ಬೆಂಗಳೂರು: ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಕೇವಲ ತಮ್ಮ ಅಧಿಕಾರಕ್ಕಾಗಿ ನಮ್ಮ ಪವಿತ್ರ ಸಂವಿಧಾನವನ್ನೇ ಆಗ ಬಲಿ ಕೊಡಲಾಗಿತ್ತು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
“ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಬೆಂಗಳೂರು” ವತಿಯಿಂದ ಇಂದು ಟೌನ್ ಹಾಲ್ ನಲ್ಲಿ “1975ರ ತುರ್ತು ಪರಿಸ್ಥಿತಿ 50ನೇ ವರ್ಷ-ಕರಾಳ ದಿನಗಳು” ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದರು. ತಮ್ಮ ನಿರಂಕುಶ ಅಧಿಕಾರಕ್ಕಾಗಿ ಸ್ವಾತಂತ್ರ್ಯದ ಧ್ವನಿಗಳ ಕೊರಳನ್ನು ಹಿಸುಕಿ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾಯತ್ತತೆ, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ತಿಳಿಸಿದರು.

ಅಧಿಕಾರ ಲಾಲಸೆಯ ಹಿಟ್ಲರ್ಶಾಹಿ ದುರಾಡಳಿತವು ಇಂದಿಗೂ ಆಕ್ರೋಶದ ಕಿಚ್ಚು ಹಚ್ಚುವಂತಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರದಲ್ಲಿ ಉಳಿಯಬೇಕೆಂಬ ಒಂದೇ ಕಾರಣವು ತುರ್ತು ಪರಿಸ್ಥಿತಿ ಹೇರುವಿಕೆಯ ಹಿಂದೆ ಇತ್ತು ಎಂದು ಹೇಳಿದರು.

ದೇಶದ ಜನರ ಎಲ್ಲ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿತ್ತು: ವಾಕ್ ಸ್ವಾತಂತ್ರ್ಯ, ರಾಜಕೀಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಪೂರ್ಣ ಅಂಕುಶ ಹಾಕಲಾಗಿತ್ತು. ಪ್ರಜಾಪ್ರಭುತ್ವದ ಕತ್ತು ಹಿಸುಕಿ ಅಟ್ಟಹಾಸ ಮೆರೆಯಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಧಿಕಾರಕ್ಕಾಗಿ ಹೀಗೆ ಮಾಡಿತ್ತು. ಇದು ನಿಜವಲ್ಲದಿದ್ದರೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನದ ಆಶೋತ್ತರಗಳ ಕತ್ತು ಹಿಸುಕಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರುವ ಪ್ರಮಾದವನ್ನು ಕಾಂಗ್ರೆಸ್ ಮಾಡುತ್ತಿರಲಿಲ್ಲ ಎಂದರು.

ಆರ್ಥಿಕ ಚಿಂತಕ ಎಸ್.ಗುರುಮೂರ್ತಿ ಮಾತು: ಅಂಕಣಕಾರ ಮತ್ತು ಆರ್ಥಿಕ ಚಿಂತಕ ಎಸ್.ಗುರುಮೂರ್ತಿ ಅವರು ಮಾತನಾಡಿ, 2024ರಲ್ಲಿ ರಾಹುಲ್ ಗಾಂಧಿಯವರು ಗೆದ್ದ ಬಳಿಕ ಸಂವಿಧಾನದ ಪುಸ್ತಕ ಪ್ರದರ್ಶಿಸಲು ಆರಂಭಿಸಿದರು ಹಾಗೂ ಸಂವಿಧಾನವನ್ನು ತಾವು ರಕ್ಷಿಸಲು ಬಯಸುವುದಾಗಿ ಹೇಳಿದರು.
ರಾಹುಲ್ ಗಾಂಧಿಗೆ ಸಂವಿಧಾನದ ಬಗ್ಗೆ ಮಾತನಾಡಲು ನೈತಿಕ ಹಕ್ಕಿದೆಯಾ?: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದೇ ಸಂವಿಧಾನವನ್ನು ಅವರ ಅಜ್ಜಿ ಕಡೆಗಣಿಸಿದ್ದು ಅವರಿಗೆ ಗೊತ್ತಿರಲಿಲ್ಲ. ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ಸಾಂವಿಧಾನಿಕ ಹಕ್ಕು, ಸ್ವಾತಂತ್ರ್ಯದ ಬಗ್ಗೆ ಮಾತನಾಡಲು ನೈತಿಕ- ಕಾನೂನಾತ್ಮಕ ಹಕ್ಕಿದೆಯೇ ಎಂದು ಅವರು ಪ್ರಶ್ನಿಸಿದರು.

ಜೂನ್ 25 ಅನ್ನು ಸಂವಿಧಾನದ ಹತ್ಯಾ ದಿನ ಎಂದು ಪರಿಗಣಿಸಲಾಗಿದೆ. ಅದೊಂದು 18 ತಿಂಗಳ ಆಘಾತವಲ್ಲ; ಒಂದೇ ಕುಟುಂಬದ ಸರ್ವಾಧಿಕಾರಕ್ಕೆ ಅವಕಾಶ ಮಾಡಿಕೊಡುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು ಎಂದು ವಿವರಿಸಿದರು. ಜಯಪ್ರಕಾಶ್ ನಾರಾಯಣ್ ಅವರಂಥ ಮಹಾನ್ ನಾಯಕರು ಮತ್ತು ಜನಸಾಮಾನ್ಯರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದ್ದರು ಎಂದು ಅವರು ತಿಳಿಸಿದರು.

ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ಸೇತರ ರಾಜಕೀಯ ನೇತಾರರು ತುರ್ತು ಪರಿಸ್ಥಿತಿಗೆ ಕಾರಣಕರ್ತರಾದ ಕಾಂಗ್ರೆಸ್ ಮುಖಂಡರನ್ನು ಶಿಕ್ಷಿಸುವ ನಿರೀಕ್ಷೆ ಹುಸಿಯಾಯಿತು. ಬಳಿಕ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತು. ನಂತರದ 34 ವರ್ಷಗಳಲ್ಲಿ 28 ವರ್ಷಗಳ ಕಾಲ ತುರ್ತುಪರಿಸ್ಥಿತಿಗೆ ಕಾರಣಕರ್ತರೇ ದೇಶವನ್ನಾಳಿದರು. ಅವರು ಜನರ ಮತ್ತು ಸಂಸ್ಥೆಗಳ ಕಹಿ ನೆನಪನ್ನು ಅಳಿಸಲು ಶಕ್ತರಾದರು ಎಂದು ನುಡಿದರು.

ಆಗ ಕೇವಲ ಇಬ್ಬರು ಬಿಜೆಪಿ ಸಂಸದರು ಇದ್ದರು: ನಂತರದ ದಿನಗಳಲ್ಲಿ ರಾಜೀವ್ ಗಾಂಧಿಯವರು 415 ಸಂಸದರೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಬಿಜೆಪಿ ಕೇವಲ ಇಬ್ಬರು ಸಂಸದರನ್ನು ಹೊಂದಿತ್ತು. ಬಿಜೆಪಿ ಮೃತಪಟ್ಟಿದ್ದು, ಅದನ್ನು ಒಯ್ಯಲು 4 ಜನ ಬೇಕಿದೆ. ಆದರೆ, ಇಬ್ಬರೇ ಇದ್ದಾರೆ ಎಂದು ವ್ಯಂಗ್ಯವಾಡಿದ್ದರು. ಅಗತ್ಯವಿದ್ದರೆ ಮತ್ತೆ ತುರ್ತು ಪರಿಸ್ಥಿತಿ ಹೇರಲು ಸಿದ್ಧವೆಂದು ರಾಜೀವ್ ಗಾಂಧಿಯವರು ಹೇಳಿದ್ದರೆಂದು ನೆನಪಿಸಿದರು.
ವಿಶ್ರಾಂತ ಕುಲಪತಿ ವಿಷ್ಣುಕಾಂತ್ ಚಟಪಲ್ಲಿ, ಕೇಂದ್ರ ಲಲಿತ ಕಲಾ ಅಕಾಡೆಮಿ ಮತ್ತು ರಾಜ್ಯ ಲಲಿತ ಕಲಾ ಅಕಾಡೆಮಿಗಳ ಮಾಜಿ ಅಧ್ಯಕ್ಷ ಮತ್ತು ಕಲಾವಿದ ಚಿ.ಸು. ಕೃಷ್ಣ ಶೆಟ್ಟಿ ಅವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಪೈಶಾಚಿಕ ಘಟನಾವಳಿಗಳನ್ನು ನೆನಪಿಸಲಾಯಿತು. ಆರೆಸ್ಸೆಸ್ ಸ್ವಯಂಸೇವಕರು, ವಿವಿಧ ಪಕ್ಷಗಳ ಕಾರ್ಯಕರ್ತರು ಹೋರಾಟದಲ್ಲಿ ಭಾಗವಹಿಸಿದ್ದ ಕುರಿತ ಪ್ರದರ್ಶನ ಏರ್ಪಡಿಸಲಾಗಿತ್ತು.

ಇದನ್ನು ಓದಿ:ಹೋರಾಟ ಮಾಡಿದವರು ನಿರುದ್ಯೋಗಿಗಳು: ಬಿಜೆಪಿ ಹೋರಾಟಗಾರರ ವಿರುದ್ಧ ಗುಡುಗಿದ ಶಾಸಕ ಬಸವರಾಜ್ ಶಿವಗಂಗಾ
'ದೇವನಹಳ್ಳಿಯ 3 ಗ್ರಾಮಗಳ 495 ಎಕರೆಗೆ ವಿನಾಯಿತಿ, ಇನ್ಮುಂದೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಮಾಡಲ್ಲ'