ETV Bharat / state

ಕರಾವಳಿಯ ಪ್ರಸಿದ್ಧ ಮಲ್ಪೆ ಬೀಚ್​ನಲ್ಲಿ ಪ್ರಾರಂಭವಾಗದ ವಾಟರ್ ಸ್ಪೋರ್ಟ್ಸ್: ಪ್ರವಾಸಿಗರಿಗೆ ನಿರಾಶೆ

ದಸರಾ ರಜೆಯನ್ನು ವಿಸ್ತರಿಸಲಾಗಿದ್ದು, ಇನ್ನಷ್ಟು ಪ್ರವಾಸಿಗರು ಮಲ್ಪೆ ಬೀಚ್​ಗೆ ಬರುವ ಕಾರಣ ಆದಷ್ಟು ಬೇಗ ಜಿಲ್ಲಾಡಳಿತ ವಾಟರ್ ಸ್ಪೋರ್ಟ್ಸ್ ಆರಂಭಿಸಲಿ ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಒತ್ತಾಯಿಸಿದ್ದಾರೆ.

UDUPI MALPE BEACH
ಮಲ್ಪೆ ಬೀಚ್​ (ETV Bharat)
author img

By ETV Bharat Karnataka Team

Published : October 10, 2025 at 9:38 AM IST

2 Min Read
Choose ETV Bharat

ಮಲ್ಪೆ: ಮಳೆಗಾಲ ಮುಗಿಯುತ್ತಾ ಬಂದರೂ ಉಡುಪಿಯ ಮಲ್ಪೆ ಬೀಚ್​ನಲ್ಲಿ ವಾಟರ್ ಸ್ಪೋರ್ಟ್ಸ್ ಇನ್ನೂ ಆರಂಭವಾಗಿಲ್ಲ. ಲಕ್ಷಾಂತರ ಪ್ರವಾಸಿಗರು ಬಂದು ನಿರಾಸೆಯಿಂದ ವಾಪಸ್ ಆಗುತ್ತಿದ್ದಾರೆ. ಜಿಲ್ಲಾಡಳಿತದ ನಿರ್ಲಕ್ಷ್ಯದ ಬಗ್ಗೆ ಪ್ರವಾಸಿಗರಿಂದ ಬೇಸರ ವ್ಯಕ್ತವಾಗುತ್ತಿದೆ. ಕಡಲತಡಿಗೆ ಬರುವ ಪ್ರವಾಸಿಗರಿಗೆ ಪರೋಕ್ಷವಾಗಿ ಅಪಾಯವೂ ಹೆಚ್ಚಾಗುತ್ತಿದೆ.

ಕರ್ನಾಟಕ ಕರಾವಳಿಯ ಬೀಚ್​ಗಳಲ್ಲೇ ಉಡುಪಿಯ ಮಲ್ಪೆ ಬೀಚ್ ವಿಶ್ವ ಪ್ರಸಿದ್ಧಿ ಪಡೆದಿದೆ. ಮಲ್ಪೆ ಬೀಚ್​ಗೆ ಬಂದರೆ ಎಂಜಾಯ್ ಮಾಡಬಹುದು ಎನ್ನುವುದು ಪ್ರವಾಸಿಗರ ಆಸೆ. ಸಮುದ್ರ ನೋಡುವುದರ ಜೊತೆಗೆ ನಾನಾ ಬಗೆಯ ವಾಟರ್ ಸ್ಪೋರ್ಟ್ಸ್​ಗಳು ಇಲ್ಲಿ ಯಾವತ್ತೂ ಇರುತ್ತವೆ. ಬೋಟಿಂಗ್, ಪ್ಯಾರಾಸೇಲಿಂಗ್, ಸೈಂಟ್ ಮೇರಿಸ್ ದೀಪಕ್ಕೆ ಪ್ರಯಾಣ. ನಾನಾ ಬಗೆಯ ಆಟಗಳು ಕಾಯಂ. ಆದರೆ ಈಗ ಬರುವ ಪ್ರವಾಸಿಗರಿಗೆ ನಿರಾಸೆ ಕಾದಿದೆ. ಸದ್ಯ ಇಲ್ಲಿ ಯಾವುದೇ ವಾಟರ್ ಸ್ಪೋರ್ಟ್ಸ್​ಗಳಿಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿಲ್ಲ. ಹೆಚ್ಚಾಗಿ ಮಳೆಗಾಲ ಮುಗಿದ ತಕ್ಷಣ ದಸರಾ ರಜೆ ಬರುತ್ತೆ. ಈ ವೇಳೆ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಬರುವುದು ಸಹಜ. ಇದೇ ಕಾರಣಕ್ಕೆ ಸೆಪ್ಟೆಂಬರ್ ತಿಂಗಳ ಮಧ್ಯಭಾಗದಿಂದ ನಾನಾ ಬಗೆಯ ಸಮುದ್ರ ಕ್ರೀಡೆಗಳು ಶುರುವಾಗಬೇಕು.

