ಚಿತ್ರದುರ್ಗ: ಎರಡನೇ ಮದುವೆಗೆ ಹಸೆಮಣೆಗೆ ಏರಲು ಸಿದ್ಧವಾಗಿದ್ದ ಪತಿಗೆ ಮೊದಲ ಪತ್ನಿ ಚಪ್ಪಲಿ ಏಟು ಕೊಟ್ಟ ಘಟನೆ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆಯ ರೂಪನಗರ ಗ್ರಾಮದ ಕಾರ್ತಿಕ್ ನಾಯ್ಕ ಎರಡನೇ ಮದುವೆಗೆ ಮುಂದಾಗಿದ್ದ ಆರೋಪಿ.
ಆರೋಪಿ ಕಾರ್ತಿಕ್ ನಾಯ್ಕ ಎರಡನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ ಯುವತಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ತಿಕ್ ನಾಯ್ಕ್, ಪೋಷಕರಾದ ಮಹೇಶ್ ನಾಯ್ಕ್, ವೈಶಾಲಿ ಹಾಗೂ ಸಹೋದರಿ ಮೇಘಶ್ರೀ ಅವರನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ದೂರಿನಲ್ಲೇನಿದೆ?: ತನ್ನನ್ನು ಕಾರ್ತಿಕ್ ಮೋಹನ್ ನಾಯ್ಕ್ ಎಂದು ಹೇಳಿಕೊಂಡಿದ್ದ ಆರೋಪಿ, ಪೋಷಕರನ್ನು ಮೋಹನ್ ಮಹೇಶ್ ನಾಯ್ಕ್ ಹಾಗೂ ವಿಶಾಲಾಕ್ಷಿ ಎಂದು ಪರಿಚಯಿಸಿದ್ದ. ಅಲ್ಲದೇ, ಬ್ರೋಕರ್ ಕೂಡ ವಧುವಿನ ಕಡೆಯವರಿಂದ ಎಲ್ಲ ವಿಚಾರಗಳನ್ನೂ ಮುಚ್ಚಿಟ್ಟು, ಹುಡುಗ ತುಂಬಾ ಒಳ್ಳೆಯವನು, ಯಾವುದೇ ದುಶ್ಚಟವಿಲ್ಲ ಎಂದು ನಂಬಿಸಿದ್ದ. ಕಾರ್ತಿಕ್ ಕೂಡ ಯುವತಿಯ ಮನೆಯವರೊಂದಿಗೆ ನಂಬಿಕೆ ಬರುವಂತೆ ಮಾತನಾಡಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ, ಮದುವೆಗೂ ಮುನ್ನವೇ ಕಾರ್ತಿಕ್ ಕಡೆಯವರು ಮದುವೆಗೆ ಹಣದ ಅಗತ್ಯತೆ ಇದೆ. ಬಳಿಕ ಮರಳಿಸುತ್ತೇವೆ ಎಂದು ಹೇಳಿ ಯುವತಿ ಕಡೆಯವರಿಂದ ಐದು ಲಕ್ಷ ರೂ. ಸಾಲ ಪಡೆದಿದ್ದರು. ಜೊತೆಗೆ, ಕಲ್ಯಾಣ ಮಂಟಪದ ಖರ್ಚು ಸೇರಿದಂತೆ ಮದುವೆಗೆ ಲಕ್ಷಾಂತರ ರೂ. ವ್ಯಯಿಸಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಮದುವೆ ಸಂದರ್ಭದಲ್ಲಿ ದಾವಣಗೆರೆಯೆ ನ್ಯಾಮತಿಯ ಮೊದಲ ಪತ್ನಿ ಏಕಾಏಕಿ ಮಧ್ಯೆ ಪ್ರವೇಶಿಸಿ ಹೇಳಿದ ಬಳಿಕವೇ ಕಾರ್ತಿಕ್ಗೆ ಈಗಾಗಲೇ 2021ರಲ್ಲೇ ವಿವಾಹವಾಗಿದೆ ಎಂಬ ವಿಚಾರ ಗೊತ್ತಾಯಿತು. ಅಲ್ಲದೇ, ಆತ ತನ್ನ ಹಾಗೂ ಮನೆಯವರ ಹೆಸರು ಬದಲಾಯಿಸಿ ಮೋಸ ಮಾಡಿರುವುದು ಸಹ ಮೊದಲ ಪತ್ನಿಯಿಂದ ತಿಳಿಯಿತು. ಮೊದಲೇ ಮದುವೆಯಾಗಿರುವ ವಿಚಾರವನ್ನು ಮರೆಮಾಚಿ, ನಮ್ಮಿಂದ 5 ಲಕ್ಷ ರೂ. ಪಡೆದಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜಾತ್ರೆಯಲ್ಲಿ ಪರಿಚಯವಾದ ಗೃಹಿಣಿಯೊಂದಿಗೆ ಸಂಬಂಧ: ಹೋಟೆಲ್ ರೂಮ್‌ಗೆ ಕರೆಸಿ ಹತ್ಯೆ ಮಾಡಿದ ಸಾಫ್ಟ್‌ವೇರ್ ಉದ್ಯೋಗಿ ಅರೆಸ್ಟ್
ಇದನ್ನೂ ಓದಿ: ಕಡಬ: ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಮ್ಮ