ವಿಶೇಷ ವರದಿ- ಮುನೇಗೌಡ ಎಂ
ಬೆಂಗಳೂರು: ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಹಾಗೂ ಕಾಡಾನೆಗಳನ್ನು ನಿಯಂತ್ರಿಸುವುದರ ಜೊತೆಗೆ ಸೆರೆಹಿಡಿಯಲು ಕುಮ್ಕಿ ಆನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಕುಮ್ಕಿ ಎಂದರೇನು?. ಅದರಿಂದಾಗುವ ಉಪಯೋಗಗಳ ಬಗ್ಗೆ ಮಾಹಿತಿಯನ್ನು ತಿಳಿಯೋಣ.
ಕುಮ್ಕಿಯನ್ನು ಕೊಮ್ಮಿ, ಕೂಂಕಿ ಅಥವಾ ಕುಂಕಿ ಎಂದು ಕರೆಯಲಾಗುತ್ತದೆ. ಮಲಯಾಳಂನಲ್ಲಿ ಥಾಪ್ಪಾನ ಎಂದು ಕರೆಯಲಾಗುತ್ತದೆ. ಕುಮ್ಕಿ ಪದವು ತಮಿಳು ಪದ 'ಕುಂಬುಕ್' ನಿಂದ ಬಂದಿದೆ. ಇದರ ಅರ್ಥ ಹಿಡಿಯುವುದು ಅಥವಾ ಬಲೆಗೆ ಬೀಳಿಸುವುದು. ಕುಮ್ಕಿ ಆನೆಗಳನ್ನು ಹೆಚ್ಚಾಗಿ ಹಲವು ಅರಣ್ಯ ನಿರ್ವಹಣಾ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಕಾಡು ಆನೆಗಳ ಸಂಘರ್ಷ ಹಾಗೂ ಕೃಷಿ ಪ್ರದೇಶಗಳಿಂದ ದೂರ ಓಡಿಸುವುದು ಅಥವಾ ಮಾರ್ಗದರ್ಶನ ಮಾಡುವುದು ಸೇರಿವೆ.
ಕುಮ್ಕಿ ಆನೆಗಳಿಗೆ ವಿಶೇಷ ತರಬೇತಿ ಸಹ ನೀಡಲಾಗುತ್ತದೆ. ಈ ತರಬೇತಿ ಪಡೆದ ಆನೆಗಳು ಮಾನವ-ಆನೆ ಸಂಘರ್ಷವನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ವಿಶೇಷವಾಗಿ ಕಾಡು ಆನೆಗಳೂ ಆಗಾಗ ಕೃಷಿ ಭೂಮಿಗೆ ದಾಳಿ ಮಾಡುತ್ತಿರುತ್ತವೆ. ಆಗ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಕುಮ್ಕಿ ಆನೆಗಳನ್ನು ಬಳಸಲಾಗುತ್ತದೆ. ಐತಿಹಾಸಿಕವಾಗಿ, ಸಾಂಪ್ರದಾಯಿಕ ಆಚರಣೆಗಳಲ್ಲೂ ಕುಮ್ಕಿ ಆನೆಗಳನ್ನು ಬಳಕೆ ಮಾಡುವುದು ಗಮನಾರ್ಹವಾಗಿದ್ದು, ತಮಿಳುನಾಡು ಹಾಗೂ ಕೇರಳದಲ್ಲಿ ಹಬ್ಬ ಹರಿದಿನಗಳಲ್ಲಿ ಕುಮ್ಕಿ ಆನೆಗಳನ್ನು ಹೆಚ್ಚು ಬಳಸುತ್ತಾರೆ.

