ಶಿರಸಿ: ಎರಡು ದಿನಗಳ ಹಿಂದೆಯಷ್ಟೇ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಎಲ್ಲೆಡೆ ರ್ಯಾಂಕ್ಗಳ ಚರ್ಚೆ ನಡೆದಿದೆ. ಅದರ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ವೈದ್ಯ ದಂಪತಿಯ ಅವಳಿ ಮಕ್ಕಳು ಇಬ್ಬರೂ ರಾಜ್ಯಮಟ್ಟದಲ್ಲಿ ಆರನೇ ರ‍್ಯಾಂಕ್ ಪಡೆದು ಸಹೋದರತೆ ಸಾರಿದ್ದಾರೆ.
ಶಿರಸಿಯ ವೈದ್ಯ ದಂಪತಿ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಮಕ್ಕಳಿಬ್ಬರೂ ಪಿಯುಸಿಯಲ್ಲಿ ರಾಜ್ಯಮಟ್ಟದ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. 600ಕ್ಕೆ 594 ಅಂಕ ಪಡೆದು ಶೇ.99 ರಷ್ಟು ಸಾಧನೆ ಮಾಡಿದ ವಿದ್ಯಾರ್ಥಿಗಳಾದ ದಕ್ಷ ಹಾಗೂ ರಕ್ಷಾ ಇಬ್ಬರೂ ಸಮಾನ ಸಂಖ್ಯೆಯ ಅಂಕ ಪಡೆದಿರುವುದು ವಿಶೇಷವಾಗಿದೆ.
ಮೂಲತಃ ಶಿರಸಿಯವರಾದರೂ ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ಓದುತ್ತಿದ್ದರು. ದಕ್ಷನಿಗೆ ನಾಲ್ಕು ವಿಷಯದಲ್ಲಿ ಶೇ.100, ರಕ್ಷಾನಿಗೆ ಎರಡು ವಿಷಯದಲ್ಲಿ ಶೇ. 100 ಅಂಕ ಪಡೆದಿದ್ದಾರೆ. ಆದರೂ ಇಬ್ಬರೂ ಒಂದೇ ರೀತಿಯ ಅಂಕ ಗಳಿಸಿದ್ದು ವಿಸ್ಮಯ ಎನ್ನಬಹುದಾಗಿದೆ.
ದಕ್ಷ - ಇಂಗ್ಲೀಷ್ನಲ್ಲಿ 95, ಸಂಸ್ಕೃತದಲ್ಲಿ 100, ಭೌತಶಾಸ್ತ್ರದಲ್ಲಿ 100, ರಸಾಯನಶಾಸ್ತ್ರದಲ್ಲಿ 99, ಗಣಿತದಲ್ಲಿ 100, ವೀವಶಾಸ್ತ್ರದಲ್ಲಿ 100 ಅಂಕಗಳು ಹಾಗೂ ರಕ್ಷಾ - ಇಂಗ್ಲೀಷ್ನಲ್ಲಿ 99, ಸಂಸ್ಕೃತದಲ್ಲಿ 100, ಭೌತಶಾಸ್ತ್ರದಲ್ಲಿ 97, ರಸಾಯನಶಾಸ್ತ್ರದಲ್ಲಿ 99, ಗಣಿತದಲ್ಲಿ 100 ಹಾಗೂ ಕಂಪ್ಯೂಟರ್ ಸೈನ್ಸ್ನಲ್ಲಿ 99 ಅಂಕ ಪಡೆದುಕೊಂಡಿದ್ದಾರೆ.
ಇನ್ನು ವಿದ್ಯಾರ್ಥಿಗಳಿಬ್ಬರೂ ಸಹ ಮುಂದಿನ ಭವಿಷ್ಯಕ್ಕಾಗಿ ಬೆಂಗಳೂರಿನಲ್ಲಿ ಕಲಿಕೆ ಮುಂದುವರೆಸಿದ್ದು, ಶಿರಸಿಯಲ್ಲಿ ಅವರ ತಾಯಿ, ವೈದ್ಯೆ ಡಾ.ಸುಮನ್ ಹೆಗಡೆ ಸಂತಸ ಹಂಚಿಕೊಂಡಿದ್ದಾರೆ.
