ದಾವಣಗೆರೆ: ವಕ್ಫ್ ಮಸೂದೆ ವಿರೋಧಿಸಿ ದಾವಣಗೆರೆ ಪಾಲಿಕೆ ಮಾಜಿ ಸದಸ್ಯರೊಬ್ಬರು ಪ್ರಚೋದನಕಾರಿ ಭಾಷಣ ಮಾಡಿದಲ್ಲದೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಿರುವುದಾಗಿ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪಾಲಿಕೆ ಮಾಜಿ ಸದಸ್ಯ ಕಬೀರ್ ಶೋಧನೆ ನಡೆದಿದೆ. ಮೂರನೇ ವಾರ್ಡ್ ಮಾಜಿ ಪಾಲಿಕೆ ಸದಸ್ಯ ಕಬೀರ್ ಖಾನ್ ಪ್ರಚೋದನಕಾರಿ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಈ ವಿಡಿಯೋ ಮಾಡಲು ಸಹಕರಿಸಿದ್ದ ಜುಬೇರ್ ಹಾಗೂ ಘನೀ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುವುದಾಗಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ವಿಡಿಯೋ ಮಾಡಿದವರ ಬಂಧನ, ಕಬೀರ್ ಎಸ್ಕೇಪ್: ವಕ್ಫ್ ಮಸೂದೆ ವಿರೋಧಿಸಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತಿದ್ದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದ ಪಾಲಿಕೆಯ ಮಾಜಿ ಸದಸ್ಯ ಅಹ್ಮದ್ ಕಬೀರ್ ಖಾನ್ ತಲೆಮರೆಸಿಕೊಂಡಿದ್ದು, ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಯ ಪಿಐ ಆಶ್ವಿನ್ ಕುಮಾರ್ ಆರ್.ಜಿ ಅವರು ಈಟಿವಿ ಭಾರತಕ್ಕೆ ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, "ಪ್ರಚೋದನಕಾರಿ ಭಾಷಣ ಮಾಡಿದ ಪಾಲಿಕೆಯ ಮಾಜಿ ಸದಸ್ಯ ಕಬೀರ್ ಖಾನ್ ತಲೆಮರೆಸಿಕೊಂಡಿದ್ದು, ವಿಡಿಯೋ ಮಾಡಲು ಸಹಕರಿಸಿದ್ದ ಜುಬೇರ್, ಘನೀ ಎಂಬವರನ್ನು ಬಂಧಿಸಿದ್ದೇವೆ. ಕಬೀರ್ನನ್ನು ಬಂಧಿಸಲು ಪ್ರಯತ್ನ ನಡೆದಿದೆ" ಎಂದಿದ್ದಾರೆ.
ಸಿ.ಟಿ.ರವಿ ಕಿಡಿ: ಈ ಪ್ರಚೋದನಕಾರಿ ಭಾಷಣವನ್ನು ಖಂಡಿಸಿರುವ ಪರಿಷತ್ ಸದಸ್ಯ ಸಿ.ಟಿ.ರವಿ, ತಮ್ಮ ಎಕ್ಸ್ ಖಾತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. "ಕಾಂಗ್ರೆಸ್ ಮುಖಂಡ, ದಾವಣಗೆರೆಯ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅಹ್ಮದ್ ಕಬೀರ ಅಲಿಯಾಸ್ ಅಹ್ಮದ್ ಖಾನ್ ವಕ್ಫ್ ತಿದ್ದುಪಡಿ ಬಿಲ್ ರದ್ಧತಿಗಾಗಿ ಸಮಾಜದಲ್ಲಿ ಯಾವ ತರ ಅಶಾಂತಿ ಸೃಷ್ಟಿಸಬೇಕು ಎಂದು ಕರೆ ನೀಡಿದ್ದಾನೆ. ಮತಬ್ಯಾಂಕ್ ಒಲೈಕೆಯ ಕಾಂಗ್ರೆಸ್ ಸರ್ಕಾರ ಇದನ್ನು ನೋಡಿ ಕೇಳಿಯೂ ಏನು ಮಾಡುತ್ತಿದೆ, ನಾಟಕೀಯವಾಗಿ ಕಣ್ಣುಮುಚ್ಚಿ ನಿದ್ರಿಸುತ್ತ ತಮ್ಮ ದುರ್ಭಾವನೆಯ ಮಾನಸಿಕತೆಯನ್ನು ಅಂತರಾಳದಲ್ಲಿ ನೆನೆದು ಖುಷಿಪಡುತ್ತಿದೆಯಾ?" ಎಂದೆಲ್ಲ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿ ಬರೆದುಕೊಂಡಿದ್ದಾರೆ.