ಕುಮ್ಕಿ ಆನೆಗಳು ಯಾವುವು?: ''ಸಾಮಾನ್ಯವಾಗಿ ಪಳಗಿಸಿದ ಹೆಣ್ಣು ಆನೆಗಳನ್ನು ಕುಮ್ಕಿ ಆನೆಗಳು ಎಂದು ಕರೆಯುತ್ತಾರೆ. ಈ ಕುಮ್ಕಿ ಆನೆಗಳು ಶಿಬಿರದಲ್ಲಿ ಇರುತ್ತವೆ. ಅವು ಜೊತೆಗಿದ್ದರೆ ಗಂಡು ಆನೆಗಳು ಸಮಾಧಾನದಿಂದ ಇರುತ್ತವೆ ಎಂಬ ಮಾತಿಗೆ ಅನ್ವಯವಾಗುವಂತೆ ಎಲ್ಲಾ ಶಿಬಿರಗಳಲ್ಲಿ ಈ ಪಳಗಿದ ಹೆಣ್ಣು ಆನೆಗಳಿರುತ್ತವೆ. ಸಾಮಾನ್ಯವಾಗಿ ಆನೆಗಳು ಸಂಘ ಜೀವಗಳು, ಒಟ್ಟಾಗಿ ಕುಟುಂಬದ ರೀತಿಯಲ್ಲಿ ಜೀವಿಸುತ್ತವೆ. ವಿಶೇಷವಾಗಿ ಕಾಡಿನಲ್ಲಿ ಕೇವಲ ಹೆಣ್ಣಾನೆಗಳು ಗುಂಪಾಗಿ ಒಟ್ಟಿಗೆ ಇರುತ್ತವೆ. ಆದರೆ ಗಂಡು ಆನೆಗಳು ಜೊತೆಗಿರುವುದಿಲ್ಲ. ಕೇವಲ ಮದ ಬಂದಾಗ ಮಾತ್ರ ಸಂಪರ್ಕಕ್ಕೆ ಬರುತ್ತವೆ'' ಎನ್ನುತ್ತಾರೆ ಆನೆ ತಜ್ಞ ಡಾ ಮಕಾಲೆ ಕಾರ್ಗೆ ಅವರು.
'ಈಟಿವಿ ಭಾರತ' ಜೊತೆ ಮಾತನಾಡಿದ ಕಾರ್ಗೆ ಅವರು, ''ಅರಣ್ಯ ಇಲಾಖೆ ನಡೆಸುವ ಆನೆ ಶಿಬಿರಗಳಲ್ಲಿ ಇರುವ ಹೆಣ್ಣಾನೆಗಳನ್ನು ಕುಮ್ಕಿ ಆನೆಗಳು ಎಂದು ಕರೆಯುತ್ತಾರೆ. ಈ ಹೆಣ್ಣು ಕುಮ್ಕಿ ಆನೆಗಳು ಇರುವುದರಿಂದಲೇ ಶಿಬಿರದ ಗಂಡು ಆನೆಗಳ ನಿಯಂತ್ರಣ ಸಾಧ್ಯ ಎಂದು ನಂಬಲಾಗಿದೆ. ಅಲ್ಲದೆ, ದಸರಾ ಸಂದರ್ಭದಲ್ಲೂ ಗಂಡಾನೆಯ ಅಕ್ಕಪಕ್ಕದಲ್ಲೇ ಕುಮ್ಕಿ ಆನೆಗಳು ಇರುವುದರಿಂದ ಜಂಬೂ ಸವಾರಿ ಹೊರುವ ಆನೆಯು ಭಯಕೊಳ್ಳದ ಸಮಾಧಾನದಿಂದ ಸಾಗುತ್ತದೆ. ಆಗು ಮಾನವ ಆನೆ ಸಂಘಾರ್ಷಕ್ಕೆ ಪರಿಹಾರ ಕೊಡಲು ಪುಂಡಾನೆ ಸೆರೆಗೆ ಕಾರ್ಯಚರಣೆ ಈ ಕುಮ್ಕಿ ಹೆಣ್ಣು ಆನೆಗಳು ಸಹಕಾರಿ'' ಎಂದು ಮಾಹಿತಿ ನೀಡಿದರು.

