ಎತ್ತಿನಹೊಳೆ ಯೋಜನೆಯ ಸಮಗ್ರ ವರದಿ: ಏಳು ಜಿಲ್ಲೆಗಳ ಕುಡಿಯುವ ನೀರು, ಐದು ಜಿಲ್ಲೆಗಳ ಕೆರೆ ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ
ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಸ್ವರೂಪ, ಸ್ಥಿತಿಗತಿ, ವಿವಾದ, ಪ್ರಗತಿ ಬಗ್ಗೆ ಸಮಗ್ರ ವರದಿ ಇಲ್ಲಿದೆ.

Published : August 3, 2025 at 12:08 AM IST
ವಿಶೇಷ ವರದಿ: ವೆಂಕಟ್ ಪೊಳಲಿ
ಬೆಂಗಳೂರು: ಎತ್ತಿನಹೊಳೆ ಯೋಜನೆ ಹಲವು ವೈರುಧ್ಯ, ವಿರೋಧ, ಯೋಜನಾ ವೆಚ್ಚ ಹೆಚ್ಚಳದ ಮಧ್ಯೆ ಅನುಷ್ಠಾನಗೊಳ್ಳುತ್ತಿದೆ. ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ 3 ಹಂತಗಳಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ. ಈ ಪೈಕಿ ಮೊದಲ ಹಂತ ಲೋಕಾರ್ಪಣೆಗೊಂಡಿದ್ದು, 2027ಕ್ಕೆ ಯೋಜನೆ ಪೂರ್ಣಗೊಳಿಸುವ ಗುರಿಯೊಂದಿಗೆ ಉಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಹತ್ವಾಕಾಂಕ್ಷೆಯ ಈ ಯೋಜನೆಯ ಸ್ವರೂಪ, ಸ್ಥಿತಿಗತಿ, ವಿವಾದ, ಪ್ರಗತಿ ಬಗ್ಗೆ ಸಮಗ್ರ ವರದಿ ಇಲ್ಲಿದೆ.
ಎತ್ತಿನಹೊಳೆ ಯೋಜನೆ ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸುಮಾರು 23,251 ಕೋಟಿ ವೆಚ್ಚದ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಪಶ್ಚಿಮಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿ.ಎಂ.ಸಿ ಪ್ರಮಾಣದ ಪ್ರವಾಹದ ನೀರನ್ನು ಏತ ನೀರಾವರಿ ಮೂಲಕ ತರುವುದಾಗಿದೆ.
7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರನ್ನು ಒದಗಿಸಲಿದೆ. ಜೊತೆಗೆ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 9.953 ಟಿಎಂಸಿ ಪ್ರಮಾಣದ ನೀರನ್ನು ಕೆರೆಗೆ ತುಂಬಿಸುವ ಮಹತ್ವದ ಯೋಜನೆ ಇದಾಗಿದೆ.
2014ರಂದು ಯೋಜನೆ ಕಾಮಗಾರಿಗೆ ಚಾಲನೆ: ನೇತ್ರಾವತಿ ನದಿ ತಿರುವು ಯೋಜನೆಯಾದ ಈ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಚಾಲನೆ ದೊರಕಿದ್ದು 2014ರಲ್ಲಿ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಚಿಕ್ಕಬಳ್ಳಾಪುರದಲ್ಲಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಹಲವು ವಿಘ್ನಗಳೊಂದಿಗೆ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. 2019 ರಿಂದೀಚೆಗೆ ಹಸಿರು ನ್ಯಾಯಮಂಡಳಿಯಲ್ಲಿ ಪರಿಸರ ಸಂಬಂಧ ವಿವಾದ ಬಗೆಹರಿದ ನಂತರ ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿತ್ತು. 2024 ಸೆಪ್ಟೆಂಬರ್ನಲ್ಲಿ 8 ಒಡ್ಡು (ಚೆಕ್ ಡ್ಯಾಂ) ಗಳಲ್ಲಿ ಸಂಗ್ರಹವಾಗಿರುವ ನೀರನ್ನು ಎತ್ತುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಕಲೇಶಪುರದಲ್ಲಿ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದ್ದರು.
ಆರಂಭದಲ್ಲಿ ನೇತ್ರಾವತಿ ತಿರುವು ಯೋಜನೆ ಎಂದಿತ್ತು. ಈ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ದೊರೆಯುವುದು ಕಷ್ಟ ಎಂಬ ಕಾರಣಕ್ಕೆ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಎಂದು ಹೆಸರು ಬದಲಾಯಿಸಿತ್ತು. ಬಳಿಕ ಕೇಂದ್ರದಲ್ಲಿ ವೀರಪ್ಪ ಮೊಯ್ಲಿ ಅವರು ಪರಿಸರ ಮತ್ತು ಅರಣ್ಯ ಸಚಿವರಾಗಿದ್ದಾಗ ಈ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮೋದನೆ ದೊರಕಿತ್ತು.
ಬಯಲು ಸೀಮೆಗೆ ನೀರು ಹರಿಸುವ ಸ್ವರೂಪ ಹೇಗೆ? : ಜಲ ಸಂಪನ್ಮೂಲ ಇಲಾಖೆ, ವಿಶ್ವೇಶ್ವರಯ್ಯ ಜಲ ನಿಗಮ ರೂಪಿಸಿರುವ ಎತ್ತಿನ ಹೊಳೆ ಯೋಜನೆಯಲ್ಲಿ ನೇತ್ರಾವತಿ ನದಿಯ ಉಪನದಿಗಳಾದ ಹೊಂಗಡಹಳ್ಳಕ್ಕೆ 1, ಎತ್ತಿನಹೊಳೆಯಲ್ಲಿ 4, ಕಾಡುಮನೆ ಹೊಳೆಯಲ್ಲಿ 2 ಮತ್ತು ಕೇರಿಹೊಳೆಯಲ್ಲಿ 2 ಚೆಕ್‌ಡ್ಯಾಂ ಸೇರಿ ಒಟ್ಟು 8 ಚೆಕ್ ಡ್ಯಾಂ ನಿರ್ಮಾಣ ಪೂರ್ಣಗೊಂಡಿದೆ. ಈ ಚೆಕ್ ಡ್ಯಾಂಗಳಿಂದ ನೀರೆತ್ತಿ ಪೈಪ್‌ಲೈನ್‌ಗಳ ಮೂಲಕ ಎತ್ತಿನಹೊಳೆ, ಹೆಬ್ಬನಹಳ್ಳ ಮತ್ತು ದೊಡ್ಡನಾಗರ ಪಂಪಿಂಗ್ ಸ್ಟೇಷನ್‌ಗಳಿಗೆ ನೀರು ಹರಿಸಲಾಗುತ್ತದೆ. ಈ 3 ಪಂಪಿಂಗ್ ಸ್ಟೇಷನ್‌ನಿಂದ ಹರುವನಹಳ್ಳಿ ವಿತರಣಾ ತೊಟ್ಟಿಗೆ ನೀರು ತುಂಬಿಸಲಾಗುತ್ತದೆ.
