ಗಂಗಾವತಿ (ಕೊಪ್ಪಳ): ಈಜುಲು ಹೋಗಿದ್ದ ಇಬ್ಬರು ಬಾಲಕರು ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಗ್ರಾಮದಲ್ಲಿ ಇಂದು ನಡೆದಿದೆ.
ಮೃತಪಟ್ಟಿರುವ ಬಾಲಕರನ್ನು ಗಂಗಾವತಿಯ 17ನೇ ವಾರ್ಡ್ನ ಪವನ್ ಕುಮಾರ ಕಟ್ಟಿಮನಿ (14) ಹಾಗೂ ಬಹದ್ದೂರ ಬಂಡಿ ಗ್ರಾಮದ ಗೌತಮ್ (15) ಎಂದು ತಿಳಿದು ಬಂದಿದೆ.
ಬಾಲಕರ ಸಂಬಂಧಿಕರ ಮನೆಯಲ್ಲಿ ಇತ್ತೀಚೆಗೆ ಮದುವೆ ಸಮಾರಂಭ ನಡೆದಿತ್ತು. ಆದ್ದರಿಂದ ನದಿಗೆ ಪೂಜೆ ಸಲ್ಲಿಸಲು ಹಾಗೂ ಕೆಲ ಸಾಮಗ್ರಿಗಳನ್ನು ನದಿಯಲ್ಲಿ ಬಿಡಲು ಕುಟುಂಬಸ್ಥರು ಹಾಗೂ ಬಾಲಕರು ತೆರಳಿದ್ದರು. ಕುಟುಂಬಸ್ಥರು ಇತ್ತ ನದಿಗೆ ಪೂಜೆ ಸಲ್ಲಿಸುವ ವೇಳೆ ಬಾಲಕರು ಈಜಾಡಲು ಹೋಗಿದ್ದಾರೆ. ಈ ವೇಳೆ, ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಾಲಕರು ನೀರಲ್ಲಿ ಮುಳುಗಿರುವುದು ಕುಟುಂಬಸ್ಥರಿಗೆ ಗೊತ್ತಾಗದೇ ಗಂಟೆಗೂ ಹೆಚ್ಚು ಕಾಲ ಹೊರಗಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ನದಿಯಲ್ಲಿ ಇರುವ ಗುಂಡಿಯಲ್ಲಿ ಬಾಲಕರು ಮುಳುಗಿರುವುದು ಗೊತ್ತಾಗಿದೆ. ನಂತರ ಸ್ಥಳೀಯ ಮೀನುಗಾರರು ಬಾಲಕ ಪವನಕುಮಾರನನ್ನು ಹೊರ ತೆಗೆದಿದ್ದಾರೆ. ಇನ್ನೋರ್ವ ಬಾಲಕನಿಗಾಗಿ ಶೋಧ ಕಾರ್ಯ ನಡೆದಿದೆ. ನದಿಯಲ್ಲಿ ಸುಮಾರು ವರ್ಷಗಳಿಂದ ಮರಳು ತೆಗೆಯಲು ಗುಂಡಿಗಳನ್ನು ತೆಗೆಯಲಾಗಿದೆ. ಆ ಗುಂಡಿಗಳಲ್ಲಿಯೇ ಬಾಲಕರು ಮುಳುಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವೈಜಿ ಗುಡ್ಡ ಜಲಾಶಯ ವೀಕ್ಷಣೆಗೆ ಬಂದ ಮೂವರು ಯುವತಿಯರು ನೀರುಪಾಲು