ಹುಬ್ಬಳ್ಳಿ : ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ತನ್ನ ಹೆತ್ತ ಮಕ್ಕಳಿಗೆ ವಿಷವುಣಿಸಿ ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವಲಗುಂದ ತಾಲೂಕಿನ ಯಮನೂರಿನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮಾಲಂಬಿ ಎಂಬುವರು ತನ್ನ 8 ಹಾಗೂ 6 ವರ್ಷದ ಇಬ್ಬರು ಮಕ್ಕಳಿಗೆ ವಿಷವುಣಿಸಿದ್ದಾರೆ. ನಂತರ ತಾನೂ ವಿಷ ಸೇವಿಸಿದ್ದಾರೆ. ನಂತರ ಅಸ್ವಸ್ಥರಾಗಿದ್ದರಿಂದ ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತಃ ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದ ನಿವಾಸಿಯಾಗಿರುವ ಮಹಿಳೆ ಗಂಗಾವತಿಯ ಆಜಿಜ್ ಜತೆಗೆ ಮದುವೆಯಾಗಿದ್ದರು. ನಂತರ ಇಬ್ಬರ ನಡುವೆ ಮನಸ್ತಾಪವುಂಟಾಗಿತ್ತು. ಇದಾದ ನಂತರ ಆಜಿಜ್ ಬಾಷಾ ಮಾಲಂಬಿಯನ್ನು ಬಿಟ್ಟು ಹೋಗಿದ್ದ. ಅಲ್ಲದೆ, ಪತಿಯ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಮನನೊಂದ ಮಾಲಂಬಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಾಲಂಬಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತಂತೆ ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್. ಎಫ್. ಕಮ್ಮಾರ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, 'ನಿನ್ನೆ ತೀವ್ರವಾಗಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ತಾಯಿ-ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮ ಸಿಬ್ಬಂದಿ ಚಿಕಿತ್ಸೆ ಮುಂದುವರೆಸಿದ್ದಾರೆ. ಇದೀಗ ತಾಯಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಆದ್ರೆ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾಘಟಕದಲ್ಲಿ ಇಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹಾವೇರಿ: ಇಬ್ಬರು ಮಕ್ಕಳಿಗೆ ವಿಷವುಣಿಸಿ, ಆತ್ಮಹತ್ಯೆಗೆ ಯತ್ನಿಸಿದ ತಂದೆ - MICRO FINANCE TORTURE