ಹರುವನಹಳ್ಳಿ ವಿತರಣ ತೊಟ್ಟಿಯಿಂದ ಗುರುತ್ವಾರ್ಷಣೆಯಿಂದ 274 ಕಿ.ಮೀ. ತೆರೆದ ನಾಲೆ ಮೂಲಕ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. 5.7 ಟಿಎಂಸಿ ಸಂಗ್ರಹ ಸಾಮರ್ಥ್ಯದ ಈ ಜಲಾಶಯದಿಂದ ನೀರನ್ನು ಕುಂದಣ ಎಂಬಲ್ಲಿ ಮತ್ತೆ 70 ರಿಂದ 80 ಮೀ. ಮೇಲಕ್ಕೆ ಎತ್ತಲಾಗುತ್ತದೆ. ಅಲ್ಲಿಂದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ. ನೀರೆತ್ತಲು ಒಟ್ಟು ಸುಮಾರು 274.65 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಈಗಾಗಲೇ ದೊಡ್ಡನಾಗರ ಬಳಿ ವಿದ್ಯುತ್ ವಿತರಣ ಉಪ ಕೇಂದ್ರದ ನಿರ್ಮಾಣ ಪೂರ್ಣಗೊಂಡಿದೆ.
ಯೋಜನೆಗೆ ನೂರೆಂಟು ಅಡ್ಡಿ ಆತಂಕ, ವಿಘ್ನ: ಯೋಜನೆ ಕಾಮಗಾರಿ ಪ್ರಮುಖವಾಗಿ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಹಾದು ಹೋಗುತ್ತಿರುವುದರಿಂದ ಪರಿಸರವಾದಿಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಾಣದಿಂದ ಅರಣ್ಯಕ್ಕೆ ಭಾರಿ ಹಾನಿಯಾಗಲಿದೆ ಎಂದು ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದ್ದ ಕರಾವಳಿ ಭಾಗದ ಜನರು ಪ್ರಮುಖ ನದಿ ಮೂಲವಾದ ನೇತ್ರಾವತಿ ನದಿ ತಿರುವಿನಿಂದ ದಕ್ಷಿಣ ಕನ್ನಡ ಭಾಗಕ್ಕೆ ಕುಡಿಯುವ ನೀರಿನ ಕೊರತೆಯಾಗಲಿದೆ ಮತ್ತು ನದಿ ಮೂಲಗಳು ಬತ್ತಿ ಹೋಗಲಿದೆ ಎಂದು ಭಾರಿ ಹೋರಾಟ ಮಾಡಿದ್ದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಟಿ. ವಿ. ರಾಮಚಂದ್ರ ಅವರು ಗುಂಡ್ಯ ಮತ್ತು ಎತ್ತಿನಹೊಳೆ ಪ್ರದೇಶದ ಅಧ್ಯಯನ ನಡೆಸಿ ಅದರ ಮಾರಕ ಪರಿಣಾಮವನ್ನು ವರದಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಖ್ಯಾತ ಪರಿಸರ ವಿಜ್ಞಾನಿ ಡಾ. ಮಾಧವ ಗಾಡ್ಗೀಳ್ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ಪಶ್ಚಿಮ ಘಟ್ಟ ಪರಿಣಿತರ ಸಮಿತಿಯೂ ಸಹ ಈ ಯೋಜನೆಗಳ ಮಾರಕ ಪರಿಣಾಮವನ್ನು ಎತ್ತಿ ತೋರಿಸಿತ್ತು. ಪರಿಸರದ ನಾಶ, ತಾಂತ್ರಿಕ ಸಮಸ್ಯೆ ಸೇರಿ ವಿವಿಧ ಅಡ್ಡಿ ಆತಂಕಗಳಿಂದ ಯೋಜನೆ ಜಾರಿ ವಿಳಂಬವಾಗುತ್ತಲೇ ಹೋಯಿತು.
ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಏತ ಕಾಮಗಾರಿಗೆ ಅರಣ್ಯ ಇಲಾಖೆ ಮಂಜೂರಾತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ (NGT) ಒಟ್ಟು 7 ಪ್ರಕರಣಗಳು ದಾಖಲಾಗಿತ್ತು. ಇದರಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ ದಾಖಲಾಗಿದ್ದ ಎಲ್ಲಾ ಏಳು ಪ್ರಕರಣಗಳು 2019ರ ಮೇ 24ರಂದು ಇತ್ಯರ್ಥವಾಯಿತು. ಅಲ್ಲಿಂದೀಚೆಗೆ ಯೋಜನೆ ಕಾಮಗಾರಿಗೆ ವೇಗ ಸಿಕ್ಕಿತು.
ಯೋಜನೆಗೆ ಬೇಕಾಗಿರುವ ಭೂಮಿ ಎಷ್ಟು? : ಯೋಜನೆಗೆ ಎತ್ತಿನಹೊಳೆ ಯೋಜನಾ ಪ್ರದೇಶದಲ್ಲಿ 574.37 ಎಕರೆ, ಭೈರಗೊಂಡ್ಲು ಜಲಾಶಯಕ್ಕೆ 5478.68 ಎಕರೆ, ಮುಖ್ಯ ನಾಲೆಗೆ 5,575 ಎಕರೆ, ರಾಮನಗರ ಫೀಡರ್‌ಗೆ 127.24 ಎಕರೆ, ಮಧುಗಿರಿ ಫೀಡರ್‌ಗೆ 234.24 ಎಕರೆ, ಶ್ರೀನಿವಾಸಪುರ ಫೀಡರ್‌ಗೆ 306 ಎಕರೆ, ಕೋಲಾರ ಫೀಡರ್‌ಗೆ 252 ಎಕರೆ ಭೂಮಿ, ಗೌರಿಬಿದನೂರು ಫೀಡರ್‌ಗೆ 155 ಎಕರೆ ಸೇರಿದಂತೆ ಒಟ್ಟು 12,702.46 ಎಕರೆ ಭೂಮಿ ಅಗತ್ಯವಿದೆ. ಬಹುತೇಕ ಕಡೆ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ.
ಯೋಜನೆಗಾಗಿ ಸುಮಾರು 20,185 ಮರಗಳನ್ನು ಕಡಿಯಲಾಗಿದೆ. ಕಡಿತ ಮಾಡಿದ ಮರಗಳ ಬದಲಿಗೆ 28 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಪರಿಹಾರಾತ್ಮಕವಾಗಿ ನೆಡುತೋಪು ಬೆಳೆಸಲಾಗಿದೆ. 40 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಪೀನಲ್ ಪರಿಹಾರಾತ್ಮಕ ನೆಡುತೋಪು ನೆಡಲಾಗಿದೆ. ಇದಕ್ಕಾಗಿ 2020-21 ನೇ ಸಾಲಿನ ಅಂತ್ಯದವರೆಗೆ 32.16 ಲಕ್ಷ ಹಾಗೂ 37.66 ಲಕ್ಷ ವೆಚ್ಚ ಭರಿಸಲಾಗಿದೆ.
