ಬೆಂಗಳೂರು: ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು, ಇದರಿಂದ ಒಕ್ಕಲಿಗರಿಗೆ ಅನ್ಯಾಯವಾಗಿದೆ. ಇದರ ವಿರುದ್ಧ ಎಲ್ಲರೂ ಒಂದಾಗಿ ಕರ್ನಾಟಕ ಬಂದ್ ರೀತಿ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಜಾತಿ ಗಣತಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಯಾರ ಮನೆಗೆ ಹೋಗಿ ಜನಗಣತಿ ಮಾಡಿದ್ದಾರೆ. ಈಗ ಮಾಡುವ ಉದ್ದೇಶವೇನು?. ಹತ್ತು ವರ್ಷದ ಹಿಂದೆ ಮಾಡಿದ ಜಾತಿ ಗಣತಿ ಈಗ ಏಕೆ ಬಿಡುಗಡೆ ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಸ್ವಾಮೀಜಿಗಳ ಜೊತೆ ಸಭೆ: ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಜಾರಿಗೆ ಮುಂದಾಗಿರುವುದರಿಂದ ನಾಳೆ ಇಲ್ಲವೇ ನಾಡಿದ್ದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಸಮುದಾಯದ ಸ್ವಾಮೀಜಿಗಳ ಸಭೆ ನಡೆಸಿ, ಅವರ ಮಾರ್ಗದರ್ಶನವನ್ನು ಪಡೆಯುವ ತೀರ್ಮಾನ ಮಾಡಿದ್ದೇವೆ ಎಂದು ಬಿ.ಕಂಚಪ್ಪಗೌಡ ಹೇಳಿದರು.
ಜಾತಿ ಗಣತಿಯಲ್ಲಿ ಲಿಂಗಾಯತ ಸಮುದಾಯ ಸೇರಿದಂತೆ ಬೇರೆ ಸಮುದಾಯಗಳಿಗೂ ಅನ್ಯಾಯವಾಗಿದೆ. ಹಾಗಾಗಿ ಲಿಂಗಾಯತ ಸಮುದಾಯ ಸೇರಿದಂತೆ ಇತರ ಸಮುದಾಯಗಳ ಜತೆಗೂ ಸೇರಿ ನಾವು ಒಗ್ಗಟ್ಟಾಗಿ ಹೋರಾಟ ನಡೆಸುತ್ತೇವೆ. ರಾಜ್ಯ ಸರ್ಕಾರ ಒಂದು ವೇಳೆ ಜಾತಿ ಗಣತಿ ವರದಿಯನ್ನು ಅನುಷ್ಠಾನಗೊಳಿಸಿದರೆ ಕಾನೂನು ಹೋರಾಟ ನಡೆಸುತ್ತೇವೆ. ಅವೈಜ್ಞಾನಿಕ ಹಾಗೂ ಕಾನೂನಾತ್ಮಕವಲ್ಲದ ವರದಿ ರದ್ದು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದೇವೆ ಎಂದರು.
ಇನ್ನೆರಡು ದಿನಗಳಲ್ಲಿ ನಮ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷಗಳನ್ನು ಸಿದ್ಧಪಡಿಸುತ್ತೇವೆ ಎಂದು ತಿಳಿಸಿದರು.
ಹೊಸ ಸಮೀಕ್ಷೆಗೆ ಒತ್ತಾಯ; ಸರ್ಕಾರ ಹೊಸದಾಗಿ ಸಮೀಕ್ಷೆ ನಡೆಸಿ ಜಾತಿ ಗಣತಿ ಮಾಡಿದರೆ ಅದಕ್ಕೆ ನಮ್ಮ ತಕರಾರಿಲ್ಲ. ರಾಜ್ಯ ಸಚಿವ ಸಂಪುಟದಲ್ಲಿರುವ ಒಕ್ಕಲಿಗ ಸಚಿವರು, ಶಾಸಕರು ಈ ಜಾತಿ ಗಣತಿ ವಿರುದ್ಧ ಗಟ್ಟಿಯಾಗಿ ಮಾತನಾಡಬೇಕು. ಯಾವುದೇ ಕಾರಣಕ್ಕೂ ಇದನ್ನು ಒಪ್ಪಬಾರದು ಎಂದು ಆಗ್ರಹಿಸಿದರು.
