ವಿಜಯನಗರ: ಏಷ್ಯಾದ ಅತಿದೊಡ್ಡ ಕರಡಿ ಧಾಮವೆಂದು ಖ್ಯಾತಿ ಪಡೆದಿರುವ ದರೋಜಿ ಕರಡಿ ಧಾಮದ ಕಾನನದಲ್ಲಿ ಕರಡಿಗಳು ತುಂಟಾಟವಾಡಿ ನಲಿಯುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಳೆದ ತಿಂಗಳಿಂದ ಏರುತ್ತಿರುವ ಬಿಸಿಲಿನ ತಾಪದ ಬೇಗೆಯಿಂದ ಬೆಂದಿದ್ದ ವನ್ಯಮೃಗಗಳು ಮಳೆ ಬಂದ ಹಿನ್ನೆಲೆ ಹಾಗೂ ವಾತಾವರಣ ತಂಪಾದ ಕಾರಣ ಈ ರೀತಿ ಚಿನ್ನಾಟವಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿವೆ.
ಕಡುಬಿಸಿಲಿನಿಂದ ಕಾದು ಹೆಂಚಾಗಿದ್ದ ಧರೆ, ಮಳೆಯಿಂದ ಕೂಲ್ ಕೂಲ್ ಆಗಿದ್ದು, ಕರಡಿ ಧಾಮದಲ್ಲಿನ ಕರಡಿಗಳು ಕೂಡಾ ಈ ವಾತಾವರಣದಲ್ಲಿನ ಬದಲಾವಣೆಗೆ ಸಂತಸಗೊಂಡಂತಿದೆ. ಬಿಸಿಲಿನ ಕಾರಣಕ್ಕೆ ತೆರೆಮರೆಯಲ್ಲಿದ್ದ ಕರಡಿಗಳೀಗ ಹೊರಗೆ ಬಂದು ಓಡಾಡುತ್ತಿವೆ.
ತಾಯಿ ಕರಡಿಯೊಂದಿಗೆ ಮರಿಕರಡಿಗಳು ಬಿಂದಾಸ್ ಆಗಿ ಓಡಾಡುತ್ತಿರುವ ದೃಶ್ಯಗಳು ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿವೆ. ದರೋಜಿ ಕರಡಿ ಧಾಮಕ್ಕೆ ನಿತ್ಯ ಬಹುಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹಂಪಿ ನೋಡಲು ಬರುವ ಪ್ರವಾಸಿಗರಿಗೆ ದರೋಜಿ ಕರಡಿ ಧಾಮ ಒಂದು ವಿಭಿನ್ನ ಅನುಭವ ಕೊಡುವುದಂತೂ ನಿಜ.
ವರ್ಷಧಾರೆಯ ಸಿಂಚನಕ್ಕೆ ನರ್ತನ ಮಾಡಿದ ನವಿಲು : ಮತ್ತೊಂದೆಡೆ ವರ್ಷಧಾರೆಯ ಸಿಂಚನದಿಂದ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹಸಿರು ಮತ್ತೆ ಮೈದಳೆದಿದ್ದು, ಈ ಸಂತಸವನ್ನು ನವಿಲುಗಳು ಕೂಡಾ ಆನಂದಿಸತೊಡಗಿವೆ. ಕಾನನದ ನಡುವೆ ಸ್ವಚ್ಛಂದವಾಗಿ ವಿಹರಿಸುತ್ತಾ, ಬದಲಾದ ವಾತಾವರಣದ ಹಿತಾನುಭವವನ್ನು ಅನುಭವಿಸುತ್ತಾ ತನ್ನ ವರ್ಣಮಯ ಗರಿಗಳನ್ನು ತೆರೆದು ನರ್ತನ ಮಾಡಿದವು.

ವಿಪರೀತ ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಈ ಮಳೆಯು ನಿರಾಳತೆಯನ್ನು ನೀಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ನವಿಲು ನರ್ತನ ಮಾಡುತ್ತಿರುವ ದೃಶ್ಯವನ್ನು ಹವ್ಯಾಸಿ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿದ್ದಾರೆ.
ದರೋಜಿ ಕರಡಿ ಧಾಮದಲ್ಲಿ ನವಿಲೊಂದು ಮಳೆಯಿಂದಾಗುತ್ತಿರುವ ನೈಸರ್ಗಿಕ ಬದಲಾವಣೆಯ ಸಂತಸವನ್ನು ಅಭಿವ್ಯಕ್ತಿಸುತ್ತಿದೆಯೋ ಎಂಬಂತೆ ಗರಿಬಿಚ್ಚಿ ನರ್ತಿಸುತ್ತಿರುವ ಈ ಅಪರೂಪದ ದೃಶ್ಯ ನೋಡುಗರ ಮನಸೂರೆಗೊಳಿಸುವಂತಿದೆ. ನಿಸರ್ಗದ ವಿಸ್ಮಯಗಳಲ್ಲೊಂದಾದ ಕಣ್ಮನ ತಣಿಸುವ ಈ ನವಿಲು ನರ್ತನ ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು.
ಇದನ್ನೂ ಓದಿ: ಚಾಮರಾಜನಗರ : ಜೋಳ ತಿನ್ನುತ್ತಾ ನಿಂತ ಕಾಡಾನೆ - ಹೋಗು ಸ್ವಾಮಿ ಎಂದು ಮಹಿಳೆ ಅಳಲು - ವಿಡಿಯೋ