ಬೆಂಗಳೂರು: ಸರ್ಕಾರದ ಬಳಿ ಹಣವಿಲ್ಲವೆಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ನಾನು ಆ ರೀತಿ ಹೇಳಿಯೇ ಇಲ್ಲ. ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು ಎಂದು ಗರಂ ಆದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಾದಾಮಿ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಎಂದಿದ್ದು. ಅಷ್ಟೊಂದು ಹಣ ನಾವು ಕೊಡಲಾಗಲ್ಲ ಎಂದೆ. ಕೇಂದ್ರವೂ ಕೊಟ್ಟರೆ ಅನುಕೂಲ ಅಂದಿದ್ದು, ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರದ ಬಳಿ ದುಡ್ಡಿಲ್ಲ ಅಂತ ಹೇಳಿಲ್ಲ. ಬಜೆಟ್ ಗಾತ್ರ ಸಹಜವಾಗಿ ಹೆಚ್ಚಾಗಿದೆ. ನೀರಾವರಿ, ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಗ್ಯಾರಂಟಿಗೆ ಮಾತ್ರವೇ ಹಣ ಕೊಟ್ಟಿಲ್ಲ. ಹಣ ಇಲ್ಲ ಅಂತ ಹೇಳುವುದಕ್ಕೆ ನನಗೆ ಪ್ರಜ್ಞೆ ಇಲ್ಲವೇ?. ಸರ್ಕಾರದಲ್ಲಿದ್ದು ಆ ರೀತಿ ಮಾತನಾಡಲಾಗಲ್ಲ. ನನಗೆ ವಸ್ತು ಸ್ಥಿತಿಯ ಬಗ್ಗೆ ಗೊತ್ತಿದೆ. ನನಗಿಂತ ಚೆನ್ನಾಗಿ ಯಾರಿಗೆ ಅರ್ಥ ಆಗುತ್ತದೆ. ರಾಜ್ಯದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದರು.
ಶಾಸಕರ ಜೊತೆ ಚರ್ಚೆಗೆ ವರಿಷ್ಠರ ಸೂಚನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ದೆಹಲಿಯಲ್ಲಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಶಾಸಕರನ್ನು ಕರೆದು ಮಾತನಾಡಿ ಅಂದ್ರೆ ಮಾತನಾಡುತ್ತಾರೆ ಎಂದು ಹೇಳಿದರು.
ಸಚಿವರು ಶಾಸಕರಿಗೆ ಸಿಗಲ್ಲವೆಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಶಾಸಕರು ಈ ಆರೋಪ ಮಾಡಿರಬಹುದು. ಅವರಿಗೆ ವೈಯಕ್ತಿಕ ತೊಂದರೆ ಆಗಿರಬಹುದು. ಶಾಸಕರೇ ಹೇಳಿದ ಮೇಲೆ ಒಪ್ಪಬೇಕಲ್ಲ. ಅದನ್ನೆಲ್ಲ ಸಿಎಂ ಬಗೆಹರಿಸ್ತಾರೆ. ಸಿಎಲ್ಪಿ ಸಭೆಯಲ್ಲಿ ಮಾತನಾಡಲು ಶಾಸಕರಿಗೆ ಅವಕಾಶ ನೀಡಲಾಗಿತ್ತು. ಕೆಲವರು ಅಲ್ಲಿ ಪ್ರಸ್ತಾಪ ಮಾಡಿದ್ದರು. ಸಚಿವರು ಭೇಟಿ ಮಾಡದ ಬಗ್ಗೆ ಪ್ರಸ್ತಾಪಿಸಿದ್ದರು. ಇದೇನು ಅಂಥಹ ದೊಡ್ಡ ವಿಷಯವಲ್ಲ. ಸಿಎಂ ಇದನ್ನು ಬಗೆಹರಿಸುತ್ತಾರೆ. ಎಲ್ಲ ಸರ್ಕಾರದ ವೇಳೆ ಇದು ಇದ್ದಿದ್ದೇ, ಶಾಸಕರ ಎಲ್ಲ ಬೇಡಿಕೆ ಈಡೇರಿಕೆ ಕಷ್ಟ ಎಂದರು.
ಬಿಜೆಪಿ ತುರ್ತುಪರಿಸ್ಥಿತಿ ಕರಾಳ ದಿನಾಚರಣೆ ವಿಚಾರಕ್ಕೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಹೇರಿ 50 ವರ್ಷ ಆಗಿ ಹೋಗಿದೆ. ತುರ್ತು ಪರಿಸ್ಥಿತಿ ಇತಿಹಾಸ ಪುಟ ಸೇರಿದೆ. ಬಿಜೆಪಿಯವರು ಜೀವಂತ ಇಡಲು ನೋಡುತ್ತಿದ್ದಾರೆ. 50 ವರ್ಷ ಆದರೂ ಆಚರಣೆ ಮಾಡ್ತಿದ್ದಾರೆ. ಇದರ ಹಿಂದಿನ ರಾಜಕೀಯ ದುರುದ್ದೇಶ ಏನು?. ನಾವು ಮುಂದಕ್ಕೆ ಹೋಗಬೇಕು, ಹಿಂದೆ ಅಲ್ಲ. ಮೋದಿಯವರೇ ಭವಿಷ್ಯದತ್ತ ಹೋಗೋಣ ಅಂತಾರೆ. ಯಾಕೆ ಇವರು ಹಿಂದಕ್ಕೆ ಹೋಗ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಸಂಪಿಗೆಹಳ್ಳಿ ಠಾಣೆ ಮುಂದೆ ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ,
ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಳ್ತಾರೆ. ಇದಕ್ಕೆ ಸಂಬಂಧಿಸಿದ ಕಾನೂನಿದೆ. ಅದರಂತೆ ಪೊಲೀಸರು ಕ್ರಮ ಜರುಗಿಸ್ತಾರೆ. ಇಂತಹ ಘಟನೆಗೆ ಸರ್ಕಾರ ಅವಕಾಶ ಕೊಡಲ್ಲ ಎಂದು ಹೇಳಿದರು.
ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ ಸಂಬಂಧ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಹಲ್ಲೆ ಮಾಡಿಲ್ಲ. ಪೊಲೀಸರು ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಹಲ್ಲೆ ಮಾಡಿದ್ದು ಅವರ ಗನ್ ಮ್ಯಾನ್, ಚಾಲಕ. ಈ ಬಗ್ಗೆ ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ. ತನಿಖೆ ಬಳಿಕ ವಸ್ತುಸ್ಥಿತಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ವಿಪಕ್ಷಗಳಿಗೆ ನೆರವಾಗುವಂತೆ ಮಾತನಾಡಲು ನಾನು ಅವರ ಬಂಧುವಲ್ಲ: ಶಾಸಕ ರಾಜು ಕಾಗೆ
ಇದನ್ನೂ ಓದಿ: ಮಾಧ್ಯಮಗಳ ಮುಂದೆ ಏನು ಹೇಳಿದ್ದೇನೋ ಅದನ್ನೇ ಸಿಎಂಗೆ ಹೇಳುವೆ: ಶಾಸಕ ಬಿ.ಆರ್. ಪಾಟೀಲ್