ಬೆಂಗಳೂರು: ಜಮೀನು ವ್ಯಾಜ್ಯ ಸಂಬಂಧ ಕೋಣನಕುಂಟೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ವ್ಯಕ್ತಿಗೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾದ ಆರೋಪ ಕೇಳಿಬಂದಿದೆ. ಇನ್ಸ್ಪೆಕ್ಟರ್ ಪಾಪಣ್ಣ ವಿರುದ್ಧ ಮೃತ ವ್ಯಕ್ತಿ ರಾಮಸ್ವಾಮಿ ಪತ್ನಿ ಮುನಿಯಮ್ಮ ಎಂಬವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೂರು ನೀಡಿದ್ದಾರೆ.
"ಇನ್ಸ್ಪೆಕ್ಟರ್ ಪಾಪಣ್ಣ ಅವರು ನಮ್ಮ ಜಮೀನು ಬಳಿ ಬಂದು ಹಲ್ಲೆ ಮಾಡಿದ ಪರಿಣಾಮ ಸೆ.13ರಂದು ನನ್ನ ಪತಿ ಮೃತಪಟ್ಟಿದ್ದು, ಪೊಲೀಸರ ವಿರುದ್ಧ ಕ್ರಮ ಕೈಗೊಂಡು ಪಾರದರ್ಶಕ ತನಿಖೆ ನಡೆಸಬೇಕು" ಎಂದು ಮುನಿಯಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ.
"ಕೊತ್ತನೂರಿನ ಗ್ರಾಮದ ಸರ್ವೇ ನಂಬರ್ 156ರಲ್ಲಿನ 1.31 ಎಕರೆ ಜಮೀನಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ರಾಮಸ್ವಾಮಿ ಹಾಗೂ ನಿರ್ಮಿತಿ ಕೇಂದ್ರದ ನಡುವೆ ವ್ಯಾಜ್ಯ ಏರ್ಪಟ್ಟಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಎರಡು ತಿಂಗಳ ಹಿಂದೆ ತಮ್ಮ ಜಮೀನು ಬಳಿ ಬಂದ ಪೊಲೀಸರು ಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಹಾಗೂ ಮಗಳ ಮೇಲೆ ಕೈ ಮಾಡಿದ್ದಾರೆ. ಹಲ್ಲೆ ವಿಷಯದಲ್ಲಿ ನ್ಯಾಯಾಲಯದಲ್ಲಿ ತಿಳಿಸಿದರೆ ಶಾಶ್ವತವಾಗಿ ಜೈಲಿಗೆ ಹಾಕುವೆ ಎಂದು ಬೆದರಿಸಿದ್ದರು" ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.
"ನನ್ನ ಪತಿಯ ಸಾವಿಗೆ ಕಾರಣರಾದ ಇನ್ಸ್ಪೆಕ್ಟರ್ ಒಳಗೊಂಡಂತೆ ಸಂಬಂಧಿತ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಾತಿ ನಿಂದನೆಯಡಿ ಪ್ರಕರಣ ದಾಖಲಿಸಿಕೊಂಡು ಮೇಲಾಧಿಕಾರಿಗಳು ಪಾರದರ್ಶಕ ತನಿಖೆ ನಡೆಸಬೇಕು" ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್, "ಜುಲೈ 17ರಂದು ಜಿಲ್ಲಾಡಳಿತದಿಂದ ದೂರು ಬಂದಿತ್ತು. ಸರ್ಕಾರಿ ಜಾಗದಲ್ಲಿ ಶಾಲೆ ಹಾಗೂ ಇತರ ಕಾಮಗಾರಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿಸಿದ್ದರು. ಅಲ್ಲಿ ನೆಲೆಸಿದ್ದ ಸ್ಥಳೀಯ ಕುಟುಂಬವೊಂದು ಕಾಮಗಾರಿಗೆ ಅಡ್ಡಿಪಡಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ಪಡೆದು, ರಕ್ಷಣೆಗಾಗಿ ಕೋಣನಕುಂಟೆ ಠಾಣೆ ಪೊಲೀಸರು ಆ ಸ್ಥಳಕ್ಕೆ ಹೋಗಿದ್ದರು. ದೂರಿನಂತೆ ತನಿಖೆ ಕೈಗೊಂಡು ರಾಮಸ್ವಾಮಿ ಎಂಬ ವ್ಯಕ್ತಿಯನ್ನು ಅಡ್ಡಿಪಡಿಸಿದ ಕಾರಣಕ್ಕಾಗಿ ಬಂಧಿಸಿ, ಅವರಿಗೆ ಬಿಪಿ ಹೆಚ್ಚು ಕಡಿಮೆ ಇದ್ದುದರಿಂದ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಪಡೆದ ನಂತರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಬಂಧನ ಹಿನ್ನೆಲೆಯಲ್ಲಿ ಆತನಿಗೆ ನ್ಯಾಯಾಲಯ ಅದೇ ದಿನ ಜಾಮೀನು ಕೂಡ ನೀಡಿತ್ತು. ಸೆ.13ರಂದು ಆತ ಸಾವನ್ನಪ್ಪಿರುವ ಮಾಹಿತಿ ಬಂದಿದೆ. ಕುಟುಂಬಸ್ಥರ ಆರೋಪದ ಮೇಲೆ, ಕುಟುಂಬಸ್ಥರಿಂದ ದೂರನ್ನು ಪಡೆದು ಮರಣೋತ್ತರ ಪರೀಕ್ಷೆ ನಡೆದಿದೆ. ಅಂತಿಮ ವರದಿ ಬಂದ ಮೇಲೆ ಸ್ಪಷ್ಟತೆ ಸಿಗಲಿದೆ. ಜಯನಗರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅಂದಿನ ಎಲ್ಲಾ ಘಟನೆಯನ್ನು ಪೊಲೀಸರು ವಿಡಿಯೋಗ್ರಫಿ ಮಾಡಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಗೆ ಹಲ್ಲೆ ನಡೆಸಿದ ರೌಡಿಶೀಟರ್ - Rowdy Sheeter Attack