ಹಾವೇರಿ: ನೀಟ್ ಪರೀಕ್ಷೆ ಬರೆದು ವೈದ್ಯೆಳಾಗಿ ಸೇವೆ ಸಲ್ಲಿಸಬೇಕು ಎಂಬ ನಿರ್ಧಾರ ಮಾಡಿದ್ದ ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿಯೊಬ್ಬಳು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿದ್ದು, ಪೋಷಕರು ಸೇರಿದಂತೆ ನಮ್ಮ ಹಾವೇರಿ ಮನೆ ಮಗಳಿಗೆ ಆರ್ಥಿಕ ಸಹಾಯ ಮಾಡುವಂತೆ ಸ್ಥಳೀಯ ಆಟೋ ಚಾಲಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಮೇಘನಾ ಕುಳೇನೂರು (19) ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವ ಬಡ ವಿದ್ಯಾರ್ಥಿನಿ. ಪಿಯುಸಿಯಲ್ಲಿ ಕಾಲೇಜಿಗೆ ಟಾಫರ್ ಆಗಿದ್ದ ಮೇಘನಾ, ನೀಟ್ ಪರೀಕ್ಷೆ ಬರೆದು ಗದಗ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಸಹ ಪಡೆದಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನೇ ತಿಂದರೂ ಆಗಲ್ಲ ಜೀರ್ಣ: ತನ್ನನ್ನು ಕಾಡುತ್ತಿರುವ ಅನಾರೋಗ್ಯದ ಬಗ್ಗೆ ಮೇಘನಾ ಒಂದು ದಿನ ವೈದ್ಯರ ಬಳಿ ತಪಾಸಣೆಗೆ ತೆರಳಿದ್ದಾಗ ಈ ಜೀರ್ಣಕ್ರಿಯೆ ಸಮಸ್ಯೆ (SLA) ಇರುವುದು ಗೊತ್ತಾಗಿದೆ. ಯಾವುದೇ ಪದಾರ್ಥ ಸೇವಿಸಿದರೂ ಅದು ಜೀರ್ಣವಾಗದಿರುವುದು ಈ ರೋಗದ ಪ್ರಥಮ ಗುಣಲಕ್ಷಣವಾಗಿದೆ. ಇಂತಹದ್ದೊಂದು ಸಮಸ್ಯೆಯಿಂದ ಬಳಲುತ್ತಿರುವ ಮೇಘನಾ, ಈಗ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ. ಬಡತನದ ನಡುವೆ ಓದಿ ಬೆಳೆದ ಮಗಳ ಪರಿಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ತಿಂಗಳ ಔಷಧದ ಖರ್ಚು 25 ಸಾವಿರ: ಪುತ್ರಿಯ ತಿಂಗಳ ಔಷಧಿಯ ಖರ್ಚೆ 25 ಸಾವಿರ ರೂ. ಬರುತ್ತಿದೆ. ಸತತ 12 ತಿಂಗಳು ಔಷಧದ ಜೊತೆಗೆ ವೈದ್ಯರ ಸೇವೆ ಸಿಕ್ಕರೆ ನಮ್ಮ ಮಗಳು ಮೊದಲಿನಂತೆ ಆಗುತ್ತಾಳೆ. ಆದರೆ, ಅದಕ್ಕೆ ಲಕ್ಷಾಂತರ ರೂಪಾಯಿ ಹಣ ಬೇಕು. ನಮ್ಮ ಕಷ್ಟ ನೋಡಲಾರದೇ ಚಿಕ್ಕಂದಿನಿಂದಲೂ ಪುತ್ರಿಯನ್ನು ಶಾಲೆಗೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕರು ಇದೀಗ ಅವಳ ಆರೈಕೆಗಾಗಿ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಹಾವೇರಿ ಮನೆ ಮಗಳಿಗೆ ಸಹಾಯ ಮಾಡುವಂತೆ ಅವರಿವರನ್ನು ಕೇಳುತ್ತಿದ್ದಾರೆ. ಕಳೆದೊಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ಸಮಸ್ಯೆ ಪುತ್ರಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈಗ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಆದರೆ, ಮುಂದಿನ ಚಿಕಿತ್ಸೆಗಾಗಿ ತಮ್ಮ ಬಳಿ ಅಷ್ಟು ಹಣವಿಲ್ಲದ ಕಾರಣ, ದಾನಿಗಳು ತಮ್ಮ ಪುತ್ರಿಯ ಆರೋಗ್ಯಕ್ಕೆ ಆರ್ಥಿಕ ಸಹಾಯ ಮಾಡುವಂತೆ ಮೇಘನಾಳ ಫೋಷಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೇಕಿದೆ ನೆರವಿನ ಹಸ್ತ: ಬಡತನ ಇದ್ದರೂ ಸಹ ಓದುವ ಛಲ ಇರುವ ಮೇಘನಾ ಎಸ್ಎಸ್ಎಲ್ಸಿಯಲ್ಲಿ ಟಾಪರ್, ಪಿಯುಸಿಯಲ್ಲಿ ಶೇ.92ರಷ್ಟು ಅಂಕ ಪಡೆದು ಕಾಲೇಜಿಗೆ ಟಾಪರ್ ಆಗಿದ್ದಾಳೆ. ನಂತರ ನೀಟ್ ಪರೀಕ್ಷೆಯಲ್ಲಿ 587 ಅಂಕ ಪಡೆದು ಗದಗ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೂಡ ಪಡೆದುಕೊಂಡಿದ್ದಳು . ಇನ್ನೇನು ಕಾಲೇಜು ಪ್ರವೇಶ ಪಡೆಯಬೇಕಿತ್ತು, ಅಷ್ಟರಲ್ಲಿ ಅನಾರೋಗ್ಯ ಕಾಡತೊಡಗಿತು. ಜೀರ್ಣಕ್ರಿಯೆ ಕಾಯಿಲೆ ಇರುವುದು ಗೊತ್ತಾದ ಬಳಿಕ ಮೇಘನಾ ಚಿಕಿತ್ಸೆಗಾಗಿ ಸಾಕಷ್ಟು ಪರದಾಡುತ್ತಿದ್ದಾಳೆ. ಈಗಾಗಲೇ ತಂದೆ - ತಾಯಿ ಸಾಕಷ್ಟು ಹಣವನ್ನ ಆಸ್ಪತ್ರೆಗೆ ಖರ್ಚು ಮಾಡಿದ್ದಾರೆ. ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಅವಳ ಸಮಸ್ಯೆ ಅರಿತ ಆಟೋ ಚಾಲಕರ ಸಂಘವು ತಮ್ಮ ಕೈಲಾದಷ್ಟು ಸಹಾಯ ಮಾಡಿದೆ. ಜಿಲ್ಲೆಯ ದಾನಿಗಳು ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುವಂತೆ ಆಟೋ ಚಾಲಕ ಗುಡ್ಡಪ್ಪ ಬರಡಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಛಲ ಬಿಡದೇ ಓದುಬೇಕು ಎನ್ನುವುದು ವಿದ್ಯಾರ್ಥಿನಿಯ ಆಸೆ: ಕಳೆದೊಂದು ವರ್ಷದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ತನಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಈಗ ಹುಬ್ಬಳ್ಳಿಯ ವೈದ್ಯರ ಬಳಿ ತೋರಿಸುತ್ತಿದ್ದು, ಚೇತರಿಕೆಯಾಗುತ್ತಿರುವೆ. ಆಸ್ಪತ್ರೆಗಾಗಿ ಪ್ರತಿ ಎರಡು ತಿಂಗಳಿಗೆ 50 ಸಾವಿರ ಖರ್ಚು ಬರುತ್ತಿದೆ. ಈ ಹಣವನ್ನು ಕುಟುಂಬದಿಂದ ಭರಿಸಲಾಗುತ್ತಿಲ್ಲ. ಆಟೋ ಚಾಲಕರೇ ಧೈರ್ಯ ತುಂಬಿದ್ದು, ದಿನದಿಂದ ದಿನಕ್ಕೆ ಚೇತರಿಸಿಕೊಳಳುತ್ತಿರುವೆ. ಮತ್ತೆ ನೀಟ್ ಪರೀಕ್ಷೆ ಬರೆದು ನಾನು ಡಾಕ್ಟರ್ ಆಗಬೇಕು, ಬಡವರ ಸೇವೆ ಮಾಡಬೇಕು ಅನ್ನೋದು ನನ್ನ ಆಸೆ ಎನ್ನುತ್ತಾರೆ ಜೀರ್ಣಕ್ರಿಯೆ ಕಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿನಿ ಮೇಘನಾ.