ಕೆಲ ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ರೈತರನ್ನು ಮನವೊಲಿಸಿ ಒಪ್ಪಿಗೆ ಪಡೆದು ಟೆಂಡರ್ ಕರಾರಿನಂತೆ ತ್ರಿಪಕ್ಷೀಯ ಒಪ್ಪಂದ (Tripartite agreement) ಮಾಡಿಕೊಂಡು ಜಮೀನು ಪಡೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಖಾಸಗಿ ಜಮೀನು ಮತ್ತು ಅರಣ್ಯ ಇಲಾಖೆಯ ಜಮೀನುಗಳನ್ನು ಗುರುತಿಸುವಲ್ಲಿ ಗೊಂದಲ ಮತ್ತು ವಿಳಂಬದಿಂದ ಕೆಲವು ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಪೆಟ್ರೋನೆಟ್ ಮತ್ತು ಗೇಲ್ ಕ್ರಾಸಿಂಗ್‌ಗಳಿಗೆ ಸಂಬಂಧಿಸಿದಂತೆ ಇಲಾಖೆಗಳಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಕೊರಟಗೆರೆ ತಾಲೂಕಿನ ರೈತರು ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರ ದರದಂತೆ ತಮಗೂ ಸಹ ಏಕರೂಪ ದರ ನೀಡಲು ಒತ್ತಾಯಿಸಿದ್ದರಿಂದ ಕಾಮಗಾರಿಗಳಿಗೆ ಅಡೆ ತಡೆಯಾಗಿದೆ. ಈ ಕಾರಣದಿಂದಾಗಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸುವಲ್ಲಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಣನೀಯ ಏರಿಕೆ ಕಂಡ ಯೋಜನಾ ವೆಚ್ಚ : ಎತ್ತಿನಹೊಳೆಯ ಯೋಜನಾ ವೆಚ್ಚ ಗಣನೀಯ ಏರಿಕೆ ಕಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 2012ರಲ್ಲಿ ಡಿ. ವಿ. ಸದಾನಂದ ಗೌಡ ನೇತೃತ್ವದ ಸರ್ಕಾರ 8,323 ಕೋಟಿ ರೂ. ನಿಗದಿಪಡಿಸಿ ಎತ್ತಿನ ಹೊಳೆ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 2014 ಫೆ. 17ರಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ 12,912 ಕೋಟಿ ರೂ. ಪರಿಷ್ಕೃತ ಎತ್ತಿನಹೊಳೆ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಹಲವು ವಿಳಂಬ, ವೆಚ್ಚ ಹೆಚ್ಚಳದ ಪರಿಣಾಮವಾಗಿ ಯೋಜನೆಯ ವೆಚ್ಚ ಇದೀಗ 23,252 ಕೋಟಿ ರೂ.ಗೆ ಏರಿಕೆಯಾಗಿದೆ. ಜೂನ್ 2025 ಅಂತ್ಯಕ್ಕೆ ಯೋಜನೆ ಕಾಮಗಾರಿಗಳಿಗಾಗಿ ಸುಮಾರು 17,147 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಪೈಕಿ 2,669 ಕೋಟಿ ರೂ. ಭೂ ಸ್ವಾಧೀನ, ಸ್ಥಾಪನೆ ಉದ್ದೇಶಗಳಿಗಾಗಿ ಖರ್ಚಾಗಿದೆ.
ಇತ್ತೀಚೆಗೆ ಹೊಸ ಭೂಸ್ವಾಧೀನ ಕಾಯ್ದೆಯ ಅನುಷ್ಠಾನ, ದರ ಪರಿಷ್ಕರಣೆ, ಟೆಂಡರ್ ಪ್ರೀಮಿಯಂ, ಸರಕು ಮತ್ತು ಸೇವಾ ತೆರಿಗೆಯ (GST) ಹೆಚ್ಚಳ, ಯೋಜನೆಯಲ್ಲಿ ಅವಶ್ಯವಿರುವ ಹೆಚ್ಚುವರಿ ಕಾಮಗಾರಿಗಳ ಅಳವಡಿಕೆ (ಪಥ ಬದಲಾವಣೆಯಿಂದ) ಮತ್ತು ಫೀಡರ್ ಕಾಲುವೆಗಳಲ್ಲಿ ತೆರೆದ ಕಾಲುವೆ ಬದಲಾಗಿ ಪೈಪ್‌ಲೈನ್‌ಗಳ ಅಳವಡಿಕೆ ಈ ಎಲ್ಲ ಕಾರಣಗಳಿಂದ ಯೋಜನೆಯ ಅಂದಾಜು ಮೊತ್ತ ಮತ್ತೆ ಗಣನೀಯವಾಗಿ ಹೆಚ್ಚಾಗಿದೆ. ಅದರಂತೆ ಯೋಜನೆಯ ಅಂದಾಜು ಮೊತ್ತ ರೂ. 23,251.66 ಕೋಟಿಗಳಿಗೆ ಏರಿಕೆ ಕಂಡಿದೆ. ಈ ಸಂಬಂಧ ಪುನರ್ ಪರಿಷ್ಕೃತ ಯೋಜನಾ ವರದಿಗೆ 2023ರ ಜನವರಿ 10 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಎತ್ತಿನ ಹೊಳೆಯಲ್ಲಿ ನೀರಿನ ಲಭ್ಯತೆ ಕೊರತೆಯ ಭೀತಿ : ಎತ್ತಿನ ಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯ ಕೊರತೆ ಯೋಜನೆಯ ದೀರ್ಘಕಾಲಿಕ ಕಾರ್ಯಸಾಧು ಬಗ್ಗೆ ಅನುಮಾನ ಮೂಡಿಸಿದೆ. ಅವೈಜ್ಞಾನಿಕ ಹಾಗೂ ಕಾಲ್ಪನಿಕ ನೀರಿನ ಲಭ್ಯತೆಯ ಅಂಕಿ-ಅಂಶದ ಆಧಾರದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ. ಎತ್ತಿನಹೊಳೆ ಯೋಜನೆಯಡಿ 172 ಚ.ಕಿ.ಮೀ ವ್ಯಾಪ್ತಿಯ ಪಶ್ಚಿಮ ಘಟ್ಟದ ಜಲಾನಯನ ಪ್ರದೇಶದಲ್ಲಿ ಅಂದಾಜಿಸಿರುವ ಒಟ್ಟು 34.26 ಟಿಎಂಸಿ ನೀರಿನ ಲಭ್ಯತೆ ಪೈಕಿ 24.01 ಟಿ.ಎಂ.ಸಿ ಮಾತ್ರ ಯೋಜನೆಗೆ ತಿರುಗಿಸಬಹುದಾದ ನೀರು ಎಂದು ಪರಿಗಣಿಸಲಾಗಿದೆ.
ಯೋಜನಾ ವರದಿ ತಯಾರಿಸುವ ಸಂದರ್ಭ ಯೋಜನೆಯಲ್ಲಿ ಪರಿಗಣಿಸಿರುವ ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಐಐಎಸ್ ಸಿ ಪ್ರೊ. ರಾಮಪ್ರಸಾದ್ರಿಂದ ಪರಿಶೀಲಿಸಿಕೊಳ್ಳಲಾಗಿದೆ. ಬಳಿಕ CWC, National Institute of Hydrology & Karnataka State Natural Disaster Monitoring Centre ಸಂಸ್ಥೆಗಳಿಂದ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ. ಜೂನ್ 2018 ರಿಂದ Telemetric ವ್ಯವಸ್ಥೆಯೊಂದಿಗೆ ನಿರಂತರವಾಗಿ ನೀರಿನ ಲಭ್ಯತೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಇದರಂತೆ ಎತ್ತಿನ ಹೊಳೆ ಜಲಾನಯನ ಪ್ರದೇಶದಲ್ಲಿ ಲಭ್ಯ ಇರುವ ನೀರಿನ ಪ್ರಮಾಣ ಯೋಜಿತ 24.01 ಟಿಎಂಸಿಯಿಂದ 16 ಟಿಂಎಸಿಗೆ ಇಳಿಕೆಯಾಗಿದೆ.
