ಶಿವಮೊಗ್ಗ: ಜಗತ್ ಪ್ರಸಿದ್ದ ಜೋಗ ಜಲಪಾತ ನೋಡಲು ಪ್ರತೀ ವರ್ಷ ನೂರಾರು ಕಡೆಯಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಅದರಂತೆ, ಜೋಗ ಜಲಪಾತಕ್ಕೆ 2023-24ನೇ ಸಾಲಿನಲ್ಲಿ ವಾರ್ಷಿಕವಾಗಿ 4.83.516 ಜನ ಪ್ರವಾಸಿಗರು ಹಾಗೂ ಶಾಲಾ-ಕಾಲೇಜಿನ ಮಕ್ಕಳು ಭೇಟಿ ನೀಡಿದ್ದಾರೆ. ಅದೇ ರೀತಿ, ವಿದೇಶಿಗರು 538 ಜನ ಭೇಟಿ ನೀಡಿದ್ದಾರೆ.
ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ನಿರ್ದೇಶಕ ಧರ್ಮಪ್ಪ ಮಾತನಾಡಿದ್ದು, "ಜೋಗ ಜಲಪಾತಕ್ಕೆ ವಾರದ ಕೊನೆಯಲ್ಲಿ ಅಂದ್ರೆ ಶನಿವಾರ ಹಾಗೂ ಭಾನುವಾರದಂದು ಸುಮಾರು 5ರಿಂದ 10 ಸಾವಿರ ಪ್ರವಾಸಿಗರು ಆಗಮಿಸುತ್ತಾರೆ. ಇದು ಮಳೆಗಾಲ ಹಾಗೂ ರಜೆ ದಿನಗಳಲ್ಲಿ ಭೇಟಿ ನೀಡುವವರ ವಿವರ. ಅದೇ ಬೇಸಿಗೆ ಸಮಯದಲ್ಲಿ 1 ಸಾವಿರದಿಂದ 1.500 ಪ್ರವಾಸಿಗರು ಭೇಟಿ ನೀಡುತ್ತಾರೆ. ಇದೆಲ್ಲವೂ ಸೇರಿ ವಾರ್ಷಿಕವಾಗಿ 4.85.516 ಜನ ಭೇಟಿ ನೀಡುತ್ತಾರೆ" ಎಂದರು.
ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ 1.50 ಲಕ್ಷದಿಂದ 2 ಲಕ್ಷ ರೂ ಆದಾಯ ಬರುತ್ತದೆ. ಅದೇ ಉಳಿದ ಸಮಯದಲ್ಲಿ 25 ಸಾವಿರದಿಂದ 75 ಸಾವಿರ ತನಕ ಆದಾಯ ಬರುತ್ತದೆ ಎಂದು ತಿಳಿಸಿದರು.
ಜೋಗ ಜಲಪಾತದ ಆದಾಯ ಅದಕ್ಕೆ ಬಳಕೆ: ಜೋಗದಲ್ಲಿ ಸೆಕ್ಯೂರಿಟಿ ಗಾರ್ಡ್, ಗೇಟ್ ಕಾವಲು ಸೇರಿದಂತೆ ವಿವಿಧ ಕೆಲಸಗಳಿಗೆ ಸುಮಾರು 21 ಜನ ಇದ್ದಾರೆ. ಇವರೆಲ್ಲರೂ ಹೊರ ಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳಿಗೆ ವೇತನಕ್ಕೆ ಯಾವುದೇ ಹಣ ಸರ್ಕಾರದಿಂದ ಬರಲ್ಲ. ಜೋಗ ಜಲಪಾತ ನೋಡಲು ಬರುವವರ ಆದಾಯದಿಂದ ಸೆಕ್ಯೂರಿಟಿ, ಮೂಲ ಸೌಕರ್ಯ, ಭದ್ರತೆ, ಕುಡಿಯುವ ನೀರು ಒದಗಿಸಬೇಕಾಗಿದೆ ಎಂದು ಹೇಳಿದರು.
ಜೋಗ ಜಲಪಾತದಲ್ಲಿ ಚಿತ್ರದ ಶೂಟಿಂಗ್ ಸೇರಿದಂತೆ ಡ್ರೋನ್ ಹಾರಿಸಲು ಪ್ರತೀ ದಿನಕ್ಕೆ 25 ಸಾವಿರ ರೂ. ಪಾವತಿ ಮಾಡಬೇಕಿದೆ. ಚಿತ್ರೀಕರಣ ಮಾಡುವವರು ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿ, ಹಣ ಸಂದಾಯ ಮಾಡಿದರೆ, ಜಿಲ್ಲಾಧಿಕಾರಿಗಳ ಮೂಲಕ ಅವರಿಗೆ ಚಿತ್ರೀಕರಣಕ್ಕೆ ಅನುಮತಿ ಲಭ್ಯವಾಗುತ್ತದೆ. ಚಿತ್ರೀಕರಣ ನಡೆಸುವವರು ಸ್ಥಳೀಯ ಪೊಲೀಸರ ಹಾಗೂ ಅರಣ್ಯ ಇಲಾಖೆರವರಿಂದ ಪರಿಶೀಲನೆಗೆ ಒಳಗಾಗಿ ನಂತರ ಕ್ಯಾಮೆರಾ ಬಳಸಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಜೋಗ ಜಲಪಾತ ನೋಡೋದು ಇನ್ಮುಂದೆ ಬಲು ದುಬಾರಿ: ವೀಕ್ಷಣೆಗೆ ಎರಡು ಗಂಟೆ ಮಾತ್ರ ಅವಕಾಶ - Jog Falls entry price increase