ಬೆಂಗಳೂರು: ನಮಗೆ ಜಾಸ್ತಿ ಬಹುಮತ ಇದೆ ಎಂದು ಈ ಸರ್ಕಾರ ದರ್ಪ ತೋರಿಸುತ್ತಿದೆ. ದಪ್ಪ ಚರ್ಮದ ಈ ಸರ್ಕಾರಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನ ಇವರು ಏನೋ ಒಳ್ಳೆಯದು ಮಾಡುತ್ತಾರೆ ಎಂದು ವೋಟು ಹಾಕಿ ಗೆಲ್ಲಿಸಿದರು. ಆದರೆ ಸುಲಿಗೆಯನ್ನೇ ಮೂಲ ಮಂತ್ರ ಮಾಡಿಕೊಂಡಿರುವ ಈ ಸರ್ಕಾರ, ಜನರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದೆ. ನಾವು ಸುಮ್ಮನೆ ಇರಲು ಸಾಧ್ಯ ಇಲ್ಲ ಎಂದವರು ಗುಡುಗಿದರು.
ಐದು ವರ್ಷ ಕಾಲ ಜನ ಹಿಂಸೆ ಅನುಭವಿಸಬೇಕಾಗಿದೆ. ಈಗಾಗಲೇ ಎರಡು ವರ್ಷ ಚಿತ್ರಹಿಂಸೆ ಕೊಟ್ಟಾಗಿದೆ. ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಚುನಾವಣೆ ನಡೆಸಲು ಧೈರ್ಯ ಮಾಡುತ್ತಿಲ್ಲ. ವಿಪಕ್ಷ ಪ್ರತಿಭಟನೆ ಮಾಡಿದಾಗ, ಅದಕ್ಕೆ ಪ್ರತಿಯಾಗಿ ಸರ್ಕಾರವೇ ಇನ್ನೊಂದು ಕಾರ್ಯಕ್ರಮ ರೂಪಿಸುತ್ತದೆ. ದಾರಿ ತಪ್ಪಿಸುವ ಕೆಲಸ ಇದು. ಕೆಪಿಸಿಸಿ ಅಧ್ಯಕ್ಷರದ್ದೇ ಇದೆಲ್ಲ ತಂತ್ರಗಾರಿಕೆ. ಅದರಲ್ಲಿ ನಿಸ್ಸೀಮರು ಅವರು. ಅಂತಿಮವಾಗಿ ಜನರ ಮುಂದೆ ಜನಪ್ರತಿನಿಧಿಗಳು ತಲೆ ಬಾಗಲೇಬೇಕು ಎಂದು ಅವರು ಕಿಡಿಕಾರಿದರು.
ನಾವು ನಮ್ಮ ಜವಾಬ್ದಾರಿ ಕರ್ತವ್ಯ ಅರಿತು ಈ ಪ್ರತಿಭಟನೆ ಮಾಡುತ್ತಿದ್ದೇವೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಈ ಬೃಹತ್ ಹೋರಾಟ ಮಾಡುತ್ತಿದ್ದೇವೆ. ಆಡಳಿತ ವೈಫಲ್ಯ, ಭ್ರಷ್ಟಾಚಾರ ಮಾತ್ರವಲ್ಲ ಅನೇಕ ವಿಚಾರಗಳ ಬಗ್ಗೆ ನಮ್ಮ ಹೋರಾಟ ನಡೆಸಿದ್ದೇವೆ. ಇದು ಒಂದು ದಿನದ ಅಭಿಯಾನ ಅಲ್ಲ ಸರ್ಕಾರ ಇರೋ ತನಕ ನಮ್ಮ ಹೋರಾಟ ನಿರಂತರ ವಾಗಿರುತ್ತದೆ ಎಂದರು.
ಪ್ರತಿ ಹಳ್ಳಿ ಹಳ್ಳಿಯಲ್ಲೂ 'ಸಾಕಪ್ಪ ಸಾಕು ಈ ಕಾಂಗ್ರೆಸ್ ಸರ್ಕಾರ ' ಅನ್ನೋ ಭಾವನೆ ಜನರ ಮನಸಿನಲ್ಲಿ ಬಂದಿದೆ. ಜನ ವಿರೋಧಿ ಸರ್ಕಾರ ಜನರನ್ನು ಕಿತ್ತು ತಿನ್ನುತ್ತಿದೆ. ಕಾಂಗ್ರೆಸ್ಸಿನ ದುರಾಡಳಿತಕ್ಕೆ ದಿಟ್ಟ ಉತ್ತರ ನೀಡಬೇಕಿದೆ. ಈ ಹೊರಟ್ಟಕ್ಕೆ ನಮ್ಮ ಜತೆ ಕೈ ಜೋಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ನಿಖಿಲ್ ಅವರು ಮನವಿ ಮಾಡಿದರು.
