ಚಿಕ್ಕೋಡಿ: ಇಂದಿನ ಡಿಜಿಟಲ್ ಯುಗದಲ್ಲೂ ಗ್ರಾಮವೊಂದರ ಜನರು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ತಮ್ಮ ಆಚರಣೆಯನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಗ್ರಾಮದ ಜನರು ಪ್ರತಿ ಮೂರು ವರ್ಷಕ್ಕೆ ನಾಲ್ಕು ದಿನ ಗ್ರಾಮ ತೊರೆದು ಗ್ರಾಮ ದೇವತೆಯ ಸೇವೆ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲಿಲ್ಲ.
ಇಂತಹ ವಿಶೇಷ ಗ್ರಾಮವಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಅಥಣಿ ತಾಲೂಕಿನ ಕಕಮರಿ ಗ್ರಾಮಸ್ಥರು ಪ್ರತಿ ಮೂರು ವರ್ಷಕ್ಕೊಮ್ಮೆ ಹುಣ್ಣಿಮೆಯ ಮುನ್ನಾ ದಿನ ಗ್ರಾಮ ತೊರೆದು ಕೃಷ್ಣಾ ನದಿ ದಂಡೆಯಲ್ಲಿ ಬಿಡಾರ ಹುಡಿ ಅಮ್ಮಜೇಶ್ವರಿ ದೇವಿಯ ವಿಶೇಷ ಆರಾಧನೆ ಮಾಡುತ್ತಾರೆ. ತಲೆತಲಾಂತರದಿಂದ ನಡೆದು ಬಂದ ಈ ಆಚರಣೆಯನ್ನು ಇಂದಿಗೂ ಗ್ರಾಮಸ್ಥರು ಮುಂದುವರೆಸುತ್ತಿರುವುದು ವಿಶೇಷ.
ಪಲ್ಲಕ್ಕಿ ಉತ್ಸವ ಆಚರಣೆ: ಗ್ರಾಮ ದೇವತೆಯಾದ ಅಮ್ಮಾಜೇಶ್ವರಿ ದೇವಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ತಾಲೂಕಿನ ಝುಂಜರವಾಡ ಗ್ರಾಮದ ಹತ್ತಿರದ ಕೃಷ್ಣಾ ನದಿ ದಂಡೆಯಲ್ಲಿ ಜಲಾಭಿಷೇಕ, ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ಪಲ್ಲಕ್ಕಿ ಉತ್ಸವದಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗುತ್ತವೆ. ಈ ಸೇವೆಯ ನಂತರ ಪಲಕ್ಕಿ ಕಕಮರಿ ಗ್ರಾಮಕ್ಕೆ ಮರಳುತ್ತದೆ.
ಹುಣ್ಣಿಮೆ ಮುನ್ನಾದಿನ ಊರು ತೊರೆಯುವ ಗ್ರಾಮಸ್ಥರು ಹುಣ್ಣಿಮೆಯ ದಿನ ನಸುಕಿನ ಜಾವ ಝುಂಜರವಾಡ ಗ್ರಾಮದ ಕೃಷ್ಣಾ ನದಿಯಲ್ಲಿ ಮಿಂದೇಳುತ್ತಾರೆ. ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿ ಭಕ್ತಿ ಮೆರೆಯುತ್ತಾರೆ.
ಈ ಆಚರಣೆಯ ಮತ್ತೊಂದು ವಿಶೇಷವೆಂದರೆ, ಗ್ರಾಮಸ್ಥರೆಲ್ಲರೂ ಸಾಮೂಹಿಕವಾಗಿ ಮಡಿಯಿಂದ ದೇವಿಗೆ ಪ್ರಸಾದ ತಯಾರಿಸಿ ಸಮರ್ಪಿಸುತ್ತಾರೆ. ಈ ಆಚರಣೆಯಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಗ್ರಾಮಸ್ಥರು ಒಟ್ಟಾಗುತ್ತಾರೆ. ನಂತರ ದೇವಿಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದಾರಿಯುದ್ದಕ್ಕೂ ಮಂಗಳವಾದ್ಯ, ಪೂರ್ಣಕುಂಭ ಕಳಶದೊಂದಿಗೆ ದೇವಿ ನದಿಗೆ ಬರುವುದು ಎಲ್ಲರ ಗಮನ ಸೆಳೆಯುತ್ತದೆ.