ಮಕ್ಕಳ ಸಾಧನೆಯ ಖುಷಿ ಹಂಚಿಕೊಂಡ ತಾಯಿ: "ನಮ್ಮ ಅವಳಿ ಮಕ್ಕಳಿಬ್ಬರೂ ಸಮಾನ ಅಂಕ ಪಡೆದು ರಾಜ್ಯಕ್ಕೆ 6ನೇ ರ‍್ಯಾಂಕ್ ಬಂದಿದ್ದಾರೆ. ಖುಷಿಯ ಜೊತೆಗೆ ಅದು ನಮಗೆ ಬಹಳ ವಿಶೇಷವೆನಿಸಿತು. ಈ ಸಾಧನೆಯ ಹಿಂದೆ ಮಕ್ಕಳ ಪ್ರಯತ್ನವೇ ಬಹಳ ಇದೆ. ಎಸ್ಎಸ್ಎಲ್ಸಿವರೆಗೆ ಶಿರಸಿಯಲ್ಲೇ ಅವರು ಓದಿದ್ದು, ಪಿಯುಸಿಯನ್ನು ಬೆಂಗಳೂರಿನಲ್ಲಿ ಹಾಸ್ಟೆಲ್ನಲ್ಲಿದ್ದುಕೊಂಡು ಓದಿದ್ದಾರೆ. ಅಲ್ಲಿದ್ದುಕೊಂಡು ಅವರು ಈ ಸಾಧನೆಯನ್ನು ಮಾಡಿದ್ದಾರೆ. ಇಬ್ಬರೂ ಸುಮಾರು 3 ವರ್ಷದವರಾಗಿದ್ದಾಗ ಸಂಪೂರ್ಣವಾಗಿ ಟಿವಿಗೆ ಅಡಿಕ್ಷನ್ ಆಗಿದ್ದರು. ಅವರಿಗೆ ಟಿವಿ ಬಿಟ್ಟು ಇರಲು ಆಗುತ್ತಿರಲ್ಲಿ. ಅಂತಹ ಸಂದರ್ಭದಲ್ಲಿ ಅವರ ಭವಿಷ್ಯ ಹಾಳಾಗಬಾರದು ಅಂತ ರಾತ್ರೋರಾತ್ರಿ ಟಿವಿಯನ್ನು ತೆಗೆದು, ಅವರ ಮುಂದೆ ಪುಸ್ತಕಗಳನ್ನು ಇಟ್ಟೆ" ಎಂದರು.
"ಮಕ್ಕಳ ಮುಂದೆ ನಾವು ಯಾವುದನ್ನು ಇಡುತ್ತೇವೆಯೋ ಅದನ್ನು ಮಾಡುತ್ತಾರೆ. ಇದು ನಮಗೆ ಸಂಪೂರ್ಣ ಕೆಲಸ ಮಾಡಿತು. ಪ್ರಾರಂಭದಲ್ಲಿ ಅವರಿಗೆ ಆ ಅಡಿಕ್ಷನ್ನಿಂದ ಹೊರಗೆ ಬರಲು ಆಗುತ್ತಿರಲಿಲ್ಲ. ನಮಗೆ ಬಹಳ ಕಷ್ಟ ಕೊಟ್ರು. ಆದರೆ ಅವರ ಮುಂದೆ ಪುಸ್ತಕ ಇಟ್ಟಾಗ ಅದನ್ನು ರೂಡಿಸಿಕೊಂಡರು. ಅವರಿಗೆ ಏನಾದರೂ ಬದಲಿ ವ್ಯವಸ್ಥೆ ಮಾಡಬೇಕಿತ್ತು. ಹಾಗಾಗಿ ನಾನು ಯಾವುದೇ ಊರಿಗೆ ಹೋದ್ರು ಅವರಿಗೆ ಪುಸ್ತಕಗಳನ್ನು ತಂದುಕೊಡುತ್ತಿದ್ದೆ. ಆಟದ ಸಾಮಾನುಗಳನ್ನು ತಂದು ಕೊಡುತ್ತಿದ್ದೆ. ಪೋಷಕರು ಸಾಧ್ಯವಾದಷ್ಟು ಮಕ್ಕಳಿಗೆ ಸಮಯ ಕೊಡಬೇಕು. ನಾನು ಅವರಿಗೆ ಹೇಳಿಕೊಡುವುದಲ್ಲದೆ, ನಾನು ಅವರಿಂದ ಕಲಿಯುತ್ತಿದ್ದೆ. ಅಂದು ತಂದ ಬದಲಾವಣೆಯ ಪ್ರಯತ್ನವಾಗಿ ಇಂದು ಉತ್ತಮ ಫಲಿತಾಂಶ ಸಾಧ್ಯವಾಗಿದೆ. ಮೊಬೈಲ್ನಿಂದ ದೂರ ಇಟ್ಟು ಪುಸ್ತಕ, ವಿವಿಧ ಹವ್ಯಾಸ, ಕ್ರೀಡೆಯಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಮಾಡಬೇಕು" ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಬಡತನ ಮೆಟ್ಟಿನಿಂತ ಕೂಲಿ ಕೆಲಸಗಾರನ ಮಗಳು: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್