ಕುಮ್ಕಿ ಆನೆಗೆ ತರಬೇತಿ ಹೇಗೆ? ರಾಜ್ಯದಲ್ಲಿ 100 ಕುಮ್ಕಿ ಆನೆಗಳಿವೆ. ಅದರಲ್ಲಿ 24 ಕುಮ್ಕಿ ಆನೆಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕುಮ್ಕಿ ಆನೆಗಳು ಕಾಡಾನೆಗಳನ್ನು ಸೆರೆಹಿಡಿಯಲು ಮತ್ತು ಪಳಗಿಸಲು ತರಬೇತಿ ಪಡೆದ ಆನೆಗಳಾಗಿವೆ. ಕಾಡಿನಲ್ಲಿ ಹಿಂಡಿನಿಂದ ಬೇರ್ಪಟ್ಟು ಸೆರೆಹಿಡಿಯಲಾದ ಆನೆ ಮರಿಗಳನ್ನು ಪಳಗಿಸಿ ಕುಮ್ಕಿ ಆನೆಗಳಾಗಿಸಲು ತರಬೇತಿ ನೀಡಲಾಗುತ್ತದೆ.
ತರಬೇತಿಗೆ ಮೂರು ವರ್ಷ ಬೇಕಾಗುತ್ತದೆ. ಟ್ರ್ಯಾಂಕ್ವಿಲೈಸಿಂಗ್ ಮೂಲಕ ಸೆರೆಹಿಡಿಯಲಾದ ಕಾಡಾನೆಯನ್ನು ಮರದ ಆವರಣದಲ್ಲಿ ಇರಿಸಲಾಗುತ್ತದೆ. ಸೆರೆಹಿಡಿಯುವಿಕೆಯ ನಂತರದ ಆರಂಭಿಕ ದಿನಗಳಲ್ಲಿ, ಕಾಡಾನೆಯು ಆವರಣವನ್ನು ಕೆಡವಲು ಪ್ರಯತ್ನಿಸುತ್ತದೆ. ಆನೆಯ ಉಸ್ತುವಾರಿಯನ್ನು ಇಬ್ಬರು ಮಾವುತರಿಗೆ ನೀಡಲಾಗುತ್ತದೆ. ಆನೆ ಶಾಂತವಾಗಲು ಪ್ರಾರಂಭಿಸಿದ ನಂತರ ತರಬೇತಿಯನ್ನು ಆರಂಭಿಸಲಾಗುತ್ತದೆ. ಆರಂಭದಲ್ಲಿ ಕೆಲವು ಮೂಲಭೂತ ಆಜ್ಞೆಗಳನ್ನು ನೀಡಲಾಗುತ್ತದೆ. ಆನೆ ಪಾಲಿಸಿದರೆ, ಅದಕ್ಕೆ ಕಬ್ಬು ಅಥವಾ ಬೆಲ್ಲವನ್ನು ತಿನ್ನಿಸಲಾಗುತ್ತದೆ. ನಂತರ ಮಾವುತರು ಆನೆಯೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಾರೆ. ಬಳಿಕ ಆನೆಯನ್ನು ಆವರಣದಿಂದ ಹೊರಗೆ ಬಿಡಲಾಗುತ್ತದೆ ಮತ್ತು ತಜ್ಞರ ತರಬೇತಿ ಪ್ರಾರಂಭವಾಗುತ್ತದೆ. ವೈದ್ಯರು ಮತ್ತು ಅರಣ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತರಬೇತಿ ಮೂರು ವರ್ಷಗಳವರೆಗೆ ನಡೆಯುತ್ತದೆ.

