ಆನೇಕಲ್ (ಬೆಂಗಳೂರು) : ಹೋಳಿ ಹಬ್ಬದ ರಜೆಯ ಖುಷಿಯಲ್ಲಿದ್ದ ಕಾರ್ಮಿಕರ ನಡುವೆ ನಡೆದ ಗಲಾಟೆ ಮೂವರ ಕೊಲೆಯಲ್ಲಿ ಅಂತ್ಯವಾದ ಘಟನೆ ಸರ್ಜಾಪುರ - ಬಾಗಲೂರು(ತಮಿಳುನಾಡು) ಮುಖ್ಯ ರಸ್ತೆಯ ತಿಂಡ್ಲು ಅಪಾರ್ಟ್ಮೆಂಟ್ವೊಂದರಲ್ಲಿ ಶನಿವಾರ ನಡೆದಿದೆ.
ಬಿಹಾರ ಮೂಲದ ಅನ್ಸು (22), ರಾಧೆಶ್ಯಾಮ್ (23), ಕನ್ಸರ್ ಸೇರಿ ಮೂವರು ಕೊಲೆಯಾಗಿದ್ದಾರೆ. ಇನ್ನು ಮೃತ ರಾಧೆಶ್ಯಾಮ್ ತಮ್ಮ ಬಿರಾದಾರ್ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಸೋನು ಮತ್ತು ಅವನ ಸ್ನೇಹಿತ ಕೊಲೆ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಂಡ್ಲು ಬಳಿಯ ಟಿವಿಎಸ್ ಕಲ್ಯಾಣ ಮಂಟಪದ ಹಿಂದಿನ ನಿರ್ಮಾಣ ಹಂತದ ಫೋರ್ ವಾಲ್ ಅವಿನ್ಯೂ ಕಟ್ಟಡದ ಮೂರನೇ ಮಹಡಿಯಲ್ಲಿ ಕೊಲೆ ನಡೆದಿದೆ. ಇವರು ವಿವಿಧ ಗುತ್ತಿಗೆದಾರರ ಬಳಿ ಮರದ ಕೆಲಸಮಾಡುವ ಕಾರ್ಮಿಕರಾಗಿದ್ದಾರೆ.
ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಶನಿವಾರ ರಾತ್ರಿ ಆರು ಮಂದಿ ಸ್ನೇಹಿತ ಪಾರ್ಟಿ ಮಾಡಿದ್ದರು. ಪಾರ್ಟಿಯ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದಿದೆ, ರಾಡ್ನಿಂದ ಮೂವರು ಉಳಿದ ಮೂವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಅವರಲ್ಲಿ ಓರ್ವ ತಪ್ಪೊಸಿಕೊಂಡು ಆಚೆಗೆ ಓಡಿ ಬಂದು ಜನರಿಗೆ ವಿಷಯ ತಿಳಿಸಿದ್ದಾನೆ. ಜನ ಮಹಡಿಗೆ ಹೋಗುವಷ್ಟರಲ್ಲಿ ಮೂವರು ಹತ್ಯೆಯಾಗಿ ಇಬ್ಬರು ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡ ಬಿರಾದಾರ್ ಸರ್ಜಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿ ವಿಚಾರಕ್ಕೆ ಗಲಾಟೆ: ಆರೋಪಿಗಳು ಮತ್ತು ಮೃತರು ಬಿಹಾರದ ಒಂದೇ ಗ್ರಾಮದ ವಾಸಿಗಳಾಗಿದ್ದು, ಇಲ್ಲಿ ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದರು. ಹೋಳಿ ಹಬ್ಬದ ಹಿನ್ನೆಲೆ ಕಾರ್ಮಿಕರಿಗೆ ಕಂಪನಿ ಮೂರು ದಿನ ರಜೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾರ್ಟಿ ಮಾಡಲು ಸ್ನೇಹಿತರನ್ನು ಆರೋಪಿಗಳು ಕರೆದಿದ್ದರು. ಪಾರ್ಟಿ ಮಾಡುವ ವೇಳೆ ಮೃತರಲ್ಲಿ ಓರ್ವ, ಆರೋಪಿಯ ತಂಗಿಗೆ ಫೋನ್ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದ. ಇದರಿಂದ ಗಲಾಟೆ ಉಂಟಾಗಿ ಅತಿರೇಕಕ್ಕೆ ಹೋಗಿದೆ ಬಳಿಕ ಪರಸ್ಪರರು ರಾಡ್, ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಪರಾರಿಯಾಗಿರುವ ಆರೋಪಿಗಳು ಪತ್ತೆಗೆ ನಾಲ್ಕು ತಂಡ ರಚಿಸಿದ್ದು, ಶೀಘ್ರದಲ್ಲೇ ಬಂಧಿಸಲಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಬಂಧನದ ವೇಳೆ ಹಲ್ಲೆಗೆ ಯತ್ನ: ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು, ಪೊಲೀಸರಿಗೂ ಗಾಯ