ಬೆಳಗಾವಿ: ಅವರಿಬ್ಬರು ಕಡು ಬಡವರು. ಹೊಟ್ಟೆ ಪಾಡಿಗಾಗಿ ಊರು ಬಿಟ್ಟು ಬೆಳಗಾವಿಗೆ ಬಂದಿದ್ದರು. ಕೂಲಿ ಕಾರ್ಮಿಕರಾಗಿದ್ದ ಅವರು ಕುಟುಂಬಕ್ಕೂ ಆಸರೆ ಆಗಿದ್ದರು. ಒಳಚರಂಡಿ ಕಾಮಗಾರಿ ವೇಳೆ ಈ ಇಬ್ಬರು ಕಾರ್ಮಿಕರ ಮೇಲೆ ಹೆಚ್ಚಿನ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ. ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರೂ ಸಹ ಅಷ್ಟರಲ್ಲಿ ಇಬ್ಬರೂ ಕಾರ್ಮಿಕರು ಉಸಿರುಚೆಲ್ಲಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಮೊದಲ ಹಂತದಲ್ಲೇ ಆಯ್ಕೆಯಾಗಿತ್ತು. ಅದಾದ ಬಳಿಕ ಕೇಂದ್ರ ಸರ್ಕಾರದ ಅಮೃತಸಿಟಿ ಯೋಜನೆಯಡಿಯೂ ಬೆಳಗಾವಿಗೆ ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ಅನುದಾನ ಹರಿದುಬಂದಿದೆ. ಹೀಗೆ ಬಂದ ಅನುದಾಡಿ ನಗರದಾದ್ಯಂತ ಒಳಚರಂಡಿ ಕಾಮಗಾರಿಯೂ ನಡೆಯುತ್ತಿದೆ. ಒಳಚರಂಡಿ ನಿಗಮದಿಂದ ಬೆಳಗಾವಿಯ ಕನಕದಾಸ ವೃತ್ತದಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿತ್ತು. ಸಿಮೆಂಟ್ ಪೈಪ್ ಅಳವಡಿಕೆ ಕಾರ್ಯಕ್ಕೆ ಗ್ರಾಮೀಣ ಭಾಗದ ಹಲವು ಕಾರ್ಮಿಕರು ಬಂದು ಕೆಲಸ ಮಾಡುತ್ತಿದ್ದಾರೆ. ಹೀಗೆ ಕೆಲಸ ಆರಂಭಿಸಿದ್ದ ಇಬ್ಬರು ಕಾರ್ಮಿಕರು 15 ಅಡಿ ಆಳಕ್ಕೆ ಇಳಿದು ಸಿಮೆಂಟ್ ಪೈಪ್ ಲೈನ್ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದರು. ಆ ವೇಳೆ ಜೆಸಿಬಿ ಚಾಲಕ ಬೇಜವಾಬ್ದಾರಿ ಮೇಲಿದ್ದ ಮಣ್ಣು ಕಾರ್ಮಿಕರ ಮೇಲೆ ಕುಸಿದಿದೆ. ಅಪಾರ ಪ್ರಮಾಣದ ಮಣ್ಣು ಕುಸಿದ ಪರಿಣಾಮ ಇಬ್ಬರೂ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮೃತರನ್ನು ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂಡಿ ಗ್ರಾಮದ ಬಸವರಾಜ ದುಂಡಪ್ಪ ಸರವಿ(40), ಶಿವಲಿಂಗ ಮಾರುತಿ ಸರವಿ (20) ಎಂದು ಗುರುತಿಸಲಾಗಿದೆ. ಬಸವರಾಜ ಅವರಿಗೆ ಮದುವೆ ಆಗಿದ್ದು, ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ. ಇನ್ನು ಶಿವಲಿಂಗ ಅವರಿಗೆ ಮದುಗೆ ಆಗಿಲ್ಲ. ಎರಡು ವರ್ಷದ ಹಿಂದೆ ತಾಯಿ ತೀರಿಕೊಂಡಿದ್ದು, ತಂದೆ ಮತ್ತು ಓರ್ವ ಸಹೋದರನಿದ್ದಾನೆ. ಮೃತರು ತಮ್ಮ ಮನೆಗಳಿಗೆ ಆಧಾರಸ್ತಂಭವಾಗಿದ್ದರು. ಈಗ ಅವರ ಅಕಾಲಿಕ ಮರಣದಿಂದ ಕುಟುಂಬಸ್ಥರಿಗೆ ಧಿಕ್ಕೆ ತೋಚದಂತಾಗಿದೆ.
ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಣ್ಣು ಕುಸಿತವಾಗಿ ಅವಘಡ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ ಈ ಕಾಮಗಾರಿ ಕೈಗೊಂಡಿತ್ತು. ಗುತ್ತಿಗೆದಾರರ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆ ನಡೆಸುತ್ತಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವ ಕುರಿತು ವಿಚಾರಣೆ ನಡೆಸಲಾಗುತ್ತದೆ ಎಂದರು.
ಒಳಚರಂಡಿ ನಿಗಮದಿಂದ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿ ಗುತ್ತಿಗೆಯನ್ನು ಪುಣೆ ಮೂಲದ ಗರ್ಪೂರೆ ಇಂಜಿನಿಯರಿಂಗ್ ಪ್ರೈ.ಲಿ ಕಂಪನಿ ಪಡೆದಿದೆ. ಬಸವರಾಜ ಹಾಗೂ ಶಿವಲಿಂಗ ಈ ಇಬ್ಬರು ಹಲವು ತಿಂಗಳಿಂದ ಈ ಕಂಪನಿ ಜೊತೆಗೆ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಬಸವರಾಜ ಹಾಗೂ ಶಿವಲಿಂಗ ಸಂಬಂಧಿಗಳು. ದಿನಗೂಲಿ ಹೆಚ್ಚು ಸಿಗುತ್ತೆ, ಮನೆಗೆ ಆಸರೆ ಆಗುತ್ತೆಂದು ಬೆಳಗಾವಿಗೆ ಬಂದಿದ್ದರು. ಸುರಕ್ಷತಾ ವಸ್ತುಗಳನ್ನು ಗುತ್ತಿಗೆದಾರರು ಕಾರ್ಮಿಕರಿಗೆ ನೀಡದಿರುವುದೇ ಈ ಅವಘಡಕ್ಕೆ ಕಾರಣವಾಯಿತು ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಗುತ್ತಿಗೆದಾರರು ಹಾಗೂ ಒಳಚರಂಡಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗ ಮನೆಗೆ ಆಸರೆ ಆಗಿದ್ದವರನ್ನು ಕಳೆದುಕೊಂಡು ಕುಟುಂಬಗಳು ಬೀದಿಗೆಬೀಳುವಂತಾಗಿದೆ. ಕಾರ್ಮಿಕರ ಸಾವಿಗೆ ಪರೋಕ್ಷವಾಗಿ ಕಾರಣವಾದ ಪ್ರೊಜೆಕ್ಟ್ ಮ್ಯಾನೇಜರ್ ನಾಗರಾಜ್ ಪೋದ್ದಾರ್, ಸಿವಿಲ್ ಇಂಜಿನಿಯರ್ ವಿಶ್ವನಾಥ ಹಿರೇಮಠ, ಮೌಸೀನ್ ಶೇಖ್ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಂದೆಡೆ ಕುಟುಂಬ ಸದಸ್ಯರನ್ನು ಕಳೆದುಕೊಂಡು ಇದೀಗ ಎರಡೂ ಕುಟುಂಬಗಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಕುಟುಂಬಕ್ಕೆ ಪರಿಹಾರ ಕೊಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮೃತರ ಜೊತೆಗೆ ಕೆಲಸ ಮಾಡುತ್ತಿದ್ದ ಅದೇ ಊರಿನ ಯುವಕ ಸಾಗರ ತಳವಾರ ಮಾತನಾಡಿ, ನಾನು ಕೆಳಗೆ ಇಳಿಯಲು ಹೊರಟಿದ್ದೆ. ಆದರೆ, ನಮ್ಮ ಮಾವ ಬಸವರಾಜ ಸರವಿ ನೀನು ಬೇಡ. ನಾನು ಕೆಳಗಿಳಿಯುತ್ತೇನೆ ಅಂತಾ ಇಳಿದರು. ಮೇಲೆ ಜೆಸಿಬಿ ಇತ್ತು. ಏಕಾಏಕಿ ಎರಡೂ ಕಡೆ ಮಣ್ಣು ಕುಸಿದು ಬಿತ್ತು. ಸುಮಾರು 15 ಅಡಿಯಷ್ಟು ಆಳದಲ್ಲಿ ಇಬ್ಬರೂ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡರು. ಮಾಲೀಕರು ಅಲ್ಲೇ ಇದ್ದರು. ನಮಗೆ ಹೆಲ್ಮೆಟ್ ಬಿಟ್ಟರೆ ಬೇರೆ ಏನೂ ಕೊಟ್ಟಿರಲಿಲ್ಲ. ಅಂಬೇಡ್ಕರ್ ಜಯಂತಿ ಮುಗಿಸಿ ನಿನ್ನೆಯಷ್ಟೇ ಬೆಳಗಾವಿಗೆ ಬಂದಿದ್ದೆವು. ಮಹಾಂತೇಶ ನಗರದಲ್ಲಿ ರೂಮ್ ಮಾಡಿಕೊಂಡಿದ್ದೆವು ಎಂದು ವಿವರಿಸಿದರು.
ಮೃತರ ಸಂಬಂಧಿ ಬಸವರಾಜ ತಳವಾರ ಮಾತನಾಡಿ, ಗುತ್ತಿಗೆದಾರ ನಮಗೆ ಕರೆ ಮಾಡಿ ಘಟನೆ ಕುರಿತು ಮಾಹಿತಿ ನೀಡಿದ. ಬಳಿಕ ಇಬ್ಬರ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಬಿಟ್ಟು ಹೋದವನು ವಾಪಸ್ ಬಂದಿಲ್ಲ. ಮೃತರು ಸಂಬಂಧದಲ್ಲಿ ಚಿಕ್ಕಪ್ಪ ಮತ್ತು ಮಗ ಆಗಬೇಕು. ಯಾವುದೇ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಇದು ಗುತ್ತಿಗೆದಾರನ ತಪ್ಪು. ಯಾವುದೇ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ. ಹಾಗಾಗಿ, ಗುತ್ತಿಗೆದಾರ ಮತ್ತು ಸಂಬಂಧಿಸಿದ ಅಧಿಕಾರಿ ಸ್ಥಳಕ್ಕೆ ಬರುವವರೆಗೆ ಮೃತದೇಹವನ್ನು ಒಯ್ಯಲು ನಾವು ಸಿದ್ಧರಿಲ್ಲ ಎಂದು ಪಟ್ಟು ಹಿಡಿದಿದ್ದರು.
ಘಟನೆ ಬಳಿಕ ಇಬ್ಬರ ಮೃತದೇಹಗಳನ್ನು ಬಿಮ್ಸ್ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಜಿಲ್ಲಾಸ್ಪತ್ರೆಗೆ ಆಗಮಿಸಿದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಮೆಟ್ರೋ ಕಾಮಗಾರಿ ವೇಳೆ ಬೃಹತ್ ತಡೆಗೋಡೆ ಉರುಳಿ ಬಿದ್ದು ಆಟೋ ಚಾಲಕ ಸಾವು - AUTO DRIVER DIES