ವಿಶೇಷ ವರದಿ: ವಿನೋದ್ ಪುದು
ಮಂಗಳೂರು: ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಭೀಕರ ವಿಮಾನ ದುರಂತವು 2010 ರ ಮೇ 22 ರಂದು ಮಂಗಳೂರಿನಲ್ಲಿ ನಡೆದ ವಿಮಾನ ಅಪಘಾತವನ್ನು ನೆನಪಿಸಿದೆ. ಕಡಲೂರಲ್ಲಿ ಹೊತ್ತಿ ಉರಿದ ವಿಮಾನದಲ್ಲಿ 158 ಜನ ಮೃತಪಟ್ಟಿದ್ದರು. ಈ ಪೈಕಿ ಮೃತ 12 ಮಂದಿಯ ಗುರುತು ಪತ್ತೆ ಹಚ್ಚಲಾಗದೇ, ಅವರ ಕುಟುಂಬಿಕರಿಗೆ ಮೃತದೇಹ ಹಸ್ತಾಂತರ ಮಾಡಲು ಸಾಧ್ಯವಾಗದೇ ಹೋಯಿತು. ಆ 12 ಮಂದಿಯ ಮೃತದೇಹವನ್ನು ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಬೇಕಾಯಿತು.
2010ರ ಮೇ 22ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಜ್ಪೆ) ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 812 ದುರಂತಕ್ಕೀಡಾಯಿತು. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಈ ಬೋಯಿಂಗ್ 737-800 ವಿಮಾನವು ಬೆಳಗ್ಗೆ 6:14ಕ್ಕೆ ರನ್ ವೇಗೆ ಇಳಿಯುವ ವೇಳೆ ನಿಯಂತ್ರಣ ತಪ್ಪಿ ರನ್ ವೇ ದಾಟಿ ಕಾಂಪೌಂಡ್ ಗೋಡೆ ಒಡೆದು ಕೆಂಜಾರು ಗುಡ್ಡದ ಕಣಿವೆಗೆ ಬಿದ್ದಿತ್ತು. ವಿಮಾನವು ಎರಡು ಭಾಗವಾಗಿ ಒಡೆದು ಭಾರೀ ಬೆಂಕಿಗೆ ಆಹುತಿಯಾಯಿತು.

ವಿಮಾನದಲ್ಲಿ ಒಟ್ಟು 166 ಪ್ರಯಾಣಿಕರಿದ್ದರು, ಇವರಲ್ಲಿ 6 ಜನ ವಿಮಾನ ಸಿಬ್ಬಂದಿ, 135 ವಯಸ್ಕರು, 19 ಮಕ್ಕಳು ಮತ್ತು 4 ಶಿಶುಗಳು ಸೇರಿದ್ದರು. ಈ ದುರಂತದಲ್ಲಿ 158 ಮಂದಿ ಮೃತಪಟ್ಟರು (152 ಪ್ರಯಾಣಿಕರು ಮತ್ತು 6 ಸಿಬ್ಬಂದಿ), ಕೇವಲ 8 ಮಂದಿ ಬದುಕುಳಿದಿದ್ದರು.
ಘಟನೆ ಹೇಗಾಯಿತು?: ಅಸ್ಥಿರ ವಿಧಾನವನ್ನು ಕೈಬಿಡುವಲ್ಲಿನ ವೈಫಲ್ಯ ಹಾಗೂ ಸಹ-ಪೈಲಟ್ ಮೂರು ಬಾರಿ "ಗೋ-ಅರೌಂಡ್" (ಮತ್ತೆ ಮೇಲಕ್ಕೆ ಏರುವ) ಸಲಹೆ, ಇಜಿಪಿಡಬ್ಲ್ಯುಎಸ್ ಎಚ್ಚರಿಕೆ ನೀಡಿದರೂ ಲ್ಯಾಂಡಿಂಗ್ ಪ್ರಯತ್ನಕ್ಕೆ ಕ್ಯಾಪ್ಟನ್ ಮುಂದಾಗಿದ್ದು ಘಟನೆಗೆ ಕಾರಣ ಎಂದು ಏರ್ ಮಾರ್ಷಲ್ ಬಿ.ಎನ್.ಗೋಖಲೆ ಅವರ ಕೋರ್ಟ್ ಆಫ್ ಎನ್ಕ್ವೈರಿ ವರದಿಯಲ್ಲಿ ನಮೂದಾಗಿದೆ.
12 ಜನ ಗುರುತು ಪತ್ತೆಯಾಗಲಿಲ್ಲ: ದುರಂತದ ನಂತರ, 158 ಮೃತರ ಪೈಕಿ 22 ಮಂದಿಯ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಈ 22 ಮೃತದೇಹಗಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದ್ದವು, ಇದರಿಂದ DNA ಪರೀಕ್ಷೆಯನ್ನು ಸಹ ಮಾಡಲಾಯಿತು. ಈ 22 ಮಂದಿಯಲ್ಲಿ 10 ಜನರ ಗುರುತು ಪತ್ತೆಯಾಗಿ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಉಳಿದ 12 ಮಂದಿಯ ಮೃತದೇಹವನ್ನು ಗುರುತು ಪತ್ತೆ ಹಚ್ಚಲು ಸಾಧ್ಯವಾಗದೇ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಯಿತು.
