ಪೆರ್ನೆ, ತುಂಬೆಯಲ್ಲಿ ದನ ಕದ್ದು ವಧಿಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ
ದನ ಕಳವು ಮಾಡಿ ವಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Published : September 6, 2025 at 4:48 PM IST
ಬಂಟ್ವಾಳ(ದಕ್ಷಿಣ ಕನ್ನಡ): ತುಂಬೆ ಬಳಿ ಆಗಸ್ಟ್ 14ರಂದು ದನ ಕಳವು ಮಾಡಿ ವಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48) ಮತ್ತು ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೆರ್ನೆ ಸಮೀಪ ನಡೆದ ದನ ಕಳವು ಹಾಗೂ ಹತ್ಯೆ ಪ್ರಕರಣದಲ್ಲೂ ಈ ಆರೋಪಿಗಳು ಭಾಗಿಯಾಗಿರುವುದು ತಿಳಿದುಬಂದಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಕಳವು ಮಾಡಿ ಸಮೀಪದ ನೇತ್ರಾವತಿ ನದಿ ಬಳಿ ವಧಿಸಲಾಗಿತ್ತು. ನೇತ್ರಾವತಿ ನದಿಗೆ ಸಂಪರ್ಕಿಸುವ ಹಳ್ಳದ ಬದಿಯಲ್ಲಿ ಪೊದೆಗಳಿಂದ ಕೂಡಿದ್ದ ಪ್ರದೇಶದಲ್ಲಿ ದನವನ್ನು ವಧಿಸಿ ಮಾಂಸ ಕತ್ತರಿಸಿದ್ದ ಕುರುಹುಗಳು ಪತ್ತೆಯಾಗಿದ್ದವು. ಈ ಸಂಬಂಧ ದನದ ಮಾಲೀಕ ವಳವೂರು ನಡಿಬೆಟ್ಟು ನಿವಾಸಿ ಕಾರ್ತಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೆರ್ನೆಯ ಪ್ರಕರಣವಿದು: ಬಂಟ್ವಾಳ ಪೆರ್ನೆ ಗ್ರಾಮದದಲ್ಲಿ ಸೆ.4ರಂದು ರಾತ್ರಿ ಮನೆಯ ಬಳಿಯ ಹಟ್ಟಿಯಲ್ಲಿದ್ದ ಹಸುವನ್ನು ಕದ್ದೊಯ್ದು, ಹತ್ಯೆ ಮಾಡಲಾಗಿತ್ತು. ಮನೆ ಸಮೀಪ ಜಮೀನಿನಲ್ಲಿ ಅದರ ಅಂಗಾಂಗಗಳನ್ನು ಬಿಸಾಡಿರುವುದು ಕಂಡುಬಂದಿತ್ತು. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿಂದೂ ಸಂಘಟನೆಗಳು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದವು.
ವಿಚಾರಣೆ ವೇಳೆ ಮತ್ತೊಂದು ಕೃತ್ಯ ಬಯಲಿಗೆ: ಶುಕ್ರವಾರ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದನ ಕಳವು, ಹತ್ಯೆ ಪ್ರಕರಣದಲ್ಲೂ ಇವರು ಭಾಗಿಯಾಗಿರುವುದು ತಿಳಿದುಬಂದಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಪ್ರಕಟಣೆ: ಆಗಸ್ಟ್ 14 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತುಂಬೆ ಬಳಿ ಜಾನುವಾರು ಕಳವಾಗಿತ್ತು. ಅದರ ಅಂಗಾಂಗಗಳು ಮರುದಿನ ದಿನ ಅಂದರೆ ಆಗಸ್ಟ್ 15 ರಂದು ಸಮೀಪದಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ:125/2025, ಕಲಂ:303(2), BNS, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಈ ಸಂಬಂಧ ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48) ಮತ್ತು ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಎಂಬುವರನ್ನು ಸೆಪ್ಟೆಂಬರ್ 5 ರಂದು ಬಂಧಿಸಲಾಗಿದೆ. ಇವರನ್ನು ವಿಚಾರಣೆಗೊಳಪಡಿಸಿದಾಗ ಸೆ. 4 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರ:76/2025, ಭಾರತೀಯ ನ್ಯಾಯ ಸಂಹಿತ (BNS), 2023 (U/s-331(4), 305); ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ-2020 (U/s-4,5) ಪ್ರಕರಣದಲ್ಲೂ ಭಾಗಿಯಾಗಿರುವುದು ತಿಳಿದುಬಂದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.
ಇದನ್ನೂ ಓದಿ: ಉಡುಪಿ: ಮಾಸ್ಕ್ ಹಾಕಿ ಸ್ಕಾರ್ಪಿಯೋ ವಾಹನದಲ್ಲಿ ಗೋ ಕಳ್ಳತನ ಆರೋಪ; ನಟೋರಿಯಸ್ ಕ್ರಿಮಿನಲ್ಸ್ ಬಂಧನ
ಇದನ್ನೂ ಓದಿ: ಗರ್ಭ ಧರಿಸಿದ್ದ ಗೋ ಹತ್ಯೆ: 46 ದಿನ, 5 ರಾಜ್ಯ, 11 ಸಾವಿರ ಕಿ.ಮೀ ಸುತ್ತಾಡಿ ಆರೋಪಿಗಳನ್ನು ಬಂಧಿಸಿದ ಪೊಲೀಸರು!

