ಶಿರಸಿ : ಈ ಸರ್ಕಾರ ಬೆಲೆ ಏರಿಕೆ ಸರ್ಕಾರವಾಗಿದ್ದು, ಹಿಂದೂಗಳನ್ನು ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಅನ್ಯಾಯ ಎಸಗಿದೆ. ಅದಕ್ಕಾಗಿ ಜನಾಕ್ರೋಶ ಯಾತ್ರೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು. ಯಲ್ಲಾಪುರದಲ್ಲಿ ಶುಕ್ರವಾರ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಹೋರಾಟದ ಎಫೆಕ್ಟ್ ಕಾಂಗ್ರೆಸ್ಗೆ ತಟ್ಟಿದೆ. ಅದಕ್ಕಾಗಿ ಕೇಂದ್ರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದಕ್ಕೆ ತಕ್ಕ ಉತ್ತರ ನಾವು ಕೊಡುತ್ತೇವೆ ಎಂದರು.
ಸರ್ಕಾರದ ಕಮಿಷನ್ ದಂಧೆ ವಿರುದ್ಧ ಧ್ವನಿ ಎತ್ತಿದ ಗುತ್ತಿಗೆದಾರ: ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ದ ಕಾಂಗ್ರೆಸ್ ಪಕ್ಷದವರು ಕಮೀಷನ್ ಆರೋಪ ಹೊರೆಸಿದ್ದರು. ಆದರೆ, ಅದು ರಾಜಕೀಯ ಪ್ರೇರಿತ ಆರೋಪ ಮಾತ್ರ ಆಗಿತ್ತು. ಕರ್ನಾಟಕದ ಈಗಿನ ಸರ್ಕಾರ ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ನಂಬರ್ ಒನ್ ಆಗಿದೆ. ಇದನ್ನ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ. ಗುತ್ತಿಗೆದಾರರು ಸರ್ಕಾರದ ಕಮಿಷನ್ ದಂಧೆ ವಿರುದ್ಧ ಧ್ವನಿ ಎತ್ತಿದ್ದಾರೆ. ಪೊಲೀಸ್ ಇಲಾಖೆಗೆ ಈವರೆಗೆ 1ನೇ ತಾರೀಖಿನಂದು ಸಂಬಳ ಆಗುತ್ತಿತ್ತು. ಈಗ 8ನೇ ತಾರೀಖು ಆದರೂ ಸಂಬಳ ಹಾಕಲು ಆಗುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಅದಕ್ಕಾಗಿ ಬೆಲೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಟೀಕಿಸಿದರು.
ಕುರ್ಚಿ ಅಲ್ಲಾಡುತ್ತಿರುವಾಗ ಅವರಿಗೆ ಜಾತಿ ಗಣತಿ ನೆನಪಾಗ್ತಿದೆ: ಸಿಎಂ ಕುರ್ಚಿ ಯಾವಾಗ ಅಲ್ಲಾಡುತ್ತದೆಯೋ ಆಗ ಸಿದ್ದರಾಮಯ್ಯಗೆ ಜಾತಿ ಜನಗಣತಿ ನೆನಪಾಗುತ್ತದೆ. ಯಾವಾಗ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಾರೋ ಆಗ ಇಂತಹವುಗಳು ನೆನಪಾಗುತ್ತವೆ. ಜಾತಿ ಗಣತಿಯನ್ನು ಬೆದರು ಬೊಂಬೆ ರೀತಿಯಾಗಿ ಸಿದ್ದರಾಮಯ್ಯ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ಸಿಎಂ ಸಿದ್ದರಾಮಯ್ಯಗೆ ಈ ಸಮುದಾಯಕ್ಕೆ ನ್ಯಾಯ ಕೊಡಬೇಕು ಎನ್ನುವ ಪ್ರಾಮಾಣಿಕ ಕಳಕಳಜಿ ಇಲ್ಲ. ವಿಷಯ ಡೈವರ್ಟ್ ಮಾಡಲು ಜಾತಿ ಗಣತಿ ಬಳಕೆ ಮಾಡಿಕೊಂಡಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.

ನಮ್ಮ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನಾಗಿ ಮತ್ತೊಮ್ಮೆ ನನ್ನನ್ನ ಆಯ್ಕೆ ಮಾಡುತ್ತಾರೆ ಎನ್ನುವ ವಿಷಯ ನನ್ನ ಕಿವಿಗೆ ಬಿದ್ದಿಲ್ಲ ಎಂದು ಇದೇ ವೇಳೆ ಪ್ರತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಯಲ್ಲಾಪುರದಲ್ಲಿ ಇಂದು ನಡೆದ ಜನಾಕ್ರೋಶ ಯಾತ್ರೆಯಲ್ಲಿ ಬಿಜೆಪಿಯ ಶಾಸಕ ಶಿವರಾಮ್ ಹೆಬ್ಬಾರ್ ಹೊರತು ಬಿಜೆಪಿ ಮಾಜಿ ಶಾಸಕರು, ಮುಖಂಡರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಇದನ್ನೂ ಓದಿ: ಕಾಂಗ್ರೆಸ್ನವರು ಹಿಂದೂ, ದಲಿತ ವಿರೋಧಿಗಳು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ - PRALHAD JOSHI