ಬೆಂಗಳೂರು : ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಬಂಧಿತ ಆರೋಪಿಗಳು. ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇಂಜಿನಿಯರ್ ಆಗಿದ್ದ ಮಂಜುನಾಥ್ 31 ವರ್ಷಗಳ ಕಾಲ ನೈಜೀರಿಯಾದಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬ್ಯಾಂಕ್‌ನ ಪ್ರತಿನಿಧಿಗಳ ಸೋಗಿನಲ್ಲಿ ಮಾರ್ಚ್ ತಿಂಗಳಿನಲ್ಲಿ ಮಂಜುನಾಥ್ ಅವರಿಗೆ ಕರೆ ಮಾಡಿದ್ದ ಆರೋಪಿಗಳು, "ಕ್ರೆಡಿಟ್ ಕಾರ್ಡ್ ಲಿಮಿಟ್ಸ್ ಓವರ್ ಡ್ಯೂ ಆಗಿದೆ" ಎಂದು ವಿವರಗಳನ್ನು ಪಡೆದುಕೊಂಡಿದ್ದರು. ಬಳಿಕ ನಿಮ್ಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ಆದ್ದರಿಂದ ಇಡಿ, ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದಿದ್ದರು. ನಂತರ ನಕಲಿ ವಾರೆಂಟ್‌ನ ಫೋಟೋ ಕಳಿಸಿ "ನಿಮ್ಮನ್ನ ಬಂಧಿಸುತ್ತಿದ್ದು, ತಿಹಾರ್ ಜೈಲಿನಲ್ಲಿರಿಸಲಿದ್ದೇವೆ" ಎಂದು ಬೆದರಿಸಿದ್ದರು. ಹೀಗೆ.. ಮೂರು ತಿಂಗಳ ಕಾಲ ಬೆದರಿಸುತ್ತ ವಿವಿಧ ಹಂತಗಳಲ್ಲಿ 4.79 ಕೋಟಿ ರೂಪಾಯಿ ಸುಲಿಗೆಗೈದಿದ್ದ ಆರೋಪಿಗಳು, ಆಸ್ತಿ ಪತ್ರಗಳ ಕಾಪಿಗಳನ್ನು ಸಹ ಪಡೆದುಕೊಂಡಿದ್ದರು. ವಂಚಕರ ಕಿರುಕುಳ ಅತಿಯಾದಾಗ ಅದನ್ನು ತಾಳಲಾರದ ದಂಪತಿ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವೃದ್ಧ ದಂಪತಿಯ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದ ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ವಂಚಿಸಿದ ಹಣವನ್ನ ಆರೋಪಿಗಳು ಶ್ರೀಲಂಕಾದಲ್ಲಿ ಕ್ಯಾಸಿನೋ ಆಡಲು ಬಳಸಿರುವುದು ಸಹ ಗೊತ್ತಾಗಿದೆ. ಸದ್ಯ ಆರೋಪಿತರ ವಿಚಾರಣೆ ನಡೆಸಲಾಗುತ್ತಿದ್ದು, ವಂಚಿಸಿದ ಹಣವನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂದರೇನು? ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗಿದ್ದಾರೆ. ಎಷ್ಟೇ ಮುಂಜಾಗ್ರತೆ ವಹಿಸಿದರೂ ಯಾವುದೋ ಒಂದು ರೀತಿಯಲ್ಲಿ ಮೋಸ ಮಾಡಿ ಜೇಬಿಗೆ ಕತ್ತರಿ ಹಾಕುತ್ತಾರೆ. ಈ ಹಿಂದೆಲ್ಲಾ ಸೈಬರ್ ಅಪರಾಧಗಳು ಪಿನ್ ನಂಬರ್ ತಿಳಿದುಕೊಂಡು ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಿದ್ದರು. ಒಟಿಪಿ ಮೂಲಕ ಹಣ ಕದಿಯುವುದು ಮತ್ತು ಅರೆಕಾಲಿಕ ಉದ್ಯೋಗದ ಆಫರ್‌ಗಳನ್ನು ನೀಡಿ ವಂಚಿಸುತ್ತಿದ್ದರು. ಈಗ ಇವೆಲ್ಲ ಹಳೆಯ ವಿಧಾನಗಳಾಗಿವೆ. ಇದೀಗ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹೊಸ ರೀತಿಯಲ್ಲಿ ಮೋಸ ಮಾಡುತ್ತಿದ್ದಾರೆ. ಈ ಪೈಕಿ ಲೇಟೆಸ್ಟ್ ಡಿಜಿಟಲ್ ಅರೆಸ್ಟ್. ಇದರ ಮೂಲಕ ಜನರಿಂದ ಲಕ್ಷಗಟ್ಟಲೆ ಹಣ ಸುಲಿಗೆ ಮಾಡುತ್ತಿದ್ದಾರೆ.