ಸಾಮೂಹಿಕ ಅಂತ್ಯಸಂಸ್ಕಾರ: ಗುರುತು ಪತ್ತೆಯಾಗದ 12 ಮೃತದೇಹಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೂಳೂರಿನ ಫಲ್ಗುಣಿ ನದಿಯ ತೀರದಲ್ಲಿ ಸರ್ಕಾರಿ ಗೌರವಗಳೊಂದಿಗೆ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು. ಗುರುತು ಸಾಧ್ಯವಾಗದ ಕಾರಣ ಈ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಲಿಲ್ಲ. ಆದ ಕಾರಣ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಮೃತದೇಹಗಳನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಿತು.

'ವಿಮಾನ ದುರಂತ ನಡೆದ ಸಂದರ್ಭದಲ್ಲಿ ಹೈದಾರಾಬಾದ್ನಿಂದ ಡಿಎನ್ಎ ಟೆಸ್ಟ್ಗಾಗಿ ತಂಡ ಮಂಗಳೂರಿಗೆ ಬಂದಿತ್ತು. ಇದರಲ್ಲಿ ಹಲವರ ಮೃತದೇಹದ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ 22 ಮೃತದೇಹದ ಸ್ಯಾಂಪಲ್ ಮತ್ತು ಗುರುತು ಪತ್ತೆಯಾಗದೇ ಇರುವ ಪ್ರಯಾಣಿಕರ ಸಂಬಂಧಿಕರ ಸ್ಯಾಂಪಲ್ ಪಡೆದು ತಂಡ ತೆರಳಿತ್ತು. ಇದರಲ್ಲಿ 10 ಮಂದಿಯ ಗುರುತು ಸಂಬಂಧಿಕರ ಡಿಎನ್ಎಯೊಂದಿಗೆ ಪತ್ತೆಯಾಗಿತ್ತು. ಅಂತಹ ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಆದರೆ, 12 ಮಂದಿ ಪ್ರಯಾಣಿಕರ ಮೃತದೇಹವನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಪ್ರಕ್ರಿಯೆಗೆ ಸುಮಾರು ಒಂದು ತಿಂಗಳು ಕಾಯಬೇಕಾಯಿತು. ಬಳಿಕ ಇದನ್ನು ಅವರ ಸಂಬಂಧಿಕರ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಗುರುತು ಪತ್ತೆಹಚ್ಚಲು ಸಾಧ್ಯವೆ ಇಲ್ಲದಂತಹ ಸ್ಥಿತಿಯಲ್ಲಿದ್ದ ಮೃತದೇಹಗಳನ್ನು ಕೂಳೂರಿನಲ್ಲಿ ಗೌರವಯುತವಾಗಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿ ಮೃತದೇಹವನ್ನು ಪ್ರತ್ಯೇಕ ವಾಹನದಲ್ಲಿ ಇಲ್ಲಿಗೆ ತಂದು, ವಿವಿಧ ಧರ್ಮಗುರುಗುಳು, ರಾಜಕಾರಣಿಗಳ ಸಮ್ಮುಖದಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲಾಯಿತು' ಎಂದು ಆ ಸಂದರ್ಭದಲ್ಲಿ ದ.ಕ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿ ಆಗಿದ್ದ ಪ್ರಭಾಕರ ಶರ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದುರಂತದ ಸ್ಮರಣಾರ್ಥ ಕೂಳೂರು-ತಣ್ಣೀರುಬಾವಿ ರಸ್ತೆಯಲ್ಲಿ ಫಲ್ಗುಣಿ ನದಿಯ ತೀರದ ಸಮೀಪ ಸಂತ್ರಸ್ತರ ನೆನಪಿಗಾಗಿ ಒಂದು ಸ್ಮಾರಕ ಪಾರ್ಕ್ ನಿರ್ಮಿಸಲಾಯಿತು. ಈ ಸ್ಮಾರಕವನ್ನು 2010ರ ಮೇ 22ರಂದು ಮೃತಪಟ್ಟ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸ್ಮರಣೆಗಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಸಮರ್ಪಿಸಿತು. ಪ್ರತಿ ವರ್ಷ ಈ ಸ್ಮಾರಕದಲ್ಲಿ ಜಿಲ್ಲಾಡಳಿತವು ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಇದನ್ನೂ ಓದಿ: ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿ ಕೆಎಲ್ಇ ಹಳೇ ವಿದ್ಯಾರ್ಥಿ: ಗೆಳೆಯರ ದುಃಖ