ಕುಮ್ಕಿ ಆನೆಯನ್ನು ಇತರ ಆನೆಗಳೊಂದಿಗೆ ಬೆರೆಯಲು ಬಿಡಲಾಗುತ್ತದೆ. ಇದು ಕಾಡಾನೆಯನ್ನು ನೋಡಿ ಭಯಪಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಮುಂದಿನ ಹಂತದಲ್ಲಿ ಮಾವುತನೊಂದಿಗೆ ಪ್ರವಾಸಕ್ಕೆ ಹೋಗುವ ಮೂಲಕ ಆ ಆನೆಯನ್ನು ಮತ್ತೆ ಕಾಡಿಗೆ ಪರಿಚಯಿಸಲಾಗುತ್ತದೆ. ತರಬೇತಿಯ ಕೊನೆ ಹಂತದಲ್ಲಿ ಆನೆಯನ್ನು ತಾನಾಗಿಯೇ ಕಾಡಿಗೆ ಕಳುಹಿಸಲಾಗುತ್ತದೆ. ಅದು ಹಿಂತಿರುಗಿದ ಬಳಿಕ ತರಬೇತಿ ಪಡೆದ ಕುಮ್ಕಿ ಆನೆಯಾಗುತ್ತದೆ. ತರಬೇತಿ ಪಡೆದ ನಂತರ ಆನೆಗಳು ಕುಮ್ಕಿ ಸೇವೆಗೆ ಸೇರುತ್ತವೆ ಮತ್ತು 60 ವರ್ಷ ವಯಸ್ಸಿನವರೆಗೂ ಸರ್ಕಾರಿ ಸೇವೆ ಸಲ್ಲಿಸುತ್ತವೆ. 60 ವರ್ಷ ವಯಸ್ಸಿನಲ್ಲಿ ನಿವೃತ್ತವಾದ ನಂತರ ಆನೆ ಅಭಯಾರಣ್ಯದಲ್ಲಿ ವಿಶ್ರಾಂತಿ ಪಡೆಯಬಹುದಾಗಿದೆ.
ಗಡಿ ಜಿಲ್ಲೆ ಆನೆ ಸಮಸ್ಯೆಗೂ ಪರಿಹಾರ: ಆಂಧ್ರಪ್ರದೇಶದ ಚಿತ್ತೂರು ಗಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆ ವ್ಯಾಪ್ತಿಯಲ್ಲೂ ಆನೆ- ಮಾನವ ಸಂಘರ್ಷ ಹೆಚ್ಚುತ್ತಿದ್ದು, ಆಂಧ್ರಪ್ರದೇಶದಿಂದ ನಮ್ಮ ರಾಜ್ಯಕ್ಕೆ ಪುಂಡಾನೆಗಳು ಬಾರದಂತೆ ತಡೆಯಲೂ ಆಂಧ್ರ ನಡೆಸಲಿರುವ ಆನೆ ಸೆರೆ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ನೆರವಾಗಲಿದೆ. ಈ ನಿಟ್ಟಿನಲ್ಲಿ ಕುಮ್ಕಿ ಆನೆಗಳ ಹಸ್ತಾಂತರ ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಕರ್ನಾಟಕದ ಹೆಮ್ಮೆಯ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಥವಾ ದಸರಾ ಮಹೋತ್ಸವಕ್ಕಾಗಿ ಈಗಾಗಲೇ ಗುರುತಿಸಲಾಗಿರುವ ಯಾವುದೇ ಕುಮ್ಕಿ ಆನೆಯನ್ನು ಆಂಧ್ರಪ್ರದೇಶಕ್ಕೆ ನೀಡಲಾಗುತ್ತಿಲ್ಲ ಎಂದು ಸಚಿವ ಖಂಡ್ರೆ ಸ್ಪಷ್ಟಪಡಿಸಿದರು.
ಆಂಧ್ರಪ್ರದೇಶಕ್ಕೆ ನೀಡಲಾದ ಕುಮ್ಕಿ ಆನೆಗಳ ವಿವರ:
1. ಕೃಷ್ಣ, 16 ವರ್ಷ ವಯಸ್ಸು. 2022ರಲ್ಲಿ ಚಿಕ್ಕಮಗಳೂರಿನಲ್ಲಿ ಈ ಆನೆ ಸೆರೆ ಹಿಡಿಯಲಾಗಿತ್ತು. ಈ ಆನೆ ತೂಕ 3050 ಕೆ.ಜಿ ಇದೆ.
2. ಶಿವಮೊಗ್ಗ ಅಭಿಮನ್ಯು, 15 ವರ್ಷ ವಯಸ್ಸು. 2023ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾದ ಆನೆ. ಈ ಆನೆ ತೂಕ 3070 ಕೆ.ಜಿ ಇದೆ.
