ಹುಬ್ಬಳ್ಳಿ: "ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ನೇಮಿಸಿರುವುದು ಟ್ರಸ್ಟ್. ಅದರ ನಿಬಂಧನೆಗಳಿಗೆ ಒಳಪಟ್ಟು ಸ್ವಾಮೀಜಿಗಳು ಸಮಾಜವನ್ನು ಸಂಘಟಿಸಬೇಕು. ಆದರೆ ಓರ್ವ ವ್ಯಕ್ತಿ ಹಾಗೂ ಪಕ್ಷವನ್ನು ಬೆಂಬಲಿಸಿ ನಿಲ್ಲುವುದು ಸರಿಯಲ್ಲ. ಇದು ಹೀಗೆ ಮುಂದುವರೆದರೆ ಸಮಾಜ ಕಟ್ಟುನಿಟ್ಟಿನ ಕಠಿಣ ಕ್ರಮ ಜರುಗಿಸಲಿದೆ" ಎಂದು ಶಾಸಕ ಹಾಗೂ ಪಂಚಮಸಾಲಿ ಸಮಾಜದ ಮುಖಂಡ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ನೀಡಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸಮಾಜದ ಮುಖಂಡರ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಸ್ವಾಮೀಜಿಗಳು ಮಾತನಾಡುತ್ತಿರುವುದು ಟ್ರಸ್ಟ್ ನಿಬಂಧನೆಗಳ ವಿರುದ್ಧವಾಗಿದೆ. ಸ್ವಾಮೀಜಿಯವರು ಟ್ರಸ್ಟ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಅತ್ಯಂತ ಬಹಳ ಕೀಳುಮಟ್ಟದಲ್ಲಿ ಯತ್ನಾಳ್ ಮಾತನಾಡಿದ್ದಾರೆ. ಹಂದಿ, ನಾಯಿ ನರಿ ಅಂತ ಭಾಷೆ ಬಳಸುತ್ತಾರೆ. ಅದು ಅವರ ಸಂಸ್ಕೃತಿ. ಆ ಸಂಸ್ಕೃತಿ ನೋಡಿ ಅವರ ಪಕ್ಷದವರು ಉಚ್ಚಾಟನೆ ಮಾಡಿದ್ದಾರೆ" ಎಂದರು.
ಲೋಕಸಭೆಗೆ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ: "ಅವರಿಗೆ ಕಾವಿ ಬೇಡ, ಖಾದಿ ಬೇಕಾಗಿದೆ. ಯಾಕೆಂದರೆ ಅವರು ಬಸನಗೌಡ ಜೊತೆ ಮುಂದಿನ ಲೋಕಸಭೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಸ್ವಯಂ ಘೋಷಿತ ನಾಯಕರು, ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ನಾಯಕ ಅಂತ ಹೊರಟಿದ್ದಾರೆ. ಮುಂದೆ ಇವರು ಮುಖ್ಯಮಂತ್ರಿ ಆಗ್ತಾರೋ, ಮಾಜಿಯಾಗಿ ಮನೆಯಲ್ಲಿ ಕೂಡ್ತಾರೋ ನೋಡೋಣ" ಎಂದು ವ್ಯಂಗ್ಯವಾಡಿದರು.
ಮುಂದುವರೆದು ಮಾತನಾಡಿದ ಕಾಶಪ್ಪನವರ್, "ದಾವಣಗೆರೆಯಲ್ಲಿ ವೈಯಕ್ತಿಕ ಶಿಕ್ಷಣ ಸಂಸ್ಥೆ ಮಾಡಿಕೊಂಡು ಸ್ವಾಮೀಜಿ
ಕೋಟ್ಯಂತರ ರೂಪಾಯಿ ಆಸ್ತಿ ಮಾಡಿಕೊಂಡಿದ್ದಾರೆ. ಕೂಡಲಸಂಗಮದಲ್ಲಿ ಪ್ರತ್ಯೇಕ ಸಂಸ್ಥೆ ನಡೆಸುತ್ತಿದ್ದಾರೆ" ಎಂದು ಆರೋಪಿಸಿದರು.