ಮೊದಲು ಎಸ್ಎಂಎಸ್, ಇ-ಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಸಂದೇಶ ರವಾನಿಸುವ ಅಥವಾ ಕರೆ ಮಾಡುವ ವಂಚಕರು, 'ನಿಮ್ಮ ನಂಬರ್ ಅಥವಾ ಯಾವುದೋ ದಾಖಲೆಗಳು ಮಾದಕ ಸರಬರಾಜು ಜಾಲ, ಅಕ್ರಮ ಹಣ ವರ್ಗಾವಣೆ, ಅಶ್ಲೀಲ ವಿಡಿಯೋಗಳನ್ನು ಸೃಷ್ಟಿಸುವ ಜಾಲದಲ್ಲಿ ಬಳಕೆಯಾಗಿವೆ' ಎಂದು ಬೆದರಿಸುತ್ತಾರೆ. ನಂತರ 'ನಿಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿದೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ' ಎಂದು ನಿರ್ದಿಷ್ಟ ಮೊಬೈಲ್ ನಂಬರ್ ನೀಡುತ್ತಾರೆ. ಬಳಿಕ ಮಾತನಾಡುವ ವ್ಯಕ್ತಿ ತನ್ನನ್ನ ತಾನು ಮುಂಬೈ ಪೊಲೀಸ್, ಸಿಬಿಐ, ಇ.ಡಿ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿ ಅಂತ ಪರಿಚಯಿಸಿಕೊಂಡು ವಾಟ್ಸ್ಆ್ಯಪ್, ಸ್ಕೈಪ್ ಮತ್ತಿತರ ಆ್ಯಪ್‌ನ ಮೂಲಕ ವಿಡಿಯೋ ಕರೆ ಮಾಡಲು ಸೂಚಿಸುತ್ತಾನೆ. ನೀವು ನಂಬುವಂತೆಯೇ ಪೊಲೀಸ್ ಧಿರಿಸು ಅಥವಾ ತನಿಖಾ ಸಂಸ್ಥೆಗಳ ಕಚೇರಿಯಂತೆಯೇ ಕಾಣುವ ವ್ಯವಸ್ಥೆ ಮಾಡಿಟ್ಟುಕೊಂಡಿರುವ ವಂಚಕ ವಿಡಿಯೋ ಕರೆ ಸ್ವೀಕರಿಸಿ ಮಾತನಾಡಲಾರಂಭಿಸುತ್ತಾನೆ. ಕರೆಯಲ್ಲಿ ನಿಮ್ಮ ವಿರುದ್ಧ ಗಂಭೀರ ಆರೋಪ ಮಾಡುವ ವಂಚಕ, ನಕಲಿ ಅರೆಸ್ಟ್ ವಾರೆಂಟ್ ಫೋಟೋ ಕಳಿಸಿ ನಿಮ್ಮನ್ನ ಬಂಧಿಸಬೇಕಾಗಿದೆ. ಆದ್ದರಿಂದ "ಡಿಜಿಟಲ್ ಅರೆಸ್ಟ್" ಮಾಡುತ್ತಿದ್ದೇವೆ ಎಂದು ಇತರೆಡೆ ನಿಮ್ಮ ಗಮನ ಹೋಗದಂತೆ ನಿಮ್ಮನ್ನ ವಿಡಿಯೋ ಕರೆಯಲ್ಲಿಯೇ ಹಾಜರಿರುವಂತೆ (ಡಿಜಿಟಲ್ ಅರೆಸ್ಟ್) ಮಾಡುತ್ತಾನೆ. ನಂತರ ತನಿಖೆ ನಡೆಸಲಾಗುತ್ತಿದೆ. ನಿಮ್ಮ ವಿರುದ್ಧದ ಪ್ರಕರಣವನ್ನ ಕೈಬಿಡಲು ಹಣ ನೀಡಬೇಕಾಗುತ್ತದೆ ಎಂದು ಬೇಡಿಕೆಯಿಡುತ್ತಾನೆ. ಇನ್ನೂ ಅನೇಕ ಸಂದರ್ಭಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ವೆರಿಫಿಕೇಷನ್ ಮಾಡಬೇಕಾಗಿದೆ ಎನ್ನುವ ವಂಚಕರು, ನಾವು ಹೇಳಿದ ಸರ್ಕಾರಿ ಖಾತೆಗಳಿಗೆ ನಿಮ್ಮ ಹಣವನ್ನ ವರ್ಗಾಯಿಸಿ, ವಿಚಾರಣೆ ನಡೆಸಿ ಮರು ವರ್ಗಾವಣೆ ಮಾಡುತ್ತೇವೆ ಎನ್ನುತ್ತಾರೆ. ಮಾತು ನಂಬಿ ಹಣ ವರ್ಗಾಯಿಸಿದರೆ ಅಲ್ಲಿಗೆ ನೀವು ಮೋಸ ಹೋಗುವುದು ಖಚಿತ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ದಿನಗಳಗಟ್ಟಲೇ ವಿಡಿಯೋ ಕರೆಯಲ್ಲಿರಿಸಿಕೊಂಡು ವಂಚಿಸಿದ ಪ್ರಕರಣಗಳೂ ಸಹ ವರದಿಯಾಗಿವೆ.