3. ದೇವ, 39 ವರ್ಷ ವಯಸ್ಸು. ಕೊಡಗು ಜಿಲ್ಲೆ, ಕುಶಾಲನಗರದಲ್ಲಿ 2019ರಲ್ಲಿ ಸೆರೆ ಹಿಡಿಯಲಾದ ಆನೆಯಾಗಿದ್ದು, ತೂಕ 3800 ಕೆ.ಜಿ ಇದೆ.
4. ರಂಜನ್ ದುಬಾರೆ ಶಿಬಿರದಲ್ಲೇ ಜನಿಸಿದ ಆನೆ. ವಯಸ್ಸು 25 ವರ್ಷ. ಈ ಆನೆಯ ತೂಕ 3700 ಕೆಜಿ ಇದೆ.
ಆಂಧ್ರಪ್ರದೇಶ ಒಟ್ಟು 8 ಆನೆಗಳನ್ನು ನೀಡುವಂತೆ ಮನವಿ ಮಾಡಿದ್ದು, ಕರ್ನಾಟಕ 6 ಆನೆ ನೀಡಲು ಸಮ್ಮತಿಸಿದೆ. ಇಂದು 4 ಆನೆಗಳನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೆರಡು ಆನೆಗಳನ್ನು ನೀಡಲಾಗುತ್ತದೆ.
"ನಮ್ಮಲ್ಲಿ 100 ಕುಮ್ಕಿ ಆನೆಗಳಿವೆ. ಅದರಲ್ಲಿ 24 ಆನೆಗಳನ್ನು ಮಾತ್ರ ಆಪರೇಷನ್ಗೆ ಬಳಸುತ್ತಿದ್ದೇವೆ. ಕುಮ್ಕಿ ಆನೆಗಳಿಗೆ ವಿಶೇಷ ತರಬೇತಿ ಕೊಡುತ್ತೇವೆ. ಕುಮ್ಕಿ ಆನೆಗಳು ಕಾಡಿನಲ್ಲಿರುವ ಆನೆಗಳನ್ನು ಹಿಮ್ಮೆಟ್ಟಿಸಲು ಉಪಯೋಗಿಸಲಾಗುತ್ತದೆ. ಈಗ ಆಂಧ್ರಕ್ಕೆ 6 ಆನೆಗಳನ್ನು ಕೊಡುತ್ತಿದ್ದೇವೆ. ಕಾರಣಾಂತರಗಳಿಂದ ಎರಡನ್ನು ಈಗ ನೀಡುತ್ತಿಲ್ಲ. ಚಿತ್ತೂರು ಅರಣ್ಯಕ್ಕೆ ಆನೆಗಳನ್ನು ಕಳುಹಿಸಲಾಗಿದೆ. ಕುಮ್ಕಿ ಆನೆಗಳ ಜೊತೆ ಆಯಾ ಆನೆಯ ಕಾವಾಡಿ ಮತ್ತು ಮಾವುತರನ್ನು ಆಂಧ್ರಕ್ಕೆ ಕಳುಹಿಸಲಾಗಿದ್ದು, ಅಲ್ಲಿನ ಮಾವುತರಿಗೆ ಒಂದು ತಿಂಗಳು ತರಬೇತಿ ಕೊಟ್ಟ ನಂತರ ನಮ್ಮ ಮಾವುತರು ವಾಪಸ್ ಬರುತ್ತಾರೆ" ಎಂದು ಅರಣ್ಯ ಇಲಾಖೆಯ ಮುಖ್ಯ ವನ್ಯ ಜೀವಿ ಪರಿಪಾಲಕರಾದ ಸುಭಾಷ್ ಮಲ್ಕಡೆ ಅವರು 'ಈಟಿವಿ ಭಾರತ'ಗೆ ತಿಳಿಸಿದರು.
ಇದನ್ನೂ ಓದಿ: ನಾಲ್ಕು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರ ಮಾಡಿದ ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: ನಾಡಗೀತೆಯ ಸಾಲು ಹಾಡಿ ಕನ್ನಡಾಭಿಮಾನ ತೋರಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್