ಅಕ್ಕ-ತಂಗಿಯರ ಭೇಟಿ: "ಮುತ್ತೂರು ಮಹಾಲಕ್ಷ್ಮಿ ಹಾಗೂ ಅಮ್ಮಾಜೇಶ್ವರಿ ದೇವಿ ಅಕ್ಕತಂಗಿಯರು. ಪ್ರತಿ ಮೂರು ವರ್ಷಕ್ಕೊಮ್ಮೆ ಆ ಅಕ್ಕ ತಂಗಿ ಭೇಟಿಯಾಗುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಗ್ರಾಮದಲ್ಲಿ ಯಾವುದೇ ಜಾತಿ, ಭೇದ ಎನ್ನದೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿ ದೇವಿಯ ಸೇವೆಗೆ ತೆರಳುತ್ತಾರೆ" ಎಂದು ಗ್ರಾಮಸ್ಥರು ಹೇಳುತ್ತಾರೆ.
ಮುಸ್ಲಿಂ ಸಮುದಾಯದ ದಾವಲ್ ಕಮಲ್ ಸಾಬ್ ಮಲಬಾದ್ ಮಾತನಾಡಿ, "ನಾವು ಅನ್ಯ ಧರ್ಮದವರೂ ಕೂಡ ಗ್ರಾಮ ದೇವತೆಯ ಆಚರಣೆಯ ಪದ್ಧತಿಗಳನ್ನು ನಾವೂ ಆಚರಿಸುತ್ತೇವೆ. ನಮ್ಮ ಗ್ರಾಮದಲ್ಲಿ 60ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿವೆ. ನಾವೂ ಕೂಡ ನದಿ ದಡಕ್ಕೆ ಹೋಗಿ ದೇವಿಯ ವಿಶೇಷ ಪೂಜೆಗಳಲ್ಲಿ ಭಾಗಿಯಾಗುತ್ತೇವೆ. ದೇವಿಗೆ ಕಡುಬು, ಹೋಳಿಗೆ ಮುಂತಾದ ಬಗೆಬಗೆ ನೈವೇದ್ಯಗಳನ್ನು ಸಮರ್ಪಿಸುತ್ತೇವೆ. ಯಾವುದೇ ತಾರತಮ್ಯವಿಲ್ಲದೇ ಪೂಜೆಯಲ್ಲಿ ಭಾಗಿಯಾಗುತ್ತೇವೆ. ಕೆಲವರು ಇದನ್ನು ಮೌಢ್ಯ ಎಂದು ಧಿಕ್ಕರಿಸಿ, ವಿಚಿತ್ರ ಸಮಸ್ಯೆ ಎದುರಿಸಿದ ಉದಾಹರಣೆಗಳೂ ಇವೆ" ಎಂದರು.
ಇದನ್ನೂ ಓದಿ: ಬ್ರಿಗೇಡಿಯರ್, ಕರ್ನಲ್ ಸೇರಿ ಒಂದೇ ಊರಲ್ಲಿ 250ಕ್ಕೂ ಹೆಚ್ಚು ಸೈನಿಕರು: ಬೆಳಗಾವಿಯ ಈ ಗ್ರಾಮದಲ್ಲಿ ದೇಶಭಕ್ತಿಯ ಕಿಚ್ಚು!
ಇದನ್ನೂ ಓದಿ: 'ಇದು ಭಾರತೀಯ ಮಹಿಳೆಯರ ಸಿಂಧೂರದ ತಾಕತ್ತು': 30 ಗುಂಡು ತಗುಲಿ 3 ತಿಂಗಳು ಕೋಮಾದಲ್ಲಿದ್ದ ಬೆಳಗಾವಿ ಮಾಜಿ ಸೈನಿಕನ ಮಾತು