ಜಲಸಂಪನ್ಮೂಲ ಇಲಾಖೆ ನೀಡಿರುವ ಅಂಕಿ-ಅಂಶದಂತೆ Telemetric ವ್ಯವಸ್ಥೆಯ ಮೂಲಕ ಅಧ್ಯಯನ ಮಾಡಲಾದ 2018ರ ಮುಂಗಾರು ಅವಧಿಯಿಂದ 2023ರ ಮುಂಗಾರು ಅವಧಿಯ 139 ದಿನಗಳವರೆಗಿನ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಯೋಜಿತ 24.01 ಟಿಎಂಸಿಗಿಂತ ಗಣನೀಯ ಇಳಿಕೆ ಕಂಡಿದೆ. ಅದರಂತೆ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ಜೂನ್ 2018ರಿಂದ ನ. 30, 2018 ವರೆಗೆ 18.93 ಟಿಎಂಸಿಯಷ್ಟು ನೀರು ಯೋಜನೆಗೆ ಲಭ್ಯವಿದೆ. ಜೂನ್ 2019ರಿಂದ ನ.2019ರ ಮುಂಗಾರಿನ ಅವಧಿಯಲ್ಲಿ 16.4 ಟಿಎಂಸಿ ನೀರು ಮಾತ್ರ ಲಭ್ಯವಿತ್ತು. ಇನ್ನು ಜೂನ್ 2020 ರಿಂದ ನವೆಂಬರ್ 2020 ಮುಂಗಾರು ಅವಧಿಯಲ್ಲಿ 18.03 ಟಿಎಂಸಿ ನೀರು ಲಭ್ಯವಿತ್ತು.
ಜೂನ್ 2021 ರಿಂದ ನವೆಂಬರ್ 2021 ಮುಂಗಾರು ಅವಧಿವರೆಗೆ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ಯೋಜನೆಗೆ ತಿರುಗಿಸಬಹುದಾದ ನೀರಿನ ಲಭ್ಯತೆ 21.79 ಟಿಎಂಸಿ ಇತ್ತು. ಅದೇ ಜೂನ್ 2022 ರಿಂದ ನವೆಂಬರ್ ವರೆಗಿನ ಅವಧಿಯಲ್ಲಿ ನೀರಿನ ಲಭ್ಯತೆ 17.51 ಟಿಂಎಸಿ ಇತ್ತು. ಇನ್ನು ಜೂನ್ 2023ರಿಂದ ನವೆಂಬರ್ 2023ರವರೆಗಿನ ಅವಧಿಯಲ್ಲಿ ನೀರಿನ ಲಭ್ಯತೆ ಕೇವಲ 8.41 ಟಿಎಂಸಿ ಮಾತ್ರ ಇತ್ತು. ಯೋಜನೆಗೆ ಪರಿಗಣಿಸಲ್ಪಟ್ಟ 24.01 ಟಿಎಂಸಿ ನೀರಿನ ಲಭ್ಯತೆ ಕಳೆದ ಆರು ವರ್ಷದ ಮುಂಗಾರು ಅವಧಿಯಲ್ಲಿ ತಲುಪಲೇ ಇಲ್ಲ.
ಉತ್ತಮ ಮುಂಗಾರು ವೇಳೆಯಲ್ಲೂ ಎತ್ತಿನಹೊಳೆಯ ಜಲಾನಯನ ಪ್ರದೇಶ ಯೋಜಿತ 24.01 ಟಿಎಂಸಿ ನೀರಿನ ಲಭ್ಯತೆ ಪ್ರಮಾಣವನ್ನು ತಲುಪಿಲ್ಲ. ಕಳೆದ ಏಳು ವರ್ಷಗಳಲ್ಲಿ ಸರಾಸರಿ 18.08 ಟಿಎಂಸಿ ನೀರು ಲಭ್ಯತೆ ಖಾತ್ರಿಯಾಗಿದ್ದು, ಉಳಿದ 6 ಟಿಎಂಸಿ ನೀರಿನ ಕೊರತೆ ನೀಗಿಸಲು ಹೆಚ್ಚುವರಿ ನೀರು ತಿರುವುಗೊಳಿಸುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಸಮಾಲೋಚಕರನ್ನು ನೇಮಕ ಮಾಡಲಾಗಿದೆ.
ಮೊದಲ ಹಂತದಲ್ಲಿ ಈಗಾಗಲೇ 8 ಕೆರೆ ತುಂಬಿಸಲಾಗಿದೆ : ಈ ಯೋಜನೆಯ ಮೊದಲ ಹಂತದ ಏತ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 6.09.2024 ರಂದು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿದೆ. ಈ ಮೊದಲ ಹಂತದ ಏತ ನೀರಾವರಿಯಿಂದ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮುಖಾಂತರ ತಾತ್ಕಾಲಿಕವಾಗಿ ನೀರನ್ನು ಹರಿಸಲಾಗಿದೆ. ಮಾರ್ಗ ಮಧ್ಯದಲ್ಲಿನ ಬೇಲೂರು ತಾಲೂಕಿನ ಹಳೇಬೀಡು ಕೆರೆ, ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಕೆರೆ ಮತ್ತು ಕಡೂರು ತಾಲೂಕು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ದೇವನೂರು ಕೆರೆಗಳನ್ನೊಳಗೊಂಡಂತೆ ಒಟ್ಟು 8 ಕೆರೆಗಳನ್ನು ತುಂಬಿಸಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.
ಕೇಂದ್ರ ಅರಣ್ಯ ಇಲಾಖೆಯಿಂದ ತಕರಾರು ಪ್ರದೇಶ : ಈ ಯೋಜನೆಯ ಹಂತ-2ರಡಿ ಕಾಲುವೆಯು ಒಟ್ಟು 508.01ಗು (ಹಾಸನ:422ಎ -35ಗು ಹಾಗೂ ತುಮಕೂರು:85ಎ-6ಗು) ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗುತ್ತಿದೆ. ಈ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯಿಂದ Compensatory afforestation land ಅತ್ಯವಶ್ಯಕವಾಗಿದ್ದು, ನಿಗಮದಲ್ಲಿ ಲಭ್ಯವಿರುವ 71ಎ-06ಗು ಹೊರತುಪಡಿಸಿ 436ಎ-35ಗು ಸರ್ಕಾರಿ ಜಮೀನು ಅಗತ್ಯವಿದೆ.
ಪ್ರಸ್ತುತ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 65 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿಗಳಿಂದ 30.09.2024 ರ ಪತ್ರದಲ್ಲಿ ಕಾಯ್ದಿರಿಸಲಾಗಿದೆ. ಹಾಸನ ಜಿಲ್ಲೆ ಅರಸೀಕೆರೆ ಹಾಗೂ ಬೇಲೂರು ತಾಲೂಕಿನಲ್ಲಿ ಒಟ್ಟು 373 ಎಕರೆ ಸರ್ಕಾರಿ ಜಮೀನುಗಳನ್ನು ಪರ್ಯಾಯವಾಗಿ ಹಾಗೂ ಪರಿಹಾರಾತ್ಮಕವಾಗಿ ಅರಣ್ಯೀಕರಣಕ್ಕೆ ಹಾಸನ ಜಿಲ್ಲಾಧಿಕಾರಿಗಳಿಂದ 25.07.2024 ರ ಪತ್ರದಲ್ಲಿ ಕಾಯ್ದಿರಿಸಲಾಗಿದೆ.