ಮಲ್ಪೆ ಬೀಚ್​ (ETV Bharat)

ತಾಂತ್ರಿಕ ಸಮಸ್ಯೆ: ಖಾಸಗಿಯವರು ನಿರ್ವಹಣೆ ಮಾಡುತ್ತಿದ್ದ ವಾಟರ್ ಸ್ಪೋರ್ಟ್ಸ್​ಗಳು ತಾಂತ್ರಿಕ ಸಮಸ್ಯೆ ಕಾರಣಕ್ಕೆ ರದ್ದಾಗಿವೆ. ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿ, ವಾಟರ್ ಸ್ಪೋರ್ಟ್ಸ್ ಆರಂಭಿಸಲು ಅವಕಾಶವಿದೆ. ಆದರೆ ಪ್ರವಾಸೋದ್ಯಮದ ಬಗ್ಗೆ ಯಾವುದೇ ಆಸಕ್ತಿ ತೋರಿಸದ ಜಿಲ್ಲಾಡಳಿತ ವಾಟರ್ ಸ್ಪೋರ್ಟ್ಸ್​ಗೆ ಅನುವು ಮಾಡಿಕೊಟ್ಟಿಲ್ಲ. ಬೇರೆಲ್ಲಾ ಕಡೆ ಅಂದರೆ ಕಾಪು, ಮಂಗಳೂರು, ಮರವಂತೆ ಭಾಗದಲ್ಲಿ ಸಮುದ್ರ ತೀರದ ಚಟುವಟಿಕೆಗಳು ಶುರುವಾಗಿವೆ. ಮಲ್ಪೆಯಲ್ಲಿ ಮಾತ್ರ ಅಡ್ಡಿಯಾಗಿದೆ. ವಾಟರ್ ಸ್ಪೋರ್ಟ್ಸ್​ಗಳು ಶುರುವಾದರೆ ಸಾಕಷ್ಟು ಬೋಟುಗಳು ಓಡಾಡುತ್ತವೆ. ಇದರಿಂದ ಸಮುದ್ರದಲ್ಲಿ ಆಟವಾಡುವ ಪ್ರವಾಸಿಗರಿಗೆ ರಕ್ಷಣೆಯೂ ಸಿಕ್ಕಂತಾಗುತ್ತದೆ. ಕಳೆದ ವರ್ಷ 68 ಮಂದಿಯನ್ನು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಪಾಯದ ಸಂದರ್ಭದಲ್ಲಿ ರಕ್ಷಿಸಿದ್ದಾರೆ. ಈ ಬಾರಿ ದಸರಾ ರಜೆಯ ವೇಳೆ ರಕ್ಷಣೆ ಇಲ್ಲದೆ ಇಬ್ಬರು ಸಾವನ್ನಪ್ಪಿದ್ದಾರೆ.

ದಸರಾ ರಜೆಯನ್ನು ವಿಸ್ತರಿಸಲಾಗಿದೆ. ಇನ್ನಷ್ಟು ಪ್ರವಾಸಿಗರು ಮಲ್ಪೆ ಬೀಚ್​ಗೆ ಬರುತ್ತಾರೆ. ಆದಷ್ಟು ಬೇಗ ಜಿಲ್ಲಾಡಳಿತ ವಾಟರ್ ಸ್ಪೋರ್ಟ್ಸ್ ಆರಂಭಿಸಲಿ ಎಂದು ಸ್ಥಳೀಯರು ಮತ್ತು ಪ್ರವಾಸಿಗರು ಒತ್ತಾಯಿಸಿದ್ದಾರೆ.

"ನಾವು ದೂರದ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದೇವೆ. ಆದರೆ ಇಲ್ಲಿ ಯಾವುದೇ ಜಲಕ್ರೀಡೆಗಳು ಪ್ರಾರಂಭಗೊಂಡಿಲ್ಲ. ಕೇವಲ ಬೀಚ್​ನಲ್ಲಿ ಮಾತ್ರ ಸ್ವಲ್ಪ ಹೊತ್ತು ಕಳೆದೆವು. ಈ ಹಿಂದೆ ಇಲ್ಲಿ ಹಲವು ಬಗೆಯ ಸ್ಪೋರ್ಟ್ಸ್​ಗಳು ಇದ್ದವು. ಈ ವರ್ಷ ಇನ್ನೂ ಪ್ರಾರಂಭಗೊಂಡಿಲ್ಲ. ಇದರಿಂದ ನಮಗೆ ನಿರಾಶೆಯಾಗಿದೆ" ಪ್ರವಾಸಿಗರಾದ ರೀನಾ ಡಿಸೋಜ ಹೇಳಿದರು.

ಇದನ್ನೂ ಓದಿ: ಗುಡ್​ನ್ಯೂಸ್​: ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಮಾರ್ಗವಾಗಿ ನವದೆಹಲಿಗೆ ಪ್ರಪ್ರಥಮ ವಿಶೇಷ ರೈಲು: ಅ.5ರಿಂದ ಸೇವೆ ಪ್ರಾರಂಭ