ಡಿಜಿಟಲ್ ಅರೆಸ್ಟ್ ವಿರುದ್ಧ ವಹಿಸಬೇಕಾದ ಎಚ್ಚರಿಕೆಗಳು: ಸೈಬರ್ ಅಪರಾಧಿಗಳು ನಮ್ಮ ಭಯವನ್ನು ಅವಕಾಶವಾಗಿ ಪರಿವರ್ತಿಸುತ್ತಾರೆ. ಹಾಗಾಗಿ ವಂಚಕರು ನಿಮಗೆ ಕರೆ ಮಾಡಿದರೆ ಭಯಪಡದೆ ಉತ್ತರಿಸಿ.
- ಜಾಗರೂಕರಾಗಿರಿ - ಸರ್ಕಾರದ ಯಾವುದೇ ತನಿಖಾ ಸಂಸ್ಥೆಗಳು ವಿಡಿಯೋ ಕರೆಯ ಮೂಲಕ ತನಿಖೆ ಕೈಗೊಳ್ಳುವುದಿಲ್ಲ.
- ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳದಿರಿ - ನಿಮ್ಮ ವೈಯಕ್ತಿಕ ದಾಖಲೆಗಳು, ಸೂಕ್ಷ್ಮ ಮಾಹಿತಿಗಳನ್ನು ಸಾಮಾಜಿಕ ಜಾಲತಾಣ ಅಥವಾ ಯಾವುದೇ ಆನ್‌ಲೈನ್ ವೇದಿಕೆಗಳಲ್ಲಿ ಹಂಚಿಕೊಳ್ಳದಿರುವುದು ಉತ್ತಮ.
- ಹಣ ವರ್ಗಾವಣೆ ಮಾಡಬೇಡಿ - ತನಿಖಾ ಸಂಸ್ಥೆಗಳು ಪ್ರಕರಣವನ್ನು ಕೈಬಿಡಲು ಹಣಕ್ಕಾಗಿ ಬೇಡಿಕೆಯಿಡುವುದಿಲ್ಲ.
- ಅನುಮಾನಾಸ್ಪದ ಕರೆಗಳ ಕುರಿತು ಎಚ್ಚರವಿರಲಿ - ಯಾವುದೇ ಅನುಮಾನಾಸ್ಪದ ಕರೆಗಳನ್ನು ಸ್ವೀಕರಿಸಿದರೆ ತಕ್ಷಣ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟ್ ಪೋರ್ಟಲ್ (cybercrime.gov.in) ಅಥವಾ 1930 ಸಹಾಯವಾಣಿಗೆ ಮಾಹಿತಿ ನೀಡಿ.
- ಡಿಜಿಟಲ್ ಅರೆಸ್ಟ್ ಎಂಬ ವಿಧಾನವೇ ಇಲ್ಲ - ಸಿಬಿಐ, ಇ.ಡಿ ಅಥವಾ ರಾಜ್ಯ ಪೊಲೀಸರಾಗಲಿ ಯಾವುದೇ ತನಿಖಾ ಸಂಸ್ಥೆಗಳು ಕರೆಯ ಮೂಲಕ ತನಿಖೆ/ವಿಚಾರಣೆ ಮಾಡುವುದಿಲ್ಲ. ಡಿಜಿಟಲ್ ಅರೆಸ್ಟ್ ಎಂಬ ವಿಧಾನವೇ ಇಲ್ಲ. ಆ ರೀತಿಯ ಕರೆಗಳು ಬಂದರೆ ರಾಷ್ಟ್ರೀಯ ಸೈಬರ್ ಕ್ರೈಂ ಸಹಾವಾಣಿ (1930) ಗೆ ಕರೆ ಮಾಡಿ ದೂರು ನೀಡಬಹುದು ಅಥವಾ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಆ ನಂಬರ್‌ನ ನೈಜತೆ ಪರೀಕ್ಷಿಸಿಕೊಳ್ಳಬೇಕು.
ಇದನ್ನೂ ಓದಿ: ನಕಲಿ ಪೊಲೀಸ್ ಠಾಣೆ ಸ್ಥಾಪನೆ: 1 ವರ್ಷದಿಂದ ಕಾರ್ಯಾಚರಣೆ, 500 ಜನರಿಗೆ ಮೆಗಾ ವಂಚನೆ! - PURNEA FAKE POLICE STATION