ಮಂಡ್ಯ : ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಭಾನುವಾರ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಖುದ್ದು ಗದ್ದೆಗಿಳಿದು ಭತ್ತ ನಾಟಿ ಮಾಡಿದ್ರು. 2018ರಲ್ಲಿ ಸಿಎಂ ಆಗಿದ್ದಾಗಲೂ ಆಗಸ್ಟ್ 11ರಂದೇ ಇದೇ ಗ್ರಾಮದ ಗದ್ದೆಯಲ್ಲೇ ಭತ್ತ ನಾಟಿ ಮಾಡಿದ್ದರು.
ನಾಟಿ ಕಾರ್ಯಕ್ಕೂ ಮೊದಲು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನಂತರ ರಾಶಿ ಪೂಜೆ ಸಲ್ಲಿಸಿ ಗದ್ದೆಗಿಳಿದು ರೈತ ಮಹಿಳೆಯರ ಜೊತೆ ಹೆಚ್ಡಿಕೆ ನಾಟಿ ಹಾಕಿದರು. ಬಳಿಕ ಗದ್ದೆಯ ತೆವರಿ (ಬದು) ಮೇಲೆ ಕುಳಿತು ರೈತ ಮಹಿಳೆಯರ ಜೊತೆ ಊಟ ಕೂಡ ಸವಿದರು. ಇವರ ಜೊತೆ ಮಾಜಿ ಸಚಿವ ಸಿ. ಎಸ್ ಪುಟ್ಟರಾಜು, ಪುತ್ರ ನಿಖಿಲ್ ಕುಮಾರಸ್ವಾಮಿ, ಶಾಸಕ ಹೆಚ್. ಟಿ ಮಂಜು, ಮಾಜಿ ಶಾಸಕ ಅನ್ನದಾನಿ ಸಾಥ್ ನೀಡಿದ್ರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್ಡಿಕೆ, 'ನಮ್ಮ ಅನ್ನದಾತ ರೈತರ ಜೊತೆ ಭತ್ತ ನಾಟಿ ಮಾಡಿದ್ದೇನೆ. ಇದು ನನಗೆ ಸಂತೋಷ ನೀಡಿದೆ. ರೈತರ ಜೊತೆ ಕೃಷಿ ಮಾಡಿದ್ದೇನೆ. ರೈತರು ಭೂಮಿ ನಂಬಿ ದೇಶದ ಜನರಿಗೆ ಅನ್ನ ಕೊಡ್ತಿದ್ದಾರೆ. ಈ ದೇಶ ಉಳಿಯಲು ರೈತರ ಅವಶ್ಯಕತೆಯಿದೆ' ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ ಹೆಚ್ಡಿಕೆ, 'ನಾವು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡಿದ್ದೇವೆ. ಹಣ ದುರ್ಬಳಕೆ ಬಗ್ಗೆ ಅರಿವು ಮೂಡಿಸಿದ್ದೇವೆ. ಸಿಎಂ ಖುರ್ಚಿ ಅಲುಗಾಡಲು ಸಾಧ್ಯವಿಲ್ಲ. ಆದ್ರೆ ಕುರ್ಚಿಯಲ್ಲಿ ಕುಳಿತಿರುವವರು ಅಲ್ಲಾಡುತ್ತಾರೆ. ಕೆಂಗಲ್ ಹನುಮಂತಯ್ಯ ಕಟ್ಟಿದ ಸದನ. ಅಲ್ಲಿಂದ ರಾಜ್ಯದ ಅಧಿಕಾರ ನಡೆಯುತ್ತೆ. ತುಂಗಭದ್ರಾ ಜಲಾಶಯವನ್ನು 70 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ ಬಹುದೊಡ್ಡ ಅನಾಹುತವಾಗಿದೆ. ನಾರಾಯಣಪುರ, ಆಲಮಟ್ಟಿ ಡ್ಯಾಂನಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ತುಂಗಭದ್ರಾ ಡ್ಯಾಂನಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಕೆ ಮಾಡಬೇಕು' ಎಂದರು.
