ಬೆಂಗಳೂರು: ಬಾಡಿಗೆ ಬೈಕ್ ಪಡೆದು, ಸರಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಭದ್ರಾವತಿ ಮೂಲದ ಪ್ರಭು (27) ಹಾಗೂ ಬೆಂಗಳೂರಿನ ನಿತಿನ್ (24) ಬಂಧಿತ ಆರೋಪಿಗಳು.
ಆರೋಪಿತರಿಂದ 2.8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.5 ಲಕ್ಷ ರೂ. ಮೌಲ್ಯದ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಸಿಕ್ಕಿಕೊಳ್ಳಬಾರದೆಂದು ಬಾಡಿಗೆಗೆ ಬೈಕ್ ಬಳಕೆ: ಹಣಕ್ಕಾಗಿ ಯೂಟ್ಯೂಬ್ ನೋಡಿ ಸರಗಳ್ಳತನದ ದಾರಿ ಹಿಡಿದಿದ್ದ ಆರೋಪಿಗಳು, ಸ್ವಂತ ವಾಹನ ಬಳಸಿದರೆ ಪೊಲೀಸರ ಬಳಿ ಸಿಕ್ಕಿಹಾಕಿಕೊಳ್ಳುವ ಭಯದಿಂದ ಬಾಡಿಗೆಗೆ ಬೈಕ್ ಪಡೆಯುತ್ತಿದ್ದರು. ಬನಶಂಕರಿಯಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಒಂದು ದಿನದ ಅವಧಿಗೆ ಬೈಕ್ ಪಡೆದು, ಮಹಿಳೆಯರು ವಾಕಿಂಗ್ ಮಾಡುವ ಸ್ಥಳಗಳನ್ನು ಗುರುತಿಸಿಕೊಂಡು ಬರುತ್ತಿದ್ದರು. ನಿತಿನ್ ಬೈಕ್ ಓಡಿಸಿದರೆ, ಪ್ರಭು ಹಿಂದೆ ಕುಳಿತು ಸರ ಎಗರಿಸುತ್ತಿದ್ದ. ಇದೇ ರೀತಿ ಮಾರ್ಚ್ 14ರಂದು ಕೋಣನಕುಂಟೆ ಠಾಣೆ ವ್ಯಾಪ್ತಿಯ ವೆಂಕಟೇಶ್ವರ ಲೇಔಟ್‌ನ ಬಳಿ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪೈಕಿ ನಿತಿನ್ ವಿರುದ್ಧ ಈ ಹಿಂದೆ ಭದ್ರಾವತಿಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಸದ್ಯ ಇಬ್ಬರನ್ನೂ ಬಂಧಿಸಿ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೈಡ್ರೋಪೋನಿಕ್ ಗಾಂಜಾ ಮಾರಾಟ: ಕೇರಳದ ಸಿವಿಲ್ ಇಂಜಿನಿಯರ್ ಸೆರೆ