ಚಿಕ್ಕಮಗಳೂರು: "ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿ ಗಣತಿ ವರದಿ ತಯಾರಿಸಿದೆ. ಹತ್ತಾರು ವರ್ಷಗಳಿಂದ ಜಾತಿ ಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿ ಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಜಾತಿ ಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ" ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಂಭಾಪುರಿ ಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ. ಜಾತಿ ಗಣತಿ ವರದಿ ಪುನರ್‌ವಿಮರ್ಶೆ ಆಗಬೇಕು. ಅಧಿಕಾರಿಗಳು ಮನೆ ಮನೆಗೆ ಭೇಟಿ ಕೊಡಬೇಕು. ಜಾತಿ ಗಣತಿ ವರದಿ ಬಗ್ಗೆ ಈಗಾಗಲೇ ಹಲವರು ಆತಂಕ ಹೊರಹಾಕಿದ್ದಾರೆ. ಜನರ ಭಾವನೆಯನ್ನು ಅರಿತು ಪಾರದರ್ಶಕತೆಯಿಂದ, ಮನೆ ಮನೆಗೆ ಭೇಟಿ ಕೊಟ್ಟು ಅಧಿಕಾರಿಗಳು ವರದಿ ತಯಾರಿಸಬೇಕು" ಎಂದು ಆಗ್ರಹಿಸಿದರು.
"ಆಡಳಿತ ಪಕ್ಷದ ಅನೇಕ ಶಾಸಕರು ಈ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದವರು ಜಾತಿ ಗಣತಿ ವರದಿಯನ್ನು ಬಹಿಷ್ಕಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ನಡೆಸಿ, ಜಾತಿ ಗಣತಿ ವರದಿಗೆ ಮುಂದಾದರೆ ಜನರಿಗೆ ಒಳಿತಾಗಲಿದೆ. ಇಲ್ಲವಾದರೆ ಜಾತಿ ಸಂಕಷ್ಟಕ್ಕೆ ಕಾರಣವಾಗಲಿದೆ" ಎಂದು ಹೇಳಿದರು.
"ಈ ಜಾತಿ ಗಣತಿ ವರದಿಯನ್ನು ಸಾರಾಸಗಟಾಗಿ ಬಹಿಷ್ಕರಿಸಿ, ತಿರಸ್ಕಾರ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲವೊಂದು ಜಾತಿಗೆ ಮೀಸಲು ನೀಡಬೇಕೆನ್ನುವುದು ಸರ್ಕಾರಕ್ಕೆ ಇದೆ. ಆದರೆ ಸಂವಿಧಾನದ ಆಶಯದಂತೆ ಜಾತಿಗಣತಿ ವರದಿ ವಿಚಾರದಲ್ಲಿ ಹೆಜ್ಜೆ ಇಡಬೇಕು. ಸಂವಿಧಾನದಲ್ಲಿ ಯಾವ ಜಾತಿಗೆ ಎಷ್ಟು ಮೀಸಲಾತಿ ನೀಡಬೇಕೆನ್ನುವುದನ್ನು ಉಲ್ಲೇಖವಿದೆ" ಎಂದರು.
ಜಾತಿ ಗಣತಿ ವರದಿ ತಯಾರಿಕೆಯ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: "ಜಾತಿ ಗಣತಿ ವರದಿಯನ್ನು ತಯಾರು ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಈ ಅಧಿಕಾರ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸರಿಯಾದ ಮಾಹಿತಿ, ಕೆಲವೊಂದು ಸೂಚನೆಗಳನ್ನು ನೀಡಬೇಕು" ಎಂದು ತಿಳಿಸಿದರು.
ಇದನ್ನೂ ಓದಿ: ಜಾತಿ ಗಣತಿ ವರದಿಯಿಂದ ಜಾತಿ, ಜಾತಿಗಳ ಮಧ್ಯೆ ಒಡಕು: ಆರ್.ಅಶೋಕ್ ಜಾತಿ ಗಣತಿ ವರದಿಯ ಬಗ್ಗೆ ಆತುರದ ನಿರ್ಧಾರವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
ಇದನ್ನೂ ಓದಿ: ಜಾತಿ ಗಣತಿ ವರದಿಯ ಬಗ್ಗೆ ಆತುರದ ನಿರ್ಧಾರವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್