ಟ್ರಸ್ಟಿಗಳು ಚರ್ಚಿಸಿ ಮುಂದಿನ ನಿರ್ಧಾರ: "ಪಂಚಮಸಾಲಿ ಟ್ರಸ್ಟ್ ಅಡಿಯಲ್ಲಿ ಶ್ರೀಗಳು ಮತ್ತು ನಾವು ಇದ್ದೇವೆ. ಸಮಾಜ ಎನ್ನುವುದು ಬಹಳಷ್ಟು ದೊಡ್ಡದು. ಶ್ರೀಗಳನ್ನು ಸಮಾಜದ ಎಲ್ಲಾ ಜನರು ಗುರುತಿಸಿ ಪೀಠಕ್ಕೆ ಆಯ್ಕೆ ಮಾಡಿದೆ. ಆದರೆ ಒಬ್ಬ ವ್ಯಕ್ತಿ, ಪಕ್ಷದ ಪರವಾಗಿ ಕೆಲಸ ಮಾಡಲು ಅಲ್ಲ. ಶ್ರೀಗಳು ಒಬ್ಬ ವ್ಯಕ್ತಿಯಿಂದ ನಿಲ್ಲುವುದು ಸರಿಯಲ್ಲ. ಎಲ್ಲಾ ಟ್ರಸ್ಟಿಗಳು ಚರ್ಚೆ ಮಾಡಿ ಮುಂದಿನ ನಿರ್ಧಾರ ಮಾಡುತ್ತೇವೆ" ಎಂದರು.
"ಬಸನಗೌಡ ಪಾಟೀಲ್ ಯತ್ನಾಳ್ ಸಂಸ್ಕಾರ ನಾನು ನೋಡಿದ್ದೇನೆ. ನಮ್ಮ ಸಮಾಜ ವೇದಿಕೆಯನ್ನು ತಮ್ಮ ವೈಯಕ್ತಿಕವಾಗಿ ಹಿಂದುತ್ವದ ಪರವಾಗಿ ಬಳಕೆ ಮಾಡಿಕೊಂಡಿದ್ದಾರೆ. ಯತ್ನಾಳ ಅವರಿಗೆ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಬಗ್ಗೆ ನಿತ್ಯ ಮಾತನಾಡದಿದ್ದರೆ ತಿಂದದ್ದು ಅರಗಲ್ಲ. ನಾನು ಟಿಕೆಟ್ ಕೇಳಲು ಶ್ರೀಗಳನ್ನು ಬಳಕೆ ಮಾಡಿಕೊಂಡಿಲ್ಲ. ನಾನು ಕೂಡಲಸಂಗಮ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾನು ಯಾವತ್ತೂ ಹೋರಾಟ ನಿಲ್ಲಸಬೇಡಿ ಅಂತ ಹೇಳಿಲ್ಲ. ಶ್ರೀಗಳು ವೈಯಕ್ತಿಕ ಆಸ್ತಿ ಮಾಡಿಕೊಂಡಿದ್ದಾರೆ. ಕೂಡಲಸಂಗಮ, ದಾವಣಗೆರೆಯಲ್ಲಿ ಸಾಕಷ್ಟು ಸಂಸ್ಥೆ, ಶಾಲಾ ಕಾಲೇಜುಗಳನ್ನು ವೈಯಕ್ತಿಕವಾಗಿ ಆರಂಭಿಸಿದ್ದಾರೆ. ಶ್ರೀಗಳ ಶಾಲೆಗಳನ್ನೆಲ್ಲ ಟ್ರಸ್ಟ್ ವಶಕ್ಕೆ ತೆಗೆದುಕೊಳ್ಳುತ್ತದೆ" ಎಂದು ಎಚ್ಚರಿಕೆ ನೀಡಿದರು
ಇದನ್ನೂ ಓದಿ: ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ನಿಲುಗಡೆ ಆರಂಭ: ಭವಿಷ್ಯದ ರೈಲು ಕ್ರಾಂತಿ ಬಗ್ಗೆ ಕೇಂದ್ರ ಸಚಿವರು ಹೇಳಿದ್ದಿಷ್ಟು