ಬೆಂಗಳೂರು: ಪಾರ್ಟಿಯಲ್ಲಿ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸಾವಿಗೆ ಕಾರಣರಾಗಿದ್ದ ಇಬ್ಬರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೀರಮಣಿ ಹಾಗೂ ಪವನ್ ಬಂಧಿತ ಆರೋಪಿಗಳು. ಮೇ.8 ರಂದು ದಾಸರಹಳ್ಳಿ ಮುಖ್ಯ ರಸ್ತೆಯ ಪಕ್ಕದ ಖಾಲಿ ನಿವೇಶನದಲ್ಲಿ ಮದ್ಯಪಾನ ಮಾಡುತ್ತಿದ್ದ ಆರೋಪಿಗಳು, ಜೊತೆಗಿದ್ದ ಅಜೀಜ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದರು. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಅಜೀಜ್ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ.
ಹಲ್ಲೆಗೈದು ಅಪಘಾತದ ನಾಟಕ: ಹತ್ಯೆಯಾದ ಅಜೀಜ್ ಮತ್ತು ಆರೋಪಿಗಳು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಮೇ.8 ರಂದು ರಾತ್ರಿ ಪಾರ್ಟಿ ಮಾಡುವಾಗ ಮದ್ಯಪಾನದ ಮತ್ತಿನಲ್ಲಿ ಅವರವರ ನಡುವೆಯೇ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪವನ್‌ನ ಮೇಲೆ ಅಜೀಜ್ ಹಲ್ಲೆಗೈದಿದ್ದ. ಇದರಿಂದ ಸಿಟ್ಟಿಗೆದ್ದ ಪವನ್ ಹಾಗೂ ವೀರಮಣಿ, ಮರದ ತುಂಡುಗಳಿಂದ ಅಜೀಜ್‌ನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದರು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಜೀಜ್‌ನನ್ನ ಅಪಘಾತದಲ್ಲಿ ಗಾಯಗೊಂಡಿದ್ದಾನೆ ಎಂದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆತನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೇ.9 ರಂದು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಅಷ್ಟರಲ್ಲಾಗಲೇ ಸ್ಥಳಿಯರೊಬ್ಬರ ಮಾಹಿತಿ ಆಧರಿಸಿ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಇತ್ತ ಆಸ್ಪತ್ರೆ ವೈದ್ಯರೂ ಸಹ ಅಪಘಾತದಿಂದ ಅಜೀಜ್‌ನ ಸಾವು ಸಂಭವಿಸಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಅಜೀಜ್ ಸಾವನ್ನಪ್ಪಿದ್ದ. ಆರೋಪಿಗಳನ್ನ ವಿಚಾರಣೆಗೊಳಪಡಿಸಿದಾಗ ಹತ್ಯೆಯ ವಿಚಾರ ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕುಣಿಗಲ್ ಐಸ್‌ಕ್ರೀಮ್ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನ ಜೊತೆ ಸೇರಿ ಮಗನಿಂದಲೇ ಕೊಲೆ!
ಇದನ್ನೂ ಓದಿ: ಕಳ್ಳತನ, ಸೈಬರ್ ವಂಚನೆ ಸೇರಿ 80ಕ್ಕೂ ಅಧಿಕ ಪ್ರಕರಣ: ಇಂಜಿನಿಯರಿಂಗ್ ಪದವೀಧರನ ಬಂಧನ