ಈಗಾಗಲೇ ಸೋರಿಕೆಯಾಗಿರುವ ವರದಿಯಲ್ಲಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 61 ಲಕ್ಷ ಒಕ್ಕಲಿಗರಿದ್ದಾರೆ ಎಂದು ತೋರಿಸಿದ್ದಾರೆ. ಇದು ಸರಿಯಲ್ಲ. ಮರಸು ಒಕ್ಕಲಿಗರ ಜನಸಂಖ್ಯೆ ಸುಮಾರು 3 ಲಕ್ಷ ಇದೆ ಎಂದು ಹೇಳಲಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ, ಹೊಸಕೋಟೆ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬೆಂಗಳೂರನ ಸುತ್ತಮುತ್ತಲು ಹೆಚ್ಚು ಮರಸು ಒಕ್ಕಲಿಗರಿದ್ದಾರೆ. ಇಂತಹ ಸಮುದಾಯವನ್ನು ಆರನೇ ಸ್ಥಾನಕ್ಕೆ ಕಳಿಸಲಾಗಿದೆ. ಮೀಸಲಾತಿ ಯಾರಿಗೆ ಹೆಚ್ಚು ಕೊಡಿಸಬೇಕು ಅನ್ನೋ ದೃಷ್ಟಿಯಿಂದ ಇದನ್ನು ಮಾಡಲಾಗಿದೆ. ನಮ್ಮ ಜನಾಂಗ, ವೀರಶೈವ ಲಿಂಗಾಯತರು, ಇತರೆ ಅನ್ಯಾಯಕ್ಕೊಳಗಾದ ಸಮುದಾಯ ಒಟ್ಟಿಗೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಪ್ರತ್ಯೇಕ ಸಮೀಕ್ಷೆ ಮಾಡಿಸುತ್ತೇವೆ: ಎಲ್ಲಾ ಜಿಲ್ಲಾ, ತಾಲೂಕುಗಳಲ್ಲಿ ನಮ್ಮ ನೂರಾರು ಸಂಘ ಸಂಸ್ಥೆಗಳಿವೆ. ಒಟ್ಟುಗೂಡಿಸಿ ನ್ಯಾಯಸಮ್ಮತವಾಗಿ ಹೋರಾಟ ಮಾಡುತ್ತೇವೆ.
ನಮ್ಮ ಸಮುದಾಯದಿಂದ ನಾವೇ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದೇವೆ. ಒಂದು ಬಟನ್ ಒತ್ತಿದ ತಕ್ಷಣ ಊರು, ಜಾತಿ, ಉಪ ಜಾತಿ ಬರುತ್ತದೆ. ನಾವೇ ಪ್ರತ್ಯೇಕ ಸಮೀಕ್ಷೆ ಮಾಡಿಸ್ತೇವೆ ಎಂದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ಅವರು ಈಟಿವಿ ಭಾರತ್ ಜೊತೆ ಮಾತನಾಡಿ, ನಮಗೆ ವರದಿ ಪ್ರತಿ ಸಿಕ್ಕಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿ ಆಧಾರದ ಮೇಲೆ ಜಾಗೃತರಾಗಿದ್ದೇವೆ. ಹಿಂದೆ ಚಿನ್ನಪ್ಪರೆಡ್ಡಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದಾಗ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಅಂತಹ ಪ್ರತಿಭಟನೆ ಮತ್ತೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲೋ ಒಂದು ಕಡೆ ಕುಳಿತುಕೊಡು ಜಾತಿ ಗಣತಿ ವರದಿ ತಯಾರಿಸಲಾಗಿದೆ. ಒಕ್ಕಲಿಗರು ಹಾಗೂ ಲಿಂಗಾಯತ ಸಮುದಾಯದವರನ್ನು ತುಳಿಯುವ ಹುನ್ನಾರ ಇದು. ನಿಮಗೆ ಬೇಕಾದಂತೆ ವರದಿ ತಯಾರಿಸಿ ನಮ್ಮ ಸಮುದಾಯವನ್ನು ತುಳಿಯುವುದು ಸರಿಯಲ್ಲ. ಒಕ್ಕಲಿಗರು ಸಿಡಿದೇಳುತ್ತಾರೆ. ವೈಜ್ಞಾನಿಕವಾಗಿ ಮತ್ತೆ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರನ್ನು ಹೊರಗಿಟ್ಟು ಮೀಸಲಾತಿ ಕೊಡಲು ಈ ರೀತಿ ಮಾಡಿದ್ದಾರೆ. ರಾಜ್ಯ ಸರ್ಕಾರದ ನಮ್ಮ ಸಮುದಾಯದ ಸಚಿವರು, ಶಾಸಕರ ಸಂಪರ್ಕದಲ್ಲಿದ್ದೇವೆ. ಅವರು ನಮ್ಮ ಪರ ನಿಲ್ಲುತ್ತಾರೆ. ಏ.17 ರಂದು ನಡೆಯುವ ಕ್ಯಾಬಿನೆಟ್ ಸಭೆ ತೀರ್ಮಾನ ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಕೋನಪ್ಪರೆಡ್ಡಿ ಹೇಳಿದರು.
ಇದನ್ನೂ ಓದಿ: ಇದು ಜಾತಿ ಗಣತಿ ಅಲ್ಲ; ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ವಿಚಾರ ತಿಳಿಯಲು ಮಾಡಿದ ಸಮೀಕ್ಷೆ- ಬಸವರಾಜ ರಾಯರೆಡ್ಡಿ
ಇದನ್ನೂ ಓದಿ: ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ: ರಂಭಾಪುರಿ ಶ್ರೀ