ಗಂಗಾವತಿ (ಕೊಪ್ಪಳ) : ಅಪ್ರಾಪ್ತ ಆಟೋ ಚಾಲಕನೋರ್ವ ಅಲಕ್ಷ್ಯದಿಂದ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಹಾಗೂ ಹಲವರು ಗಂಭೀರವಾಗಿ ಗಾಯಗೊಳ್ಳಲು ಕಾರಣನಾದ ಪ್ರಕರಣದಲ್ಲಿ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ವಾಹನದ ಮಾಲೀಕನಿಗೆ 1.41 ಕೋಟಿ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
ತಾಲೂಕಿನ ಕಾನೂನು ಸೇವಾ ಸಮಿತಿಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ 2021ರಲ್ಲಿ ಯಲಬುರ್ಗಾದಲ್ಲಿ ನಡೆದಿದ್ದ ಈ ಘಟನೆಯಲ್ಲಿ, ಗಂಗಾವತಿ ಜಯನಗರದ ರಾಜಶೇಖರ್ ಅಯ್ಯನಗೌಡ ಎಂಬವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಪರಿಹಾರ ನೀಡುವಂತೆ ಮೃತರ ಪತ್ನಿ ಚನ್ನಮ್ಮ ಹಾಗೂ ಇತರರು ನ್ಯಾಯಾಲಯದ ಮೊರೆ ಹೋಗಿದ್ದರು.
2021ರಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆ ನಡೆಸಿದ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರಮೇಶ್ ಎಸ್. ಗಾಣಿಗೇರ, ಆಟೋವನ್ನು ಅಪ್ರಾಪ್ತ ಚಲಾಯಿಸಿದ್ದ ಹಿನ್ನೆಲೆಯಲ್ಲಿ ಅದರ ಮಾಲೀಕ 1,41,61,580 ರೂಪಾಯಿ ಮೊತ್ತದ ಪರಿಹಾರ ನೀಡುವಂತೆ ಆದೇಶ ಜಾರಿ ಮಾಡಿದ್ದಾರೆ.
ಘಟನೆಯ ವಿವರ : ಗಂಗಾವತಿಯ ಜಯನಗರದ ರಾಜಶೇಖರ್ ಅಯ್ಯನಗೌಡ ಎಂಬವರು ಯಲಬುರ್ಗಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದ ಬಳಿಕ ಮನೆಗೆ ಬರುವ ಸಂದರ್ಭದಲ್ಲಿ ರಾಜಶೇಖರ್ ಪಟ್ಟಣದ ಸ್ವಸ್ತಿಕ ಕಂಪ್ಯೂಟರ್ ಬಳಿ ತಮ್ಮ ಬೈಕ್ ನಿಲ್ಲಿಸಿಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಹಾಂತೇಶ ಮಾತಂಗಪ್ಪ ಕುದರಿಕೊಟಗಿ ಎಂಬ ಅಪ್ರಾಪ್ತ ಆಟೋ ಓಡಿಸಿಕೊಂಡು ಬಂದು ರಾಜಶೇಖರ್ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಜಶೇಖರ್ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಪತಿಯ ಸಾವಿನ ಹಿನ್ನೆಲೆಯಲ್ಲಿ ಪರಿಹಾರ ಕೋರಿ ಮೃತನ ಪತ್ನಿ ಹಾಗೂ ಮಕ್ಕಳು ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅಪ್ರಾಪ್ತನಿಂದ ಆಟೋ ಚಾಲನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಆಟೋ ಮಾಲೀಕನಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ : ಕರ್ಕಶ ಶಬ್ದದ ಬೈಕ್ನಲ್ಲಿ ಸಂಚಾರ: ಯುವಕನಿಗೆ ₹13 ಸಾವಿರ ದಂಡ - BIKER FINED