ಬೆಂಗಳೂರು: ಜಾತಿ ಜನಗಣತಿ ವರದಿ ಸಿದ್ದರಾಮಯ್ಯಗೆ ಮರಣ ಶಾಸನವಾಗಬಹುದು. ಹಾಗಾಗಿ, ವರದಿ ತಿರಸ್ಕರಿಸಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆಗ್ರಹಿಸಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್ ನಾಯಕರೇ ಕರೆದು ಹೇಳಿದ್ದಾರೆ. ಸಿದ್ದರಾಮಯ್ಯರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ? ಅನ್ನೋ ನೋವು ನನ್ನನ್ನು ಕಾಡುತ್ತಿದೆ. ಜಾತಿ ಜನಗಣತಿ ವರದಿ ಕಾಗಕ್ಕ ಗೂಬಕ್ಕ ಕತೆಯಂತಿದೆ. ಅವರ ಪಕ್ಷದವರೇ ಅವರನ್ನು ರಾಜಕೀಯವಾಗಿ ಕಾಲೆಳೆಯಲು ಈ ಪಿತೂರಿ ಮಾಡ್ತಿದ್ದಾರೆ. ಜಾತಿ ವರದಿ ಜಾರಿಯಾದರೆ ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲೊಬ್ಬ ಖಳನಾಯಕ ಆಗ್ತಾರೆ ಎಂದರು.
ಮತ್ತೊಂದು ಸಮೀಕ್ಷೆ ಮಾಡಿ. ಇನ್ನೂ ಮೂರು ವರ್ಷ ಸಮಯ ಇದೆ ಸಿದ್ದರಾಮಯ್ಯಗೆ. ಈ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ಪಾರದರ್ಶಕವಾಗಿಯೂ ಇಲ್ಲ. ವರದಿ ಜಾರಿಯಾದರೆ ಸಾಮಾನ್ಯ ಜನರೂ ಸಿದ್ದರಾಮಯ್ಯಗೆ ಶಾಪ ಹಾಕ್ತಾರೆ. ಅವರು ಒಂಟಿಯಾಗಿ ಹೋಗ್ತಾರೆ ಎಂದು ತಿಳಿಸಿದರು.
ಯತ್ನಾಳ್ ಘರ್ ವಾಪಸಿ ಬಗ್ಗೆ ಕೆಲವರ ಒಲವು ವಿಚಾರವಾಗಿ ಮಾತನಾಡಿ, ಸಮಯ ಎಲ್ಲಕ್ಕೂ ಕೂಡಿ ಬರುತ್ತೆ. ಒಳ್ಳೆಯವರಿಗೆ ಒಳ್ಳೆ ಕಾಲ ಬರುತ್ತೆ. ಬಹಿರಂಗವಾಗಿ ಮಾತಾಡೋದನ್ನು ನಿಲ್ಲಿಸಿದ್ರೆ ಅವರಿಗೂ ಕ್ಷೇಮ, ನಮಗೂ ಕ್ಷೇಮ ಎಂದು ಸೂಚ್ಯವಾಗಿ ತಿಳಿಸಿದರು.
ಜನಾಕ್ರೋಶ ಯಾತ್ರೆಯಲ್ಲಿ ಸೋಮಣ್ಣ ಭಾಗವಹಿಸದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದೆಲ್ಲ ದಿನಬೆಳಗಾದರೆ ನಡೆಯುತ್ತಿರುತ್ತದೆ. ನಾವು ಮಾಡ್ತಿರೋದೂ ಜನಾಕ್ರೋಶನೇ. ಪಕ್ಷದಿಂದ ಹೋರಾಟ ಮಾಡ್ತಿದ್ದಾರೆ. ನಮಗೆ ವ್ಯವಸ್ಥಿತವಾಗಿ ಇಲಾಖೆಯ ಕೆಲಸ ಹಂಚಿದ್ದಾರೆ, ಮಾಡುತ್ತಿದ್ದೇವೆ. ಅವಶ್ಯಕತೆ ಇದ್ದರೆ ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತೇವೆ. ಪಕ್ಷವೇ ನಮಗೆ ದೊಡ್ಡದು. ತಾಯಿಯಂತೆ. ಪಕ್ಷಕ್ಕೆ ಯಾವತ್ತೂ ಸೋಮಣ್ಣರಿಂದ ಅಪಚಾರ ಆಗಲ್ಲ ಎಂದರು.
ಶೀಘ್ರದಲ್ಲೇ ಕೇಂದ್ರದಿಂದ ಒಪ್ಪಿಗೆ: ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ತುಮಕೂರು ರೈಲ್ವೆ ನಿಲ್ದಾಣಕ್ಕೆ ಸ್ವಾಮೀಜಿಗಳ ಹೆಸರಿಡಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದ್ದೆವು. ಕೇಂದ್ರದಿಂದ ರಾಜ್ಯಕ್ಕೆ ಮಾಹಿತಿ ಕೋರಿ ಪತ್ರ ಬರೆಯಲಾಗಿತ್ತು. ಎಂಟು ತಿಂಗಳಾದ ಮೇಲೆ ಈಗ ರಾಜ್ಯ ಸರ್ಕಾರ ಶಿಫಾರಸು ಕಳಿಸಿದೆ. ರಾಜ್ಯ ಸರ್ಕಾರ ಬಹಳ ವಿಳಂಬ ಮಾಡಿ ಈಗಲಾದರೂ ಪ್ರಸ್ತಾವನೆ ಕಳಿಸಲಾಗಿದೆ. ಸಂತೋಷ. ಶೀಘ್ರದಲ್ಲೇ ಕೇಂದ್ರದಿಂದ ಒಪ್ಪಿಗೆ ಸಿಗಲಿದೆ ಎಂದು ಹೇಳಿದರು.
ಇದನ್ನೂ ಓದಿ: ಜಾತಿ ಗಣತಿ ವರದಿಯಿಂದ ಜಾತಿ, ಜಾತಿಗಳ ಮಧ್ಯೆ ಒಡಕು: ಆರ್.ಅಶೋಕ್ - CASTE CENSUS