ಗದಗ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಗಜೇಂದ್ರಗಡ ತಾಲೂಕಿನ ದ್ಯಾಮುಣಶಿ ಗ್ರಾಮದ ಬಳಿಯ ಹಳ್ಳವು ತುಂಬಿ ಹರಿಯುತ್ತಿದ್ದು, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಜಲಾವೃತವಾಗಿವೆ. ಈ ಪರಿಸ್ಥಿತಿಯಲ್ಲಿ ಸೂಡಿ ಗ್ರಾಮದ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಮಕ್ಕಳು ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಸೂಡಿ ಗ್ರಾಮದ ಶಾಲೆಯಿಂದ ದ್ಯಾಮುಣಶಿ ಗ್ರಾಮಕ್ಕೆ ಬಸ್ನಲ್ಲಿ ತೆರಳುತ್ತಿದ್ದ ಮಕ್ಕಳು, ಹಳ್ಳದಲ್ಲಿನ ಅಧಿಕ ನೀರಿನಿಂದಾಗಿ ದಡದಲ್ಲಿಯೇ ಇಳಿಯಬೇಕಾಯಿತು. ಬಸ್ ಚಾಲಕನಿಗೆ ಹಳ್ಳವನ್ನು ದಾಟಲು ಸಾಧ್ಯವಾಗದೆ, ಮಕ್ಕಳನ್ನು ದಡದಲ್ಲೇ ಬಿಟ್ಟು ಬಸ್ ವಾಪಸಾಗಿದ್ದ. ಹೀಗಾಗಿ, ಗ್ರಾಮಸ್ಥರು ಮಕ್ಕಳ ಕೂಗಾಟ, ಚೀರಾಟದ ನಡುವೆಯೂ ಧೈರ್ಯದಿಂದ ಅವರ ಕೈ ಹಿಡಿದುಕೊಂಡು ಹಳ್ಳವನ್ನು ದಾಟಿಸಿದ್ದಾರೆ.
ದ್ಯಾಮುಣಶಿ ಗ್ರಾಮದ ಮಹಿಳೆಯರು ಸೇರಿದಂತೆ ಗ್ರಾಮಸ್ಥರು, ಉಕ್ಕಿ ಹರಿಯುತ್ತಿದ್ದ ಹಳ್ಳದ ನಡುವೆಯೇ ಮಕ್ಕಳನ್ನು ಸುರಕ್ಷಿತವಾಗಿ ದಾಟಿಸಿ ಗ್ರಾಮಕ್ಕೆ ಕರೆತಂದರು. ಈ ರಕ್ಷಣಾ ಕಾರ್ಯದಲ್ಲಿ ಗ್ರಾಮಸ್ಥರ ಒಗ್ಗಟ್ಟು ಮತ್ತು ಧೈರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಗದಗ ಜಿಲ್ಲಾಡಳಿತವು ಭಾರಿ ಮಳೆಯಿಂದ ಉಂಟಾದ ಪರಿಸ್ಥಿತಿ ನಿಭಾಯಿಸಲು ಹೈ ಅಲರ್ಟ್ ಘೋಷಿಸಿದ್ದು, ಹಳ್ಳಗಳ ಸಮೀಪ ವಾಸಿಸುವ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯನಗರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ; 35 ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೊಳಗಾದ ಬೆಳೆ