂಕೋರ್ಟ್ಗೆ ಹೋಗಿದ್ರು. ಸರ್ವೋಚ್ಛ ನ್ಯಾಯಾಲಯದ ಮುಂದೆ ಸರಿಯಾದ ದಾಖಲೆಗಳನ್ನು ಸಿಬಿಐ ಇಟ್ಟಿತ್ತು. ಹೀಗಾಗಿ ಜಾಮೀನು ರದ್ದಾಗಿದೆ. ಎಲ್ಲ ಸಾಕ್ಷಿಗಳು ಸತ್ಯ ಹೇಳಬೇಕು. ಯಾರೂ ಹೆದರಬಾರದು ಎಂದು ಮನವಿ ಮಾಡಿಕೊಂಡರು.
ಕುಟುಂಬದ ಪರ ಹೋರಾಟಗಾರ ಹೇಳಿದ್ದಿಷ್ಟು: ಇನ್ನೂ ಯೋಗೇಶಗೌಡ ಕುಟುಂಬದ ಪರ ಹೋರಾಟಗಾರ ಬಸವರಾಜ್ ಕೊರವರ ಮಾತನಾಡಿ, 7 ದಿನದಲ್ಲಿ ಶರಣಾಗಲು ಕೋರ್ಟ್ ಕುಲಕರ್ಣಿಗೆ ಸೂಚನೆ ನೀಡಿದೆ. ನಾವು 9 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಮೊದಲಿನಿಂದಲೂ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂಬುದು ನಮ್ಮ ಆಶಯ. ಈ ಮೊದಲು ಕುಲಕರ್ಣಿ ಎಲ್ಲ ಸಾಕ್ಷಿಗಳನ್ನು ಹ್ಯಾಂಡಲ್ ಮಾಡಿದ್ದರು. ಆಗ ಸಿಬಿಐ ತನಿಖೆಗಾಗಿ ಹೋರಾಟ ಮಾಡಿದ್ವಿ, ಸಿಬಿಐಗೆ ಹೋದ ಮೇಲೆ ವಿನಯ ಕುಲಕರ್ಣಿಯನ್ನೂ ಆರೋಪಿ ಮಾಡಿದ್ದರು. ಚಾರ್ಜ್‌ಶೀಟ್ ಸಹ ಆಗಿತ್ತು, ವಿಚಾರಣೆ ನಡೆದಿತ್ತು. ಮೊದನಿನಂತೆ ಕುಲಕರ್ಣಿ ಸಾಕ್ಷಿಗಳ ಹ್ಯಾಂಡಲ್ ಮಾಡೋಕೆ ಶುರು ಮಾಡಿದ್ರು, ಸಾಕ್ಷಿ ಗಳಿಗೆ ದುಡ್ಡು ಕೊಡುವ ಮಾಹಿತಿ ಸಿಕ್ಕಿತ್ತು. ಆ ಮಾಹಿತಿಯನ್ನ ಬರಹ ರೂಪದಲ್ಲಿ ಸಿಬಿಐಗೆ ಕೊಟ್ಟಿದ್ದೆವು. ಅದನ್ನು ಆಧರಿಸಿ ಸಿಬಿಐ ದಾಖಲೆ ಸಂಗ್ರಹಿಸಿತ್ತು. ಸಾಕ್ಷ್ಯಗಳನ್ನು ಕಲೆ ಹಾಕಿ ಕೋರ್ಟ್ ಗೆ ಸಲ್ಲಿಸಲಾಗಿದೆ ಎಂದರು.
ವಿನಯ್ ಕುಲಕರ್ಣಿ ಮತ್ತು ಅವರ ಮಾಮ ಚಂದ್ರಶೇಖರ ಇಂಡಿ ಜಾಮೀನು ರದ್ದತಿಗೆ ಕೇಳಿದ್ರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂಡಿ ಜಾಮೀನು ರದ್ದಾಗಿತ್ತು. ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ಕೊಟ್ಟಿತ್ತು. ಹೀಗಾಗಿ ಅಲ್ಲೇ ಹೋಗಿ ಅಂತಾ ಜನಪ್ರತಿನಿಧಿಗಳ ಕೋರ್ಟ್ ಹೇಳಿತ್ತು. ಹೀಗಾಗಿ ಸಿಬಿಐ ಸುಪ್ರಿಂಗೆ ಹೋಗಿದ್ದರು. ಅದರ ವಿಚಾರಣೆ ನಡೆದು ಇವತ್ತು ಆದೇಶ ಬಂದಿದೆ.
ಸಾಕ್ಷಿ ನಾಶ ಮಾಡದಂತೆ ಆಗ ಷರತ್ತು ಹಾಕಿ ಸುಪ್ರೀಂಕೋರ್ಟ್ ಜಾಮೀನು ಕೊಟ್ಟಿತ್ತು. ಆದರೂ ಮತ್ತೇ ಅದೇ ಕೆಲಸ ಮಾಡುತ್ತಿದ್ದರು. ಓರ್ವ ಸಾಕ್ಷಿಗೆ ಹಣ ಕೊಡುವಾಗ ಟ್ರಾಪ್ ಆಗಿತ್ತು. ಅದರ ಆಧಾರದ ಮೇಲೆ ಜಾಮೀನು ರದ್ದಾಗಿದೆ. ಸುಪ್ರೀಂ ಈಗ ಸಾಕ್ಷಿ ಮೇಲೆ ಒತ್ತಡ ಹಾಕದಂತೆ ಹೇಳಿದೆ ಎಂದು ಅವರು ಕೇಸ್ನ ವಿವರಣೆ ನೀಡಿದರು.
ರಾಜ್ಯ ಸರ್ಕಾರ ಜೈಲಿನಲ್ಲಿ ಮುಂದೆ ಕುಲಕರ್ಣಿಗೆ ಫೋನ್ ಸೌಲಭ್ಯ ಕೊಡಬಾರದು. ಸಾಕ್ಷಿಗಳು ಮುಕ್ತವಾಗಿ ಹೇಳಿಕೆ ಕೊಡಬೇಕು. ನ್ಯಾಯಾಲಯ ಅವರ ಪರವಾಗಿ ಇದೆ ಎಂದು ಅವರು ಹೇಳಿದರು.
ಇದನ್ನು ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್; 1ವಾರದೊಳಗೆ ಶರಣಾಗುವಂತೆ ಸೂಚನೆ