ಕುಮಾರಸ್ವಾಮಿ ಅವರು ಭತ್ತ ನಾಟಿಗೆ ಆಗಮಿಸುತ್ತಾರೆ ಎಂದು ಇಡೀ ಗದ್ದೆ ಬಯಲನ್ನೇ ಮಧು ಮಗಳಂತೆ ಶೃಂಗಾರಗೊಳಿಸಲಾಗಿತ್ತು. ಲಕ್ಷ್ಮಣ ಎಂಬುವರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿ 125 ಮಂದಿ ಮಹಿಳಾ ಕಾರ್ಮಿಕರು ಕುಮಾರಸ್ವಾಮಿ ಅವರ ಜೊತೆ ನಾಟಿ ಮಾಡಿದ್ರು.
ಈ ಸಂದರ್ಭ ಮಾತನಾಡಿದ ಗದ್ದೆ ಮಾಲೀಕ ಲಕ್ಷ್ಮಣ್, 'ಕುಮಾರಸ್ವಾಮಿ ಅವರು ನಾಟಿ ಮಾಡಿದ್ದು ನಮಗೆ ಸಂತಸ ತಂದಿದೆ. ಇತರೆ ರಾಜಕಾರಣಿಗಳೂ ಕೂಡ ಗದ್ದೆಗಿಳಿದು ರೈತರ ಕಷ್ಟ ಅರಿಯಬೇಕು. ಮುಂದಿನ ದಿನಗಳಲ್ಲಿ ರೈತರ ಮಕ್ಕಳಿಗೂ ಹೆಣ್ಣು ಸಿಗುವಂತಾಗುತ್ತದೆ' ಎಂದರು.
ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, 'ದೇವೇಗೌಡ್ರು ರೈತ ಕುಟುಂಬದಿಂದ ಬಂದವರು. 62 ವರ್ಷದ ರಾಜಕಾರಣದ ಉದ್ದಗಲಕ್ಕೂ ರೈತರ ಪರ ಇದ್ದೇವೆ. ಕುಮಾರಣ್ಣ ರೈತರ ಸಾಲ ಮನ್ನಾ ಮಾಡಿದ್ದರು. ಕಳೆದ 10 ದಿನಗಳ ಹಿಂದೆ ಭತ್ತ ನಾಟಿ ಮಾಡುವ ಕಾರ್ಯ ಪರಿಶೀಲನೆ ನಡೆಸಿದ್ದೆ. ಇವತ್ತು ಭತ್ತ ನಾಟಿ ಕಾರ್ಯ ನಡೆದಿದೆ. ರೈತ ಮಹಿಳೆಯರ ಜೊತೆ ನಾಟಿ ಮಾಡಿರುವುದು ವಿಶೇಷ ದಿನ. ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿ ಗದ್ದೆಗಿಳಿದಿದ್ದೇನೆ. ನಿರಂತರವಾಗಿ ತೋಟದಲ್ಲಿ ಕೆಲಸ ಮಾಡ್ತೇವೆ. ಇದು ಮೊದಲನೇ ಬಾರಿ ನನ್ನ ಜೀವನದಲ್ಲಿ ವಿಶೇಷ ಕ್ಷಣ. ರೈತ ಪರ ಯೋಜನೆ ಕಾರ್ಯಕ್ರಮ ಕೊಟ್ಟಿದ್ದೇವೆ. ಅಂದು ಸಾಕಷ್ಟು ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಕುಮಾರಣ್ಣ ರೈತರ ಸಾಲ ಮನ್ನ ಮಾಡಿದ್ರು. ರೈತರ ಬಗ್ಗೆ ಕಾಳಜಿ ಇಟ್ಟಿರುವ ಬಗ್ಗೆ ಜನರು ನೋಡಿದ್ದಾರೆ' ಎಂದು ತಿಳಿಸಿದ್ರು.