ಕಮಿಷನ್ ಅನ್ನೋದಕ್ಕೆ ಲಿಮಿಟೆಷನ್ ಇಲ್ಲ: ಕಳೆದ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ಸಿಗರು ಅಂದು ಇದ್ದಂತ ಸರ್ಕಾರದ ವಿರುದ್ಧ ಪೇ ಸಿಎಂ ಅಭಿಯಾನ ಮಾಡಿದ್ದರು. 40% ಕಮಿಷನ್ ಆರೋಪ ಮಾಡಿದ್ದರು. ನಮಗೊಂದು ಅವಕಾಶ ಕೊಡಿ ನಾವು ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಎಂದು ಹೇಳಿದ್ದರು. ಅಂತ ಹೇಈಗ ಭ್ರಷ್ಟಾಚಾರ ಅನ್ನುವುದು ಯಾವ ಹಂತಕ್ಕೆ ತಲುಪಿದೆ ಎಂದರೆ 'ಪರ್ಸೆಂಟೇಜ್ ಅನ್ನುವುದಕ್ಕೆ ಲಿಮಿಟೆಷನ್ ಇಲ್ಲ', ಲಿಮಿಟೆಷನ್ ಮೀರಿ ಹೋಗಿದೆ ಎಂದು ಅವರು ಆರೋಪಿಸಿದರು.
ರಾಯರೆಡ್ಡಿಯವರಿಗೆ ಅಭಿನಂದನೆ: ಸಿಎಂ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು ಸರ್ಕಾರದ ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಭ್ರಷ್ಟಾಚಾರ ಅನೇಕ ಸರ್ಕಾರಗಳಲ್ಲಿ ಇದೆ, ಇಲ್ಲ ಅಂತ ಹೇಳೋದಿಲ್ಲ. ಆದರೆ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಅಂತ ರಾಯರೆಡ್ಡಿ ಅವರೇ ತಿಳಿಸಿದ್ದಾರೆ. ಅವರು ಹೇಳಿರುವುದನ್ನು ಗೌರವಿಸುತ್ತೇವೆ. ಆ ವ್ಯವಸ್ಥೆಯಿಂದ ಹೊರಬರುವುದಕ್ಕೆ ಈ ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ ಜೆಡಿಎಸ್ ಸರ್ಕಾರದ ವಿಚಾರವಾಗಿ ಅವರು ಮಾತನಾಡಿರುವುದು ಕೇವಲ ರಾಜಕೀಯ ಅಷ್ಟೇ ಎಂದರು.
ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ: ಜಾತಿ ಜನಗಣತಿ ಎನ್ನುವುದು ಕ್ರಮಬದ್ಧವಾಗಿ, ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಹೇಳಿದರು. ಮೊದಲನೆಯದಾಗಿ ವರದಿಯಲ್ಲಿ ಏನಿದೆ ಎನ್ನುವುದನ್ನು ಬಹಿರಂಗಪಡಿಸಬೇಕು. ಆದಾದ ನಂತರ ನಾವು ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂಬ ತೀರ್ಮಾನ ಮಾಡುತ್ತೇವೆ. ಒಂದಂತೂ ಸತ್ಯ, ಈ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ನಮ್ಮ ಮನೆಗಾಗಲಿ, ನಮ್ಮ ಅಜ್ಜ ದೇವೇಗೌಡರ ಮನೆಗಾಗಲಿ ಯಾರೂ ಬಂದು ಗಣತಿ ಮಾಡಿಲ್ಲ ಎಂದು ಅವರು ಟೀಕಿಸಿದರು.
ರಾಜಕೀಯ ಸಂಕಷ್ಟ ಕಾಲ ಬಂದಾಗ ಕೆಲವರಿಗೆ ಇಂಥ ವಿಚಾರಗಳು ನೆನಪಿಗೆ ಬರುತ್ತವೆ. ಐದು ವರ್ಷ ಮುಖ್ಯಮಂತ್ರಿ, ಎರಡನೇ ಬಾರಿ ಸಿಎಂ ಆಗಿ ಎರಡು ವರ್ಷ ಆಗಿದೆ. ಹಣಕಾಸು ಸಚಿವರು, ಉಪ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಇಷ್ಟೆಲ್ಲಾ ಆಗಿದ್ದರು ಅವರಿಗೆ ಅಹಿಂದ ಜನರನ್ನು ಉದ್ಧಾರ ಮಾಡುವುದು ಸಾಧ್ಯ ಆಗಿಲ್ಲ. ರಾಜಕೀಯ ಗಿಮಿಕ್ ಮಾಡಿಕೊಂಡು ತಿರುಗಾಡುತ್ತಿದ್ದಾರೆ ಎಂದು ಅವರು ದೂರಿದರು.