ಕಾಯ್ದಿರಿಸಲಾದ 373 ಎ ಸರ್ಕಾರಿ ಜಮೀನುಗಳ ಪೈಕಿ 31 ಎಕರೆ ಜಮೀನನ್ನು Compensatory afforestation landಗೆ ಸೂಕ್ತವಾಗಿಲ್ಲದ ಕಾರಣ ಜಿಲ್ಲಾಧಿಕಾರಿಗಳು ಪುನ: 34ಎ ಜಮೀನನ್ನು ಪರಿಹಾರಾತ್ಮಕವಾಗಿ ಅರಣ್ಯೀಕರಣಕ್ಕೆ ಕಾಯ್ದಿರಿಸಿ 20.11.2024 ರ ಪತ್ರದಲ್ಲಿ ಆದೇಶಿಸಿದ್ದಾರೆ. ಪ್ರಸ್ತುತ ಏಕೀಕೃತ ಅರಣ್ಯ ತೀರುವಳಿ ಪ್ರಸ್ತಾವನೆಯನ್ನು ಪರಿವೇಶ್ ಪೋರ್ಟಲ್‌ನಲ್ಲಿ ಅಪ್ ಲೋಡ್ ಮಾಡಿ Stage-1 ಮಂಜೂರಾತಿ ಪಡೆಯಲು ಬಾಕಿ ಇದೆ.
ಇತ್ತೀಚೆಗೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್, ಎತ್ತಿನಹೊಳೆ ಯೋಜನೆಯನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಎಂದು ಅನುಮೋದಿಸಿ ಶೇ.25 ರಷ್ಟು ಆರ್ಥಿಕ ಸಹಾಯ ನೀಡಬೇಕಾಗಿ ಮನವಿ ಮಾಡಿದ್ದಾರೆ. ಈ ಯೋಜನೆ ಕಾಮಗಾರಿಯನ್ನು ತುಮಕೂರು ಹಾಗೂ ಹಾಸನ ಭಾಗದಲ್ಲಿ ನಿಲ್ಲಿಸಲಾಗಿತ್ತು. ಯೋಜನೆ ಹಾದು ಹೋಗುವ ಕಡೆ ಕಂದಾಯ ಭೂಮಿ ಹೊಂದಿದ್ದ ರೈತರಿಗೆ ಪೋಡಿ ವಿತರಣೆ ಮಾಡಿ ಪರಿಹಾರವನ್ನೂ ನೀಡಲಾಗಿದೆ. ಆದರೆ, ನಂತರ ಅರಣ್ಯ ಇಲಾಖೆಯವರು ಇದು ನಮ್ಮ ಭೂಮಿ ಎಂದು ತಕರಾರು ತೆಗೆದಿದ್ದಾರೆ. ಅದಕ್ಕಾಗಿ ಬದಲಿ ಭೂಮಿ ನೀಡಿದ್ದೇವೆ. ಇದಕ್ಕೆ ಅರಣ್ಯ ಇಲಾಖೆಯವರು ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಬೇಕಾಗಿದೆ. ಕಾಲುವೆ ತೆಗೆದಾಗ ಬರುವ ಮಣ್ಣನ್ನು ಪಕ್ಕದಲ್ಲಿ ಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಅದನ್ನು ತೆರವು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಅರಣ್ಯ ಸಲಹಾ ಸಮಿತಿಯಿಂದ ಆಕ್ಷೇಪ : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಹೆಚ್ಚುವರಿಯಾಗಿ 423 ಎಕರೆ ಅರಣ್ಯ ಬಳಕೆಗೆ ಅನುಮೋದನೆ ನೀಡಬೇಕೆಂಬ ಕರ್ನಾಟಕ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿ ಒಪ್ಪಿಗೆ ಕೊಡದೇ ಇರುವುದು ಯೋಜನೆಗೆ ಹಿನ್ನಡೆ ಉಂಟು ಮಾಡಿದೆ. ಅರಣ್ಯ ಹಾಗೂ ಪರಿಸರ ಸಚಿವಾಲಯದ ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡವು ಯೋಜನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ವರದಿಯಲ್ಲಿ ಹಾಸನ ವಿಭಾಗದಲ್ಲಿ 266.79 ಎಕರೆ ಅರಣ್ಯ ಪ್ರದೇಶವನ್ನು ಕೇಂದ್ರದ ಅನುಮೋದನೆ ಪಡೆಯದೇ ಕಾಮಗಾರಿ ಮಾಡಲಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸಲಾಗಿದೆ ಎಂದು ವರದಿ ನೀಡಿದೆ.
ಈ ಹಿಂದೆ 13.93 ಹೆಕ್ಟೇರ್ ಅರಣ್ಯ ಬಳಕೆಗೆ 2016ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. 33 ಷರತ್ತುಗಳನ್ನು ವಿಧಿಸಿ 2016ರಲ್ಲಿ ಅನುಮೋದನೆ ಕೊಡಲಾಗಿತ್ತು. ಆದರೆ, ಬಹುತೇಕ ಷರತ್ತುಗಳನ್ನು ಪಾಲನೆ ಮಾಡಿಲ್ಲ. ನಿಯಮ ಪಾಲಿಸಿದರೆ ಅನುಮೋದನೆ ನೀಡಬಹುದಾಗಿದೆ ಎಂದು ಅರಣ್ಯ ಸಲಹಾ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿತ್ತು. ಜೂನ್ 26ರಂದು ನಡೆದ ಸಲಹಾ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ಹೆಚ್ಚುವರಿ ಅರಣ್ಯ ಭೂಮಿ ನೀಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಶಿಫಾರಸು ಮಾಡಲಾದ ಭೂ ಕುಸಿತ ನಿಯಂತ್ರಣ ಕ್ರಮ, ಮಣ್ಣು ಸವಕಳಿ ನಿಯಂತ್ರಣ ಕ್ರಮಗಳನ್ನು ಪಾಲಿಸಿಲ್ಲ. ಅನುಮೋದನೆ ನೀಡುವ ಮೊದಲೇ ಅರಣ್ಯ ಭೂಮಿಯಲ್ಲಿ ಕಾಮಗಾರಿ ಆರಂಭಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದೆ. ಹೀಗಾಗಿ, ಕೇಂದ್ರ ಅರಣ್ಯ ಇಲಾಖೆಯು ಹೆಚ್ಚುವರಿ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡಿಲ್ಲ.
ಬಯಲುಸೀಮೆ ಬದಲು ಹೇಮಾವತಿಗೆ ನೀರು: 'ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಬಹುತೇಕ ಕಡೆ ಭೂ ಕುಸಿತಗಳು ಸಂಭವಿಸುತ್ತಿವೆ. ಸಕಲೇಶಪುರ ತಾಲೂಕಿನ ದೊಡ್ಡನಾಗರ ಗ್ರಾಮದಲ್ಲಿ ಭೂಕುಸಿತ ಹಾಗೂ ರಸ್ತೆಯೊಂದು ನಾಶವಾಗಿ ಸುಮಾರು 50 ಎಕರೆ ಪ್ರದೇಶದ ಜಮೀನಿಗೆ ಹೋಗಲು ಸಂಪರ್ಕವೇ ಕಡಿತ ಆಗಿ, ಬೆಳೆಗಾರರು, ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಹಳೇಬೀಡು ಬಳಿ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ದೊಡ್ಡನಾಗರದ ಡಂಪಿಂಗ್ ಹಾಗೂ ಪಂಪಿಂಗ್ ಕೇಂದ್ರದಿಂದ ಪ್ರಾಯೋಗಿಕವಾಗಿ ಜು.26ರಿಂದ 110 ಕ್ಯುಸೆಕ್ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ' ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಹೆಚ್. ಎ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಗುರುತ್ವ ಕಾಲುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಬ್ಯಾರೇಜ್‌ಗಳಲ್ಲಿ ಸಂಗ್ರಹವಾಗುವ ನೀರನ್ನು ದೊಡ್ಡನಾಗರ ಪಂಪ್ ಹೌಸ್‌ವರೆಗೂ ಹರಿಸಲಾಗುತ್ತಿದೆ. ಅಲ್ಲಿಂದ ಆ ನೀರನ್ನು ನೇರವಾಗಿ ಹೇಮಾವತಿ ನದಿಗೆ ಬಿಡಲಾಗುತ್ತಿದೆ. ರಭಸವಾಗಿ ನೀರು ಹರಿಯುತ್ತಿರುವುದರಿಂದ ನದಿ ಪಾತ್ರದ ಸುಮಾರು ಅರ್ಧ ಎಕರೆಯಷ್ಟು ಪ್ರದೇಶ ಹಾಗೂ ದೊಡ್ಡನಾಗರ ಗ್ರಾಮದ ರಸ್ತೆಗಳು, ಭೂಮಿಗಳು ಕೊಚ್ಚಿ ಹೋಗಿವೆ. ಎರಡನೇ ಹಂತದ ಕಾಮಗಾರಿಗಳಲ್ಲಿ ಕಾಲುವೆ ನಿರ್ಮಾಣವೇ ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ರೈತರು ಕೋರ್ಟಿನಲ್ಲಿ ತಕರಾರು ತೆಗೆದಿದ್ದಾರೆ. ಈ ಯೋಜನೆ ಪೂರ್ಣಗೊಳ್ಳಲು ಇನ್ನೂ ಹಲವು ವರ್ಷಗಳು ಬೇಕಾಗಲಿದೆ ಎಂದು ಹೆಚ್. ಎ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಯೋಜನೆ ಸದ್ಯದ ಸ್ಥಿತಿಗತಿ, ವರ್ಷವಾರು ಗುರಿ ಏನಿದೆ? : ಈಗಾಗಲೇ 9,807 ಕೋಟಿ ರೂ. ಮೊತ್ತದಲ್ಲಿ ಗುರುತ್ವ ಮುಖ್ಯ ಕೆನಾಲಿನ ಕೆಲಸ ಶೇ. 85ರಷ್ಟು ಮಗಿದಿದೆ. ಒಂದನೇ ಹಂತದಲ್ಲಿ ನದಿ ಪಾತ್ರದ ಏತ ಕಾಮಗಾರಿಗಳಲ್ಲಿ 7 ಪ್ಯಾಕೇಜ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹಂತ 2ರಲ್ಲಿ ಗುರುತ್ವ ಮುಖ್ಯ ಕಾಲುವೆ ಕಾಮಗಾರಿಗಳಲ್ಲಿ 33 ಪ್ಯಾಕೇಜ್‌ಗಳ ಪೈಕಿ 11 ಪ್ಯಾಕೇಜ್ ಪೂರ್ಣಗೊಳಿಸಲಾಗಿದೆ. ಒಟ್ಟು ಯೋಜನೆಯಲ್ಲಿ ಸುಮಾರು 60-70% ಕಾಮಗಾರಿಗಳು ಪೂರ್ಣವಾಗಿದೆ. ಇನ್ನೂ 16 ಕಿ.ಮೀ ವ್ಯಾಪ್ತಿಯ ಕಾಮಗಾರಿ ಪ್ರಾರಂಭಿಸಬೇಕಿದ್ದು, ಇದರಲ್ಲಿ 6 ಎಕರೆ ಅರಣ್ಯ ಪ್ರದೇಶ ಹಾಗೂ 10 ಕಿ.ಮೀ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಲ್ಲಿ ಉಂಟಾಗಿರುವ ಅರಣ್ಯ ತೀರುವಳಿ, ರಾಷ್ಟ್ರೀಯ ಹೆದ್ದಾರಿ ಅನುಮತಿ, ರೈಲ್ವೇ ಇಲಾಖೆಯ ಅನುಮತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಇತ್ಯಾದಿ ಅಡೆತಡೆಗಳನ್ನು ನಿವಾರಿಸಿಕೊಂಡು ಯೋಜನೆಯನ್ನು ಮಾರ್ಚ್-2027ರ ಅಂತ್ಯಕ್ಕೆ ಆದ್ಯತೆ ಮೇರೆಗೆ ಸಂಪೂರ್ಣವಾಗಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ವರ್ಷವಾರು ಗುರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ - ಆಗಸ್ಟ್ 2025ರ ಅಂತ್ಯಕ್ಕೆ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ 85 ಕ್ಯುಮೆಕ್ಸ್ ನೀರನ್ನು ಮೇಲೆತ್ತಿ ಗುರುತ್ವ ಕಾಲುವೆ ಸರಪಳಿ 0.00 ಕಿ.ಮೀ.ಗಳಿಂದ 100 ಕಿ.ಮೀ.ವರೆಗೆ ನಾಲೆಗೆ ಹರಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸುವ ಗುರಿ ನಿಗದಿ ಮಾಡಲಾಗಿದೆ.

ನವೆಂಬರ್ 2025ರ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ 100 ಕಿ.ಮೀ.ಗಳಿಂದ 261.69 ಕಿ.ಮೀ.ವರೆಗೆ ನಾಲೆಗೆ ನೀರು ಹರಿಸುವುದು (ಮಧುಗಿರಿ-ಪಾವಗಡ, ಟಿ.ಜಿ.ಹಳ್ಳಿ-ರಾಮನಗರ & ಗೌರಿಬಿದನೂರು ಫೀಡರ್ ಕಾಮಗಾರಿ ಒಳಗೊಂಡಂತೆ) ಮತ್ತು ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಶೇ.50ರಷ್ಟು ಕಾಮಗಾರಿಯನ್ನು ಆರ್ & ಆರ್ ಸಹಿತ ಮಾರ್ಚ್-2026ರ ಅಂತ್ಯಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
ನವೆಂಬರ್ 2026ರ ಅಂತ್ಯಕ್ಕೆ ಗುರುತ್ವ ಕಾಲುವೆ ಸರಪಳಿ 261.69 ಕಿ.ಮೀ.ವರೆಗೆ (ದೊಡ್ಡಬಳ್ಳಾಪುರದವರೆಗೆ) ಹಾಗೂ 261.69 ನಂತರದ ಎಲ್ಲಾ ಫೀಡರ್ ಕಾಮಗಾರಿಗಳನ್ನು ಪೂರ್ಣಗೊಳಿಸಿ (ಲಿಫ್ಟ್ ಕಾಮಗಾರಿ ಒಳಗೊಂಡಂತೆ) ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವುದು ಹಾಗೂ ಲಕ್ಕೇನಹಳ್ಳಿ ಸಮತೋಲನಾ ಜಲಾಶಯದ ಬಾಕಿ ಶೇ.50ರಷ್ಟು ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಂಪುಹೊಳೆಯಲ್ಲೇ ಕುಸಿದ ನೀರಿನ ಮಟ್ಟ?: ''ಎತ್ತಿನಹೊಳೆ ಯೋಜನೆ ಕಾಮಗಾರಿಗಳಿಂದ ಮೂಲ ನದಿ ಕೆಂಪುಹೊಳೆಯಲ್ಲೇ ನೀರಿನ ಸಂಗ್ರಹಿತ ಮಟ್ಟ ಕುಸಿತ ಕಂಡಿದೆ. ಯೋಜನೆ ಕಾಮಗಾರಿಗಳನ್ನು ಕೆಂಪು ಹೊಳೆ ಮತ್ತು ಅದರ ಉಪನದಿಗಳಲ್ಲಿ ಅದರ ಅಚ್ಚುಕಟ್ಟು ಪ್ರದೇಶಗಳಲ್ಲಿ ನಿರ್ಮಿಸಿದ್ದಾರೆ. ಇದರಿಂದ ನೀರಿನ ಪದರ ಬತ್ತಿ ಹೋಗುತ್ತಿದ್ದು, ಎತ್ತಿನ ಹೊಳೆ ಯೋಜನೆಯ ಪ್ರಮುಖ ನದಿ ಮೂಲ ಕೆಂಪುಹೊಳೆಯಲ್ಲಿ ನೀರಿನ ಶೇಖರಣೆ ಕುಸಿತ ಕಂಡಿದೆ'' ಎಂದು ಸಂಶೋಧಕ, ಪರಿಸರವಾದಿ ದಿನೇಶ್ ಹೊಳ್ಳ ತಿಳಿಸಿದ್ದಾರೆ.
''ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ. ಯೋಜನೆಯ ಕಾಮಗಾರಿಯೇ ಇದೀಗ ತಿರುಗುಬಾಣವಾಗುತ್ತಿದೆ. ಯೋಜನೆ ಕಾಮಗಾರಿಗಳಿಂದ ಶಿರಾಢಿ ಘಾಟ್ ಪ್ರದೇಶದಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರ ಭೂ ಕುಸಿತ ಸಂಭವಿಸುತ್ತಿದೆ. ಇದರಿಂದ ನದಿಯ ನೀರಿನ ಮೂಲಕ್ಕೆ ಪೆಟ್ಟು ಬಿದ್ದಿದೆ. ಇದರಿಂದ ಕರಾವಳಿಗೆ ಹರಿದು ಬರುವ ನೇತ್ರಾವತಿ ನದಿ ನೀರೂ ಬತ್ತಿ ಹೋಗುವುದು ಖಚಿತ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಿಂದ ಇನ್ನು 10 ವರ್ಷ ಬಳಿಕ ಅತ್ಯಲ್ಪ ಪ್ರಮಾಣದ ನೀರು ಮಾತ್ರ ಲಭ್ಯವಾಗಲಿದೆ. ಏಕೆಂದರೆ ಇವರು ನೀರಿನ ಮೆದುಳಿಗೆ ಪೆಟ್ಟು ನೀಡಿದ್ದಾರೆ'' ಎಂದು ದಿನೇಶ್ ಹೊಳ್ಳ ಆತಂಕ ವ್ಯಕ್ತಪಡಿಸಿದ್ದಾರೆ.
ಲಕ್ಕೇನಹಳ್ಳಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ : ಇತ್ತ ಎತ್ತಿನಹೊಳೆ ಯೋಜನೆ ಸಂಬಂಧ ಲಕ್ಕೇನಹಳ್ಳಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಸಂಬಂಧ ಗ್ರಾಮಸ್ಥರು ರಾಷ್ಟ್ರಪತಿಗಳಿಗೆ ದೂರು ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗಿ ದೂರನ್ನು ನೀಡಿದ್ದಾರೆ. ಎತ್ತಿನಹೊಳೆ ಯೋಜನೆಯ ಭಾಗವಾಗಿ ಲಕ್ಕೇನಹಳ್ಳಿ ಜಲಾಶಯ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಅದಕ್ಕಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕು, ಸಾಸಲು ಹೋಬಳಿಯ ಲಕ್ಕೇನಹಳ್ಳಿ, ನರಸಾಪುರ ಕಡೇಪಾಳ್ಯ, ಗರುಡಗಲ್ಲು, ಮಚ್ಚೇನಹಳ್ಳಿ, ದಾಸರಪಾಳ್ಯ, ಸಿಂಗೇನಹಳ್ಳಿ, ಶ್ರೀರಾಮನಹಳ್ಳಿ, ಸಾಸಲು ಗ್ರಾಮದ ರೈತರಿಗೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಡೇರಹಳ್ಳಿ ಇತರೆ ಬಾಧಿತ ಗ್ರಾಮಗಳ ಜಮೀನುಗಳು ಮುಳುಗಡೆಯಾಗುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಕೀಲರು ಹಾಗೂ ಗ್ರಾಮಸ್ಥ ನರಂಸಿಂಹ ಗೌಡ, ''ಈ ಅಣೆಕಟ್ಟಿನಿಂದ ಸುಮಾರು 13 ಹಳ್ಳಿಗಳು ಬಾಧಿತವಾಗಲಿದೆ. ಆ ಪೈಕಿ 4 ಹಳ್ಳಿಗಳು ಸಂಪೂರ್ಣವಾಗಿ ಮುಳುಗಡೆಯಾಗುವ ಆತಂಕವಿದೆ. ಗ್ರಾಮಸ್ಥರನ್ನು ಕತ್ತಲಲ್ಲಿ ಇಟ್ಟು ಅಣೆಕಟ್ಟು ಕಟ್ಟಲು ಮುಂದಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನ ಹೊಳೆ ಯೋಜನೆ ನೀರು ಹಂಚಿಕೆಯಾಗಿದೆ. ಲಕ್ಕೇನಹಳ್ಳಿಯಿಂದ 10-15 ಕಿ.ಮೀ. ದೂರದಲ್ಲಿರುವ ಚಿಕ್ಕಬಳ್ಳಾಪುರದಲ್ಲೇ ಅಣೆಕಟ್ಟನ್ನು ನಿರ್ಮಿಸಲಿ. ಆದರೆ, ದೊಡ್ಡಬಳ್ಳಾಪುರಕ್ಕೆ ಎತ್ತಿನಹೊಳೆ ಯೋಜನೆ ನೀರು ಬರುವುದಿಲ್ಲ. ಹಾಗಿದ್ದಾಗ ಇಲ್ಲಿ ಏಕೆ ಅಣೆಕಟ್ಟು ಕಟ್ಟುತ್ತಿದ್ದಾರೆ. ಇದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಮಾಡಲು ಸಮಯ ಕೇಳಿದ್ದೇವೆ. ಆದರೆ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುವುದೇನು?: ''ಎತ್ತಿನಹೊಳೆ ಯೋಜನೆ ಸಂಬಂಧ ಕೇಂದ್ರ ಪರಿಸರ ಇಲಾಖೆ ಸಚಿವರಾದ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಕೊಟ್ಟಿರುವ ವಿಚಾರವನ್ನು ಅವರಿಗೆ ವಿವರಿಸಿದ್ದೇವೆ. ಈ ಯೋಜನೆಯ ಸುಮಾರು 60-70% ಕಾಮಗಾರಿ ಮುಕ್ತಾಯಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಮಾಡಿರುವ ಆಕ್ಷೇಪಣೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಇದು ಅತ್ಯುತ್ತಮ ಕುಡಿಯುವ ನೀರಿನ ಯೋಜನೆಯಾಗಿದ್ದು, ಅತ್ಯುನ್ನತ ತಂತ್ರಜ್ಞಾನದ ಹಾಗೂ ಏಷ್ಯಾದ ಅತಿ ದೊಡ್ಡ ಮೇಲ್ಗಾಲುವೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಲಾಗಿದೆ'' ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಅಣೆಕಟ್ಟು ನಿರ್ಮಾಣ ಸಂಬಂಧ ವಿರೋಧದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ, ''ನೀವು ರಸ್ತೆ, ಅಣೆಕಟ್ಟು ಸೇರಿದಂತೆ ಯಾವುದೇ ಯೋಜನೆ ಮಾಡಬೇಕಾದರೂ ವಿರೋಧ ವ್ಯಕ್ತವಾಗುತ್ತದೆ. ಕುಡಿಯುವ ನೀರು ಪೂರೈಸಲೇಬೇಕು. ಈ ನೀರನ್ನು ಎಲ್ಲಾದರೂ ಸಂಗ್ರಹ ಮಾಡಿಕೊಳ್ಳಬೇಕು. ಲಕ್ಕೇನಹಳ್ಳಿ ಮಾತ್ರವಷ್ಟೇ ಅಲ್ಲ, ಕೊರಟಗೆರೆ ಭಾಗದಲ್ಲಿ ಕೆಲವು ಪ್ರದೇಶ ಬಳಸಿಕೊಳ್ಳಬೇಕು ಎಂದು ಆಲೋಚಿಸಿದ್ದೆವು. ನೀರು ಹೇಗೆ ಹರಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ'' ಎಂದು ತಿಳಿಸಿದ್ದಾರೆ.
ಎಲ್ಲಿಗೆ ಎಷ್ಟು ಕುಡಿಯಲು, ಕೆರೆ ತುಂಬಿಸಲು ನೀರು ಹಂಚಿಕೆ?:
ಚಿಕ್ಕಮಗಳೂರು ಜಿಲ್ಲೆ: ಕಡೂರು - ಕುಡಿಯುವ ನೀರಿಗಾಗಿ 0.154 ಟಿಎಂಸಿ.
ಹಾಸನ ಜಿಲ್ಲೆ: 34 ಕೆರೆ ತುಂಬಿಸಲು 0.8 ಟಿಎಂಸಿ, ಅರಸೀಕೆರೆ - ಕುಡಿಯುವ ನೀರಿಗೆ 0.512 ಟಿಎಂಸಿ, ಬೇಲೂರು - ಕುಡಿಯುವ ನೀರಿಗೆ 0.129 ಟಿಎಂಸಿ.
ತುಮಕೂರು ಜಿಲ್ಲೆ: 113 ಕೆರೆ ತುಂಬಿಸಲು 3.446 ಟಿಎಂಸಿ, ತಿಪಟೂರು - ಕುಡಿಯುವ ನೀರಿಗೆ 0.301 ಟಿಎಂಸಿ, ಚಿಕ್ಕನಾಯಕನಹಳ್ಳಿ - ಕುಡಿಯುವ ನೀರಿಗೆ 0.347 ಟಿಎಂಸಿ, ಗುಬ್ಬಿ - ಕುಡಿಯುವ ನೀರಿಗೆ 0.108 ಟಿಎಂಸಿ, ತುಮಕೂರು - ಕುಡಿಯುವ ನೀರಿಗೆ 0.07 ಟಿಎಂಸಿ, ಕೊರಟಗೆರೆ - ಕುಡಿಯುವ ನೀರಿಗೆ 0.267 ಟಿಎಂಸಿ, ಮಧುಗಿರಿ - ಕುಡಿಯುವ ನೀರಿಗೆ 0.43 ಟಿಎಂಸಿ, ಶಿರಾ - ಕುಡಿಯುವ ನೀರಿಗೆ 0.514 ಟಿಎಂಸಿ, ಪಾವಗಡ - ಕುಡಿಯುವ ನೀರಿಗೆ 0.057 ಟಿಎಂಸಿ.
ಕೋಲಾರ ಜಿಲ್ಲೆ: 138 ಕೆರೆ ತುಂಬಿಸಲು 2.064 ಟಿಎಂಸಿ, ಮಾಲೂರು - ಕುಡಿಯುವ ನೀರಿಗೆ 0.421 ಟಿಎಂಸಿ, ಕೋಲಾರ - ಕುಡಿಯುವ ನೀರಿಗೆ 0.722 ಟಿಎಂಸಿ, ಬಂಗಾರಪೇಟೆ - ಕುಡಿಯುವ ನೀರಿಗೆ 0.875 ಟಿಎಂಸಿ, ಮುಳಬಾಗಿಲು - ಕುಡಿಯುವ ನೀರಿಗೆ 0.468 ಟಿಎಂಸಿ, ಶ್ರೀನಿವಾಸಪುರ - ಕುಡಿಯುವ ನೀರಿಗೆ 0.356 ಟಿಎಂಸಿ.
ಚಿಕ್ಕಬಳ್ಳಾಪುರ ಜಿಲ್ಲೆ: 196 ಕೆರೆ ತುಂಬಲು 2.876 ಟಿಎಂಸಿ, ಚಿಕ್ಕಬಳ್ಳಾಪುರ - ಕುಡಿಯುವ ನೀರಿಗೆ 0.383 ಟಿಎಂಸಿ, ಗೌರಿಬಿದನೂರು - ಕುಡಿಯುವ ನೀರಿಗೆ 0.506 ಟಿಎಂಸಿ, ಗುಡಿಬಂಡೆ - ಕುಡಿಯುವ ನೀರಿಗೆ 0.10 ಟಿಎಂಸಿ, ಬಾಗೇಪಲ್ಲಿ - ಕುಡಿಯುವ ನೀರಿಗೆ 0.32 ಟಿಎಂಸಿ, ಶಿಡ್ಲಘಟ್ಟ - ಕುಡಿಯುವ ನೀರಿಗೆ 0.38 ಟಿಎಂಸಿ, ಚಿಂತಾಮಣಿ - ಕುಡಿಯುವ ನೀರಿಗೆ 0.531 ಟಿಎಂಸಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ: 46 ಕೆರೆ ತುಂಬಲು 1.067 ಟಿಎಂಸಿ, ನೆಲಮಂಗಲ - ಕುಡಿಯುವ ನೀರಿಗೆ 0.405 ಟಿಎಂಸಿ, ದೊಡ್ಡಬಳ್ಳಾಪುರ - ಕುಡಿಯುವ ನೀರಿಗೆ 0.592 ಟಿಎಂಸಿ, ದೇವನಹಳ್ಳಿ - ಕುಡಿಯುವ ನೀರಿಗೆ 0.41 ಟಿಎಂಸಿ, ಹೊಸಕೋಟೆ - ಕುಡಿಯುವ ನೀರಿಗೆ 0.517 ಟಿಎಂಸಿ.
ಬೆಂಗಳೂರು ದಕ್ಷಿಣ ಜಿಲ್ಲೆ: ಕುಡಿಯುವ ನೀರಿಗೆ 1.834 ಟಿಎಂಸಿ, ಟಿ.ಜಿ.ಹಳ್ಳಿ ಜಲಾಶಯ ವೃದ್ಧಿಗೆ 1.4 ಟಿಎಂಸಿ, ಹೆಸರಘಟ್ಟ ಜಲಾಶಯ ವೃದ್ಧಿಗೆ 0.50 ಟಿಎಂಸಿ, ದೇವನಹಳ್ಳಿ ಕೈಗಾರಿಕ ಪ್ರದೇಶಕ್ಕೆ 0.25 ಟಿಎಂಸಿ.
ಇದನ್ನೂ ಓದಿ : ಎತ್ತಿನಹೊಳೆ ಯೋಜನೆಯ ಡ್ಯಾಂ ನಿರ್ಮಾಣಕ್ಕೆ ರೈತರ ವಿರೋಧ: ರಾಜ್ಯಪಾಲರಿಗೆ ಮನವಿ - FARMERS OPPOSES